ADVERTISEMENT

ಆದಷ್ಟು ಬೇಗ ಈ ಸರ್ಕಾರ ಕಿತ್ತು ಹಾಕಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 9:05 IST
Last Updated 22 ಫೆಬ್ರುವರಿ 2011, 9:05 IST

ಉಡುಪಿ: ಹಗರಣಗಳ ಸರಮಾಲೆಯನ್ನೇ ಹೊಂದಿರುವ ರಾಜ್ಯ ಬಿಜೆಪಿ ಸರ್ಕಾರ ನೈತಿಕತೆ ಮೇಲೆ ಆಡಳಿತ ನಡೆಸುವುದಾದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕು. ಆದರೆ ಅವರಂತಹ ಮರ್ಯಾದೆಗೆಟ್ಟ, ಲಜ್ಜೆಗೇಡಿ ಮುಖ್ಯಮಂತ್ರಿಗಳನ್ನು ನಾನಂತೂ ನೋಡಿಲ್ಲ ಎಂದು ಹಿರಿಯ ರಾಜಕಾರಣಿ ಹಾಗೂ ಜೆಡಿಎಸ್ ಮುಖಂಡ ಎಸ್.ಬಂಗಾರಪ್ಪ ಇಲ್ಲಿ ಕಟುವಾಗಿ ಟೀಕಿಸಿದರು.

ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ಏನು ಬೇಕಾದರೂ ಹೇಳಲಿ, ತಾವಂತೂ ರಾಜೀನಾಮೆ ಕೊಡಲೇಬಾರದು ಎಂದು ಅವರು ಕುರ್ಚಿಗೆ ಅಂಟಿಕೊಂಡು ಕುಳಿತಿದ್ದಾರೆ, ಯಾವುದೇ ಸರ್ಕಾರ, ಮುಖ್ಯಮಂತ್ರಿಯಾಗಲಿ ಸಾರ್ವಜನಿಕರ ಟೀಕೆಗೆ ಸ್ಪಂದಿಸುವ ಗುಣ ಹೊಂದಿರಬೇಕು, ಆದರೆ ಈ ಸರ್ಕಾರದಲ್ಲಿ ಅದು ಕಾಣುತ್ತಿಲ್ಲ ಎಂದು ಲೇವಡಿ ಮಾಡಿದರು.

ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ಒಂದೋ ಚುನಾವಣೆಗೆ ಹೋಗುತ್ತೇನೆ ಇಲ್ಲವೇ ಬಿಜೆಪಿ ಒಡೆದು ಬೇರೆ ಹೋಗುತ್ತೇನೆ ಎಂದು  ಯಡಿಯೂರಪ್ಪ ಹೈಕಮಾಂಡ್ ಅವರನ್ನೇ ಹೆದರಿಸಿ ಇಟ್ಟಿದ್ದಾರೆ. ಅದರಲ್ಲಿ ಅನುಮಾನವೇ ಬೇಡ. ಅಲ್ಲದೇ ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ಹೈಕಮಾಂಡ್‌ನಷ್ಟು ಗಟ್ಟಿಯಲ್ಲ, ಗಡ್ಕರಿ ದುರ್ಬಲ ಹೈಕಮಾಂಡ್. ಬಿಜೆಪಿ   ಇಡೀ ರಾಜ್ಯವನ್ನೇ ಕೊಳ್ಳೆ ಹೊಡೆಯುತ್ತಿದ್ದರೂ ಅದನ್ನು ನೋಡಿಕೊಂಡುಆ ಪಕ್ಷದ ಹೈಕಮಾಂಡ್ ಸುಮ್ಮನಿದೆ ಎಂದರೆ ಏನರ್ಥ? ಎಂದು ಅವರು ಪ್ರಶ್ನಿಸಿದರು.

ಎಷ್ಟು ಶೀಘ್ರವಾಗಿ ಈ ಸರ್ಕಾರವನ್ನು ಕಿತ್ತೊಗೆಯಲು ಸಾಧ್ಯವೋ ಅಷ್ಟು ಬೇಗನೇ ಕಿತ್ತು ಹಾಕಿ ಎಂದು ಅವರು ಕರೆ ನೀಡಿದರು. ಲೋಕಾಯುಕ್ತರ ವರದಿ, ನ್ಯಾಯಾಲಯದ ಮುಂದೆ ರಾಜ್ಯ ಸರ್ಕಾರದ ಭವಿಷ್ಯ ನಿಂತಿದೆ. ಆದರೆ ಯಾವುದೇ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಕೆಲಕಾಲ ಕಾಯಬೇಕಾಗುತ್ತದೆ.ಹೀಗಾಗಿ ನಾವು ಅಲ್ಲಿಯವರೆಗೆ ಕಾಯಬೇಕಾಗಿದೆ, ತಮ್ಮ ಪ್ರಕಾರ ಈ ಸರ್ಕಾರ ಉಳಿಯಲು ಸಾಧ್ಯವಿಲ್ಲ, ಸರ್ಕಾರ ಕೂಡ ದಿನ ದೂಡುತ್ತಿದೆ ಎಂದರು.

ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ಹಗರಣಗಳ ಬಗ್ಗೆ ಸಾಕಷ್ಟು ದಾಖಲೆಗಳನ್ನು ಬಹಿರಂಗಪಡಿಸುತ್ತಲೇ ಬಂದಿದ್ದಾರೆ. ಆದರೆ ಆ ಕೆಲಸವನ್ನು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಮಾಡುತ್ತಿಲ್ಲ ಎಂದರು. ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಕಷ್ಟ: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಾನ ಹೊಂದಾಣಿಕೆ ಸಾಧ್ಯತೆ ತಮಗೆ ಕಂಡು ಬರುತ್ತಿಲ್ಲ. ಅಷ್ಟಕ್ಕೂ ಅದು ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೂ ಆ ವಿಚಾರ ಸುಲಭವಲ್ಲ. ಆದರೆ ಚುನಾವಣೆ ನಂತರ ಬಿಜೆಪಿಯನ್ನು ದೂರವಿಟ್ಟು ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ಪರಸ್ಪರ ಕೈಜೋಡಿಸಿ ಸರ್ಕಾರ ರಚನೆ ಮಾಡುವುದು ತಪ್ಪೇ   ನಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಲೆ ಏರಿಕೆ-ಕೇಂದ್ರ ಕಣ್ಮುಚ್ಚಿ ಕುಳಿತಿದೆ: ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಏರಿದ ಬೆಲೆ ತಾನಾಗಿಯೇ ಇಳಿಯಬೇಕು ಎನ್ನುವ ನಿರೀಕ್ಷೆಯಲ್ಲಿ ಕೇಂದ್ರ ಇದ್ದ ಹಾಗಿದೆ. ಮನಮೋಹನ್ ಸಿಂಗ್ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರು ಯುಪಿಎ ಸರ್ಕಾರಕ್ಕೆ ದೊಡ್ಡ ಪೆಟ್ಟು ನೀಡಲಿದ್ದಾರೆ ಎಂದರು.

ನಾಗಾರ್ಜುನ ವಿರುದ್ಧ ಹೋರಾಡಬೇಕು:
ಯುಪಿಸಿಎಲ್ ಯೋಜನೆಯಿಂದಾಗಿ ಈ ಭಾಗದ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಆ ಯೋಜನೆಯ ನಿಯಮಗಳ ಬಗ್ಗೆ ಸೂಕ್ತ ನಿಗಾವಹಿಸಬೇಕು. ಹಾಗೆ ಮಾಡದೇ ಬೇಕಾಬಿಟ್ಟಿಯಾಗಿ ಯೋಜನೆ ಕಾರ್ಯಾರಂಭ ಮಾಡುತ್ತಿದ್ದರೆ ಅದರ ವಿರುದ್ಧ ವಿರೋಧ ಪಕ್ಷಗಳು ಹೋರಾಟಮಾಡಬೇಕು ಎಂದರು.

ಜೆಡಿಎಸ್ ಗಟ್ಟಿಯಾಗಲು ಸೂಕ್ತಕಾಲ: ‘ಉಡುಪಿ, ದ.ಕ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಜೆಡಿಎಸ್‌ಗೆ ಭದ್ರ ನೆಲೆಯಿಲ್ಲ. ಹೀಗಿದ್ದಾಗ ಜೆಡಿಎಸ್ ತಳಮಟ್ಟದಿಂದ ಬೇರೂರಬೇಕಾದ ಅಗತ್ಯವಿದೆ. ಅದು ಸಾಧ್ಯವೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಬಂಗಾರಪ್ಪ, ಕರಾವಳಿ ಜಿಲ್ಲೆಗಳಲ್ಲಿ ಜೆಡಿಎಸ್ ಗಟ್ಟಿಯಾಗಲು ಇದು ಸೂಕ್ತ ಕಾಲ ಎಂದರು.
ಮಾಜಿ ಶಾಸಕ ಯು.ಆರ್.ಸಭಾಪತಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.