ADVERTISEMENT

ಓಲೆಗಾಗಿ ದಂಪತಿ ಹುಡುಕಾಟ!

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 6:30 IST
Last Updated 21 ಏಪ್ರಿಲ್ 2012, 6:30 IST

ಉಡುಪಿ: ಗುಡಿಸಲುಗಳು ಹೊತ್ತಿ ಉರಿಯುತ್ತಿದ್ದ ವೇಳೆ ಎಲ್ಲರೂ ಆತಂಕದಿಂದ ನೋಡುತ್ತ ನಿಂತಿದ್ದರೆ ದಂಪತಿ ಮಾತ್ರ ಗುಡಿಸಲಿನಲ್ಲಿದ್ದ ಹಳೆಯ ಕಬ್ಬಿಣದ ಟ್ರಂಕ್ ಹೊರಗೆ ಎಳೆಯಲು ಯತ್ನಿಸುತ್ತಿದ್ದರು. ಕೆಲ ಹೊತ್ತಿನ ಪ್ರಯತ್ನದ ನಂತರ ಟ್ರಂಕ್ ಎಳೆದು ಕೊಂಡ ಅವರು ಅದರೊಳಗಿದ್ದ ವಸ್ತುಗಳನ್ನೆಲ್ಲ ಹೊರತೆಗೆದು ಆತುರ ಬಿದ್ದವರಂತೆ ನೋಡಲಾರಂಭಿಸಿದರು. ಟ್ರಂಕ್ ಒಳಗೆ ಏನಿದೆ ಎಂದು ಕುತೂಹ ಲದಿಂದ ಕೇಳಿದಾಗ ಮನೆಯೊಡತಿ ಹೇಳಿದ ಮಾತು ಮನಕಲಕುವಂತಿತ್ತು.

`ಮಗಳಿಗೀಗ ಒಂಬತ್ತು ವರ್ಷ. ಭವಿಷ್ಯದಲ್ಲಿ ಆಕೆಗೆ ಉಪಯೋಗಕ್ಕೆ ಬರಲಿ ಎಂದು ಕೆಲವೇ ದಿನಗಳ ಹಿಂದೆ ಓಲೆ ಮಾಡಿಸಿದ್ದೆ. ಅದರ ಬೆಲೆ ಎಂಟು ಸಾವಿರ ರೂಪಾಯಿ. ಕೂಲಿಯಿಂದ ಬಂದ ಹಣವನ್ನು ಸ್ವಲ್ಪ ಉಳಿಸಿ ಬಹಳ ದಿನಗಳಿಂದ ದುಡ್ಡು ಕೂಡಿಸಿಟ್ಟಿದ್ದೆ. ಎಂಟು ಸಾವಿರ ಆದ ನಂತರ ಓಲೆ ತಂದಿದ್ದೆ. ಆದರೆ ಟ್ರಂಕ್ ಸಂಪೂರ್ಣ ಸುಟ್ಟು ಹೋಗಿದೆ, ಅದನ್ನು ಎಳೆದು ಕೊಳ್ಳುವಾಗ ಟ್ರಂಕ್ ತೆರೆದುಕೊಂಡು ಕೆಲವು ವಸ್ತುಗಳು ಬಿದ್ದು ಹೋದವು. ಈಗ ಓಲೆ ಕಾಣಿಸುತ್ತಿಲ್ಲ. ಓಲೆ ಸಿಗುವುದೇ ಎಂದು ಗೊತ್ತಿಲ್ಲ~ ಎಂದು ಬಾಗಲಕೋಟೆಯ ಬಾದಾಮಿಯ ರೇಣುಕಾ ತಮ್ಮ ಅಳಲು ತೋಡಿಕೊಂಡರು.

`ಮಗಳು ಪವಿತ್ರ  ನಾಲ್ಕನೇ ತರಗತಿ ಓದುತ್ತಿದ್ದಾಳೆ. ಅವಳಿಗಾಗಿ ಮೊದಲ ಬಾರಿಗೆ ಚಿನ್ನ ಖರೀದಿಸಿದ್ದೆವು. ಬೇಸಿಗೆ ರಜೆ ಆದ ಕಾರಣ ಪವಿತ್ರ ಮತ್ತು ಇನ್ನಿಬ್ಬರು ಗಂಡು ಮಕ್ಕಳು ಮೂರೂ ಮಂದಿ ಬಾದಾಮಿಯ ಸಬ್ಬಲ ಹುಣಸಿಗೆ ಹೋಗಿದ್ದಾರೆ. ಊರಿಗೆ ಹೋಗುವಾಗ `ಚಿನ್ನದ ಓಲೆ ಹಾಕಿಕೊಂಡು ಹೋಗುತ್ತೇನೆ~ ಎಂದು ಮಗಳು ಗೋಗರೆದಳು. ಬೆಲೆ ಬಾಳುವ ಓಲೆಯನ್ನು ಆಕೆ ಕಳೆದುಕೊಂಡರೆ ಏನು ಗತಿ ಎಂದು ನಾನು ನೀಡಲಿಲ್ಲ. ಈಗ ಓಲೆಯೇ ಸಿಗುತ್ತಿಲ್ಲ~ ಎಂದು ಅವರು ಹೇಳಿದರು.

ಇದಕ್ಕೆ ದನಿಗೂಡಿಸಿದ ರೇಣುಕಾ ಅವರ ಪತಿ ರಾಮನಗೌಡ `ಊರಿನಲ್ಲಿ ಚಿಕ್ಕಮ್ಮನ ಮಗ ವಿಠಲನ ಮದುವೆ ಇದೆ. ಆತನಿಗೆ ನಾನು ಸಾಲ ನೀಡಬೇಕಾಗಿತ್ತು. ವಿವಾಹ ಇರುವುದರಿಂದ ಆತನಿಗೆ ಹಣ ನೀಡಬೇಕೆಂದು ಒಟ್ಟು ಹದಿನೈದು ಸಾವಿರ ಸಾಲ ಪಡೆದಿದ್ದೆ. ನಾನೂ ಉಳಿಸಿದ್ದ ಹಣವನ್ನು ಸೇರಿಸಿ ಒಟ್ಟು ಮೂವತ್ತು ಸಾವಿರ ರೂಪಾಯಿ ಮಾಡಿಟ್ಟಿದ್ದೆ. ಟ್ರಂಕ್‌ನಲ್ಲಿ ಇಟ್ಟಿದೆ ಹಣದ ಕಟ್ಟು ಸುಟ್ಟು ಕರಕಲಾಗಿದೆ. ಈಗ ಏನು ಮಾಡುವುದು ಎಂದು ಗೊತ್ತಾಗುತ್ತಿಲ್ಲ~ ಎಂದರು.

ಊರಿನಲ್ಲಿ ಕೂಲಿ ಕಡಿಮೆ, ಕೆಲಸವೂ ಸರಿಯಾಗಿ ಸಿಗುವುದಿಲ್ಲ. ಆದ್ದರಿಂದ ಪತ್ನಿ ರೇಣುಕಾ ಮತ್ತು ನಾನು ಹತ್ತು ವರ್ಷದ ಹಿಂದೆ ಉಡುಪಿಗೆ ಬಂದೆವು. ನಾನು ರೀಗಲರ್ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ಪತ್ನಿ ಹೋಟೆಲ್‌ನಲ್ಲಿ ಪಾತ್ರೆ ತೊಳೆಯುತ್ತಾಳೆ. ಹತ್ತು ವರ್ಷಗಳಿಂದ ದುಡಿದು ಸಂಪಾದಿಸಿದ ಹಣ, ಓಲೆ ಮತ್ತು ಬಹಳ ಆಸೆಯಿಂದ ಕೊಂಡುಕೊಂಡಿದ್ದ ಟಿವಿಎಸ್ ಎಕ್ಸೆಲ್ ಸೂಪರ್ ಮೊಪೆಡ್ ಎಲ್ಲವೂ ಹೋಯಿತು. ಮನೆಯೂ ಇಲ್ಲ. ಏನು ಮಾಡುವುದೆಂದು ಗೊತ್ತಾಗುತ್ತಿಲ್ಲ ಎಂದರು.

ಇಲ್ಲಿನ ನಿವಾಸಿಗಳು ತಮ್ಮ ಜೀವಮಾನದಲ್ಲಿ ಸಂಪಾದಿಸಿದ ಹಣ, ವಸ್ತು, ಒಡವೆ ಎಲ್ಲವನ್ನೂ ಕಳೆದು ಕೊಂಡಿದ್ದಾರೆ. ಅದನ್ನು ಮತ್ತೆ ಸಂಪಾದಿಸಲು ಹಲವು ವರ್ಷಗಳೇ ಬೇಕಾಗುತ್ತದೆ. ನಗರಸಭೆ, ಸ್ಥಳೀಯ ಶಾಸಕರು ಇವರಿಗೆ ಪರಿಹಾರ ಹಣ ನೀಡಿ, ಬೇರೆ ಸೂರಿಗೆ ವ್ಯವಸ್ಥೆ ಮಾಡಿದರೆ ಜೀವನ ಸುಗಮವಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.