ADVERTISEMENT

ಕಟ್‌ಬೇಲ್ತೂರು: ಮನೆಗೆ ಕನ್ನ– ಚಿನ್ನಾಭರಣ, ನಗದು ಕಳವು

ಕಟ್‌ಬೇಲ್ತೂರು: ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಮೇ 2018, 12:26 IST
Last Updated 4 ಮೇ 2018, 12:26 IST

ಕುಂದಾಪುರ: ಇಲ್ಲಿಗೆ ಸಮೀಪದ ಕಟ್‌ಬೇಲ್ತೂರಿನ ದೇವಸ್ಥಾನದ ಮುಖ ಮಂಟಪದ ಬಳಿಯಲ್ಲಿನ ರವಿ ಪಾತ್ರಿ ಯಾನೆ ರವಿ ಮೇಸ್ತ್ರಿ ಎನ್ನುವವರ ಮನೆಯಲ್ಲಿ ಇರಿಸಲಾಗಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ಹಾಗೂ ₹3 ಲಕ್ಷ ನಗದನ್ನು ಕಳ್ಳರು ದೋಚಿರುವ ಪ್ರಕರಣ ಗುರುವಾರ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ವಿವರ: ಕಟ್ಟಡ ನಿರ್ಮಾಣದ ಗುತ್ತಿಗೆ ಕೆಲಸವನ್ನು ಮಾಡಿ ಕೊಂಡಿದ್ದ ರವಿ ಮೇಸ್ತ್ರಿ ಎನ್ನುವರ ಮನೆ ಕಟ್‌ಬೇಲ್ತೂರು ಭದ್ರಮಹಾಕಾಳಿ ದೇವಸ್ಥಾನದ ಸ್ವಾಗತ ಗೋಪುರದ ಬಳಿ ಇದೆ. ದೇವಸ್ಥಾನದ ಪಾತ್ರಿಯೂ ಆಗಿದ್ದ ಅವರು ತಮ್ಮ ವಾಸದ ಮನೆಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದರಿಂದ ಹಾಗೂ ಬಸ್ರೂರಿನ ತಮ್ಮ ಹೆಂಡತಿ ಮನೆಯ ಬಳಿ ಹೊಸ ಮನೆಯನ್ನು ಕಟ್ಟುತ್ತಿದ್ದ ಕಾರಣದಿಂದ ತಮ್ಮ ವಾಸ್ತವ್ಯವನ್ನು ಬಸ್ರೂರಿಗೆ ಬದಲಾ ಯಿಸಿಕೊಂಡಿದ್ದರು.

ಮನೆ ಮಾರಾಟ ಮಾಡಿದವರಿಗೆ ಹಸ್ತಾಂತರವಾಗದ ಕಾರಣ ಮನೆಯಲ್ಲಿನ ಬೆಲೆ ಬಾಳುವ ವಸ್ತು ಹಾಗೂ ಇತರ ಸಾಮಗ್ರಿಗಳನ್ನು ಇನ್ನೂ ತೆಗೆದುಕೊಂಡು ಹೋಗಿರಲಿಲ್ಲ. ಈ ಕಾರಣಕ್ಕಾಗಿ ವಾರದ ಕೆಲವು ದಿನ ಈ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದ ಅವರು ಆ ದಿನಗಳಲ್ಲಿ ತಮ್ಮ ಜತೆಯಲ್ಲಿ ಕೆಲಸ ಮಾಡುತ್ತಿದ್ದ ಆನಗಳ್ಳಿಯ ಲವ ಎನ್ನುವ ಯುವಕನನ್ನು ಬರ ಹೇಳುತ್ತಿದ್ದರು ಎನ್ನಲಾಗಿದೆ.

ADVERTISEMENT

ಬುಧವಾರ ರಾತ್ರಿಯೂ ಕಟ್‌ ಬೇಲ್ತೂರಿನ ಮನೆಯಲ್ಲಿ ವಾಸ್ತವ್ಯ ಮಾಡುವ ನಿರ್ಧಾರ ಮಾಡಿದ್ದ ಅವರು ಇದಕ್ಕಾಗಿ ತಮ್ಮ ಸಹವರ್ತಿ ಲವ ಅವರಿಗೆ ಬೈಕ್‌ ಕೊಟ್ಟು ಸಂಜೆಯ ನಂತರ ಬರ ಹೇಳಿದ್ದರು. ರಾತ್ರಿಯವರೆಗೂ ಲವ ಬಾರದೆ ಇದ್ದಾಗ ಆತನ ಮೊಬೈಲ್‌ ಸಂಪರ್ಕಿಸಲು ಪ್ರಯತ್ನ ಮಾಡಿದಾಗ ಅದು ಸ್ವಿಚ್‌ ಆಫ್‌ ಎಂದು ತೋರಿಸುತ್ತಿತ್ತು. ಆತನ ಸಂಪರ್ಕ ಸಾಧ್ಯವಾಗದೆ ಇದ್ದುದರಿಂದ ಕಟ್‌ ಬೇಲ್ತೂರು ಪ್ರಯಾಣವನ್ನು ರದ್ದುಪಡಿಸಿ ಅವರು ಬಸ್ರೂರಿನಲ್ಲಿ ತಂಗಿದ್ದರು.

ಗುರುವಾರ ಬೆಳಿಗ್ಗೆ ಲವ ಅವರ ಮೊಬೈಲ್‌ ಸ್ವೀಚ್‌ಆಫ್‌ ಆಗಿರುವ ಕುರಿತು ಕೇಳಿದಾಗ ಆತ ಚಾರ್ಚ್‌ ಇರಲಿಲ್ಲ ಎಂದು ಕಾರಣ ತಿಳಿಸಿದ್ದ. ಇದಕ್ಕೆ ಪ್ರತಿಯಾಗಿ ರವಿ ಅವರು ಕಟ್‌ಬೇಲ್ತೂರಿನ ಮನೆಯಲ್ಲಿ ಇದ್ದ ಚಾರ್ಜರ್‌ ತೆಗೆದುಕೊಂಡು ಬರುವಂತೆ ಸೂಚಿಸಿದ್ದರು. ಸುಮಾರು 10–11 ಗಂಟೆಯ ನಡುವೆ ಆತ ಮನೆಯಿಂದ ಚಾರ್ಜರ್‌ ತೆಗೆದುಕೊಂಡು ಹೋಗಿದ್ದರೂ ಕಳ್ಳತನ ಪ್ರಕರಣ ಬೆಳಕಿಗೆ ಬಂದಿರಲಿಲ್ಲ.

ಬಸ್ರೂರಿನಲ್ಲಿ ನಿರ್ಮಾಣಗೊಳ್ಳುತ್ತಿದ್ದ ಮನೆಯ ಕೆಲಸಗಾರರಿಗೆ ಹಣ ಪಾವತಿ ಮಾಡಲೆಂದು ಮಧ್ಯಾಹ್ನ ಮನೆಗೆ ಬಂದಿದ್ದ ರವಿ ಮೇಸ್ತ್ರಿ ಅವರಿಗೆ ಮನೆ ಯಲ್ಲಿ ನಡೆದಿರುವ ಕಳ್ಳತನ ಗೊತ್ತಾಗಿದೆ. ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ ₹3 ಲಕ್ಷ ನಗದು ಹಾಗೂ 38 ಪವನ್‌ ಚಿನ್ನಾಭರಣಗಳು ಕಳ್ಳರ ಪಾಲಾಗಿವೆ. ಮನೆಗೆ ಬಂದಾಗ ಬಾಗಿಲಿಗೆ ಹಾಕಿರುವ ಎಲ್ಲ ಬೀಗಗಳು ಯಥಾ ಸ್ಥಿತಿಯಲ್ಲಿ ಇತ್ತು. ಮನೆಯ ಹಂಚುಗಳನ್ನು ತೆಗೆದು ಒಳ ಹೊಕ್ಕಿರುವ ಕುರುಹುಗಳು ಇಲ್ಲ. ಆದರೆ ಮನೆಯ ಒಳಗಿನ ಕೋಣೆಯನ್ನು ಒಡೆದಿರುವುದು ಹಲವು ಯಕ್ಷ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಎಸ್‌.ಪಿ.ಕುಮಾರಚಂದ್ರ, ಕುಂದಾಪುರ ಡಿವೈಎಸ್‌ಪಿ ಬಿ.ಪಿ.ದಿನೇಶ್‌ಕುಮಾರ, ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜಪ್ಪ ಹಾಗೂ ಗ್ರಾಮಾಂತರ ಠಾಣೆಯ ಎಸ್‌ಐ ಶ್ರೀಧರ ನಾಯಕ್‌ ಭೇಟಿ ನೀಡಿದ್ದಾರೆ. ಜಿಲ್ಲಾ ಬೆರಳ ಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.