ADVERTISEMENT

ಉಡುಪಿ ಘೋಷಣೆ ಜಾರಿಗೆ ಜಿ.ಪಂ. ಬದ್ಧ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 7:30 IST
Last Updated 13 ಸೆಪ್ಟೆಂಬರ್ 2011, 7:30 IST

ಉಡುಪಿ: ಕಳೆದ ವರ್ಷ ಉಡುಪಿಯಲ್ಲಿ ನಡೆದಿದ್ದ ಗ್ರಾಮ ಪಂಚಾಯಿತಿ ನೌಕರರು, ಕಾರ್ಯದರ್ಶಿಗಳು ಹಾಗೂ ಪಿಡಿಒಗಳ ಸಮಾವೇಶದಲ್ಲಿ ಘೋಷಣೆಯಾಗಿದ್ದಂತೆ ನೌಕರರ ಬೇಡಿಕೆ ಈಡೇರಿಕೆಗೆ ಜಿಲ್ಲಾ ಪಂಚಾಯಿತಿ ಬದ್ಧವಾಗಿದೆ ಎಂದು ಜಿ.ಪಂ ಅಧ್ಯಕ್ಷ  ಕೆ. ಶಂಕರ ಪೂಜಾರಿ ತಿಳಿಸಿದ್ದಾರೆ.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿದ ಜಿಲ್ಲಾ ಮಟ್ಟದ ಗ್ರಾಮೀಣಾಭಿವೃದ್ದಿ ಇಲಾಖೆಯ ಪಿಡಿಒ, ಕಾರ್ಯದರ್ಶಿ ಮತ್ತು ನೌಕರರ ಸಂಘದ ಸಭೆಯಲ್ಲಿ ಅವರು ಮಾತನಾಡಿದರು.

`ಕಳೆದ ವರ್ಷ ರಾಜ್ಯ ಗ್ರಾಮೀಣಾಭಿವೃದ್ಧಿ ನೌಕರರ ಸಂಘದ ಗೌರವಾಧ್ಯಕ್ಷರಾಗಿರುವ ರಘುಪತಿ ಭಟ್ ಮಾರ್ಗ ದರ್ಶನದಲ್ಲಿ ಪಕ್ಷಾತೀತವಾಗಿ ನಡೆದ ರಾಜ್ಯ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ, ಆಗಿನ ಸಂಸದ ಡಿ.ವಿ.ಸದಾನಂದ ಗೌಡರು ಮತ್ತಿತರ ಗಣ್ಯರ ಸಮಕ್ಷಮ ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರು ನೌಕರರ ನ್ಯಾಯಯುತ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು.

`ನೌಕರರ ಮುಂದಿಟ್ಟಿರುವ ಬೇಡಿಕೆಗಳ ಪೈಕಿ ಕೆಲವು ರಾಜ್ಯ ಮಟ್ಟದಲ್ಲಿ ಇತ್ಯರ್ಥವಾಗಬೇಕಿದ್ದು, ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳ ಈಡೇರಿಕೆ ಅಧಿಕಾರಿಗಳ ಸಹಕಾರ ಪಡೆದು ಕಾನೂನು ಮಿತಿಯೊಳಗೆ ತುರ್ತು ಕ್ರಮ ಕೈಗೊಳ್ಳಲಾಗುವುದು.

ರಾಜ್ಯ ಮಟ್ಟದ ಬೇಡಿಕೆ ಬಗ್ಗೆ ರಾಜ್ಯ ಸಂಘದ ಗೌರವಾಧ್ಯಕ್ಷರಾಗಿರುವ ರಘುಪತಿ ಭಟ್ ಅವರ ನೇತೃತ್ವದಲ್ಲಿ ನೌಕರರ ಸಂಘದ ನಿಯೋಗದೊಂದಿಗೆ  ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಹಾಗೂ ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿ ಉಡುಪಿ  ಘೋಷಣೆ ಅನುಷ್ಠಾನಕ್ಕೆ ತರಲು ಶಕ್ತಿಮೀರಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ~ ಎಂದು ಅವರು ನೌಕರರಿಗೆ ಭರವಸೆ ನೀಡಿದರು.ಜಿ.ಪಂ.ಉಪಾಧ್ಯಕ್ಷೆ ಜ್ಯೋತಿ.ಎಸ್. ಶೆಟ್ಟಿ ಮಾತನಾಡಿ, ನೌಕರರ ಬೇಡಿಕೆಗಳ ಬಗ್ಗೆ ಸಹಮತ ವ್ಯಕ್ತಪಡಿಸಿದರು.

ಮನವಿ ಸಲ್ಲಿಕೆ: ಗ್ರಾಮೀಣಾಭಿವೃದ್ದಿ ಇಲಾಖೆಗೆ ಪ್ರತ್ಯೇಕ ನಿರ್ದೇಶನಾಲಯ ರಚನೆ ಹಾಗೂ ಸೇವಾ ನಿಯಮಾವಳಿ ರೂಪಿಸಬೇಕು. ನೌಕರರಿಗೆ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪಾವತಿಸಬೇಕು. ಪಿಡಿಒಗಳಿಗೆ ಸೂಕ್ತ ಭಡ್ತಿ ಅವಕಾಶ ಕಲ್ಪಿಸಬೇಕು. ಖಾಲಿಯಿರುವ ಪಿಡಿಒ 1ನೇ ಮತ್ತು 2ನೇ ದರ್ಜೆ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗೆ ಅರ್ಹರಿಗೆ ಭಡ್ತಿ ನೀಡಬೇಕು.

ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿ 10 ವರ್ಷ ಸೇವೆ ಸಲ್ಲಿಸಿದ ಪಂಚಾಯಿತಿ ನೌಕರರಿಗೆ ಕಾರ್ಯದರ್ಶಿ ಹುದ್ದೆ ಪಡೆಯಲು ಪ್ರತ್ಯೇಕ ಸ್ಪರ್ಧಾತ್ಮಕ ಪರೀಕ್ಷೆ ಕೈಬಿಟ್ಟು ಸೇವಾ ಹಿರಿತನಕ್ಕೆ ಆದ್ಯತೆ ನೀಡಬೇಕು
ಪಂಚಾಯಿತಿಗಳಲ್ಲಿ ಹೊಸತಾಗಿ ಸೃಷ್ಟಿಸಲಾದ ದ್ವಿತೀಯ ದರ್ಜೆ ಹುದ್ದೆಗಳಲ್ಲಿ ಶೇ 50ರಷ್ಟನ್ನು ಪಂಚಾಯತಿ ನೌಕರರಿಗೆ ಮೀಸಲಿಡಬೇಕು.

ಮಂಜೂರಾತಿ ಪಡೆಯದ ಗ್ರಾ.ಪಂ ನೌಕರರ ನೇಮಕಾತಿಗೆ ಅನುಮೋದನೆ ನೀಡಿ ಪ್ರತೀ ವರ್ಷ ಸಿ ದರ್ಜೆ ನೌಕರರ ಜ್ಯೇಷ್ಠತಾ ಪಟ್ಟಿ ಪ್ರಕಟಿಸಬೇಕು. ಕಾರ್ಯದರ್ಶಿಗಳಾಗಿ ಭಡ್ತಿ ಪಡೆದ ನೌಕರರ ಹಿಂದಿನ ಸೇವೆ ಮತ್ತು ವೇತನಕ್ಕೆ ಭದ್ರತೆ ನೀಡಿ ಸುಪ್ರೀಂ ಕೋರ್ಟ್ ತೀರ್ಪಿನಂತೆ ಪಿಂಚಣಿ ಪಾವತಿಸಬೇಕು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಸ್ಟೈಪೆಂಡರೀಸ್, ಅನುಕಂಪದ ಆಧಾರಿತ ನೌಕರರು ಹಾಗೂ ಇತರರಿಗೆ ಕೂಡಾ ಪಿಂಚಣಿ ಪಾವತಿಗೆ ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಘದ ಕಾರ್ಯದರ್ಶಿ ಹರಿಕೃಷ್ಣ ಶಿವತ್ತಾಯ, ಜಿಲ್ಲಾ ಸಂಘದ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಕಾರ್ಯದರ್ಶಿ ಉದಯ ಶೆಟ್ಟಿ, ಕಾರ್ಕಳದ ಪಿಡಿಒ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ, ಕುಂದಾಪುರ ಸಂಘದ ಚಂದ್ರಕಾಂತ, ಯು ಶಿವರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.