ಶಿರಾ: ನಗರದ ವಿವೇಕಾನಂದ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಯೋಗದಿನದ ಅಂಗವಾಗಿ ಶನಿವಾರ ಸಾಮೂಹಿಕ ಯೋಗಾಭ್ಯಾಸ ನಡೆಯಿತು.
ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ, ತಾಲ್ಲೂಕು ಆಡಳಿತ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 6ರಿಂದ 7.30 ರವರೆಗೆ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಆಕ್ಷೇಪ: ವಿಶ್ವದಲ್ಲಿ ಯೋಗಕ್ಕೆ ಮಾನ್ಯತೆ ನೀಡಿ ವಿಶ್ವ ಯೋಗ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆದರೆ ಶಿರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಟಿ.ಬಿ.ಜಯಚಂದ್ರ ಹಾಗೂ ನಗರಸಭೆ ಅಧ್ಯಕ್ಷ ಜೀಷಾನ್ ಮೆಹಮೂದ್ ಅವರು ಗೈರಾಗಿರುವುದು ವಿಷಾದನೀಯ. ಕ್ಷೇತ್ರ ಶಿಕ್ಷಣಾಧಿಕಾರಿ ಹೊರತುಪಡಿಸಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ, ನಗರಸಭೆ ಪೌರಾಯುಕ್ತ ಸೇರಿದಂತೆ ಅಧಿಕಾರಿಗಳ ಗೈರಾಗಿದ್ದಾರೆ ಎಂದು ಯೋಗಾಸಕ್ತರು ಆಕ್ಷೇಪ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ಕೃಷ್ಣಪ್ಪ, ಪತಂಜಲಿ ಯೋಗ ಶಿಕ್ಷಣ ಸಮಿತಿ ಕಾರ್ಯದರ್ಶಿ ಆರ್.ಲಕ್ಷ್ಮಣ್, ನಗರಸಭೆ ಸದಸ್ಯ ಎಸ್.ಎಲ್.ರಂಗನಾಥ್, ಫಯಾಜ್ ಖಾನ್, ತಾ.ಪಂ ಸಹಾಯಕ ನಿರ್ದೇಶಕ ಕನಕಪ್ಪ, ಮಂಜುನಾಥ್, ಯೋಗ ಶಿಕ್ಷಕರಾದ ಪಿ.ಸಿದ್ದಣ್ಣ, ಕವಿತಾ ಲಕ್ಷ್ಮಣ್, ಹೇಮಂತ್ ಕುಮಾರ್, ಮಮತಾ, ಲೀಲಾವತಿ, ರಮ್ಯಾ, ಶೇಖರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.