ADVERTISEMENT

ಆಡಳಿತಕ್ಕೆ ಬಿಜೆಪಿ ಅನರ್ಹ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 8:20 IST
Last Updated 10 ಫೆಬ್ರುವರಿ 2012, 8:20 IST

ಬೈಂದೂರು: `ರಾಜ್ಯದ ಮಾನವನ್ನು ಹರಾಜು ಹಾಕಿರುವ ಬಿಜೆಪಿ ಅಧಿಕಾರ ನಡೆಸುವ ಅರ್ಹತೆ ಕಳೆದುಕೊಂಡಿದೆ. ಪಕ್ಷವು ಅಧಿಕಾರ ತ್ಯಜಿಸಿ, ಹೊಸ ಜನಾದೇಶಕ್ಕೆ ಅವಕಾಶ ಕಲ್ಪಿಸಬೇಕು~ ಎಂದು ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಕೆ.ಗೋಪಾಲ ಪೂಜಾರಿ ಆಗ್ರಹಿಸಿದರು.

ಬೈಂದೂರು ಕ್ಷೇತ್ರ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸಭೆಯಲ್ಲಿ ನಡೆದ ವಿದ್ಯಮಾನದ ವಿರುದ್ಧ ಗುರುವಾರ ಇಲ್ಲಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಅವರು  ಮಾತನಾಡಿದರು.

`ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೇರಿದ ಬಿಜೆಪಿ ಕಳೆದ ನಾಲ್ಕು ವರ್ಷಗಳುದ್ದಕ್ಕೆ ಭ್ರಷ್ಟಾಚಾರ, ದುರಾಡಳಿತ, ಹಗರಣಗಳ ಮೂಲಕ ದೇಶದ ಅತ್ಯಂತ ಕೆಟ್ಟ ಸರ್ಕಾರವೆಂಬ ಕುಖ್ಯಾತಿ ಸಂಪಾದಿಸಿದೆ. ಈ ಅವಧಿಯಲ್ಲಿ ಅದರ ಮುಖ್ಯಮಂತ್ರಿ ಸಹಿತ ದಾಖಲೆ ಸಂಖ್ಯೆಯ ಸಚಿವರು ಭ್ರಷ್ಟಾಚಾರ ಮತ್ತು ಅನೈತಿಕ ರ್ತನೆಯ ಕಾರಣದಿಂದ ಅಧಿಕಾರ ಕಳೆದುಕೊಂಡುದಲ್ಲದೆ ಜೈಲು ಸೇರಿದರು.

ಅದೆಲ್ಲವನ್ನು ಮೀರಿಸುವಂತೆ ಒಂದೇ ದಿನ ಮೂವರು ಸಚಿವರು ವಿಧಾನಸಭೆಯನ್ನು ತಮ್ಮ ಕಾಮುಕ ಪ್ರವೃತ್ತಿಗೆ ಬಳಸಿಅದರ ಪಾವಿತ್ರ್ಯ ಕೆಡಿಸಿದರು~ ಎಂದರು.

`ದೇಶದ ಧರ್ಮ, ಸಂಸ್ಕೃತಿಯ ಗುತ್ತಿಗೆ ಹಿಡಿದವರಂತೆ ಆಡುವ ಬಿಜೆಪಿಯ ನಿಜ ಬಣ್ಣ ಮತ್ತೆ ಬಯಲಾಗಿದೆ. ಬ್ಲೂಫಿಲಂ ಘಟನೆ ನಾಯಕರ ನಿರ್ಲಜ್ಜ ನಡವಳಿಕೆ ಮತ್ತು ಆಷಾಡಭೂತಿತನಕ್ಕೆ ಹಿಡಿದ ಕನ್ನಡಿ. ಉನ್ನತ ಪರಂಪರೆಯ ಕನ್ನಡ ನಾಡಿಗೆ ಈ ಸರ್ಕಾರ ಒಂದು ಶಾಪ. ಇದು ತೊಲಗದಿದ್ದರೆ ಕನ್ನಡಿಗರು ತಲೆಯೆತ್ತಿ ತಿರುಗದಂತಾಗುತ್ತದೆ~ ಎಂದರು.

`ಸಣ್ಣಪುಟ್ಟ ಘಟನೆಗಳ ಸಂದರ್ಭ ಕಾನೂನು ಕೈಗೆತ್ತಿಕೊಂಡು ನೈತಿಕ ಪೊಲೀಸ್‌ಗಿರಿ ಮೂಲಕ ಹಿಂಸಾಚಾರಕ್ಕಿಳಿಯುವ ಬಿಜೆಪಿ, ಪರಿವಾರ ಕಾಲಡಿಯ ಕೊಳಕಿಗೆ ಪ್ರತಿಕ್ರಿಯಿಸಲಾರದ ದುಃಸ್ಥಿತಿ ತಲಪಿದೆ~ ಎಂದು ಲೇವಡಿಮಾಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳಾದ ಎಸ್. ರಾಜು ಪೂಜಾರಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಎಸ್. ಮದನ ಕುಮಾರ್, ಎಸ್. ವಾಸುದೇವ ಯಡಿಯಾಳ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕರ್ತರು ಕೆಲಕಾಲ ಹೆದ್ದಾರಿ ತಡೆ ನಡೆಸಿ, ಮೂವರು ಕಳಂಕಿತ ಸಚಿವರ ಪ್ರತಿಕೃತಿ ದಹಿಸಿದರು. ನಾಡ ಕಚೇರಿಗೆ ತೆರಳಿ ವಿಶೇಷ ತಹಸಿಲ್ದಾರ್ ಲಾಲಂಕಿ ರವಿ ಮನವಿ ಸಲ್ಲಿಸಿದರು.

ಕೆಪಿಸಿಸಿ ಸದಸ್ಯರಾದ ಬಿ. ರಘುರಾಮ ಶೆಟ್ಟಿ, ಎಚ್. ಮಂಜಯ್ಯ ಶೆಟ್ಟಿ, ಪ್ರಸನ್ನಕುಮಾರ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಪಿ.ಎಲ್.ಜೋಸ್, ಸಂತೋಷಕುಮಾರ ಶೆಟ್ಟಿ, ದೀಪಕ್‌ಕುಮಾರ ಶೆಟ್ಟಿ, ಸತೀಶ ಎಂ. ನಾಯಕ್, ಎಂ. ವಿನಾಯಕ ರಾವ್, ಎಸ್. ಸುಬ್ರಾಯ ಶೇರುಗಾರ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.