ಸಿದ್ದಾಪುರ: ಕುಂದಾಪುರ ಮತ್ತು ಕಾರ್ಕಳ ತಾಲ್ಲೂಕಿನ ಗಡಿಭಾಗವಾದ ಕಬ್ಬಿನಾಲೆ ಹಸಲರ ಕಾಲೊನಿಯಲ್ಲಿ ವಾಸಿಸುವ ಆರು ಹಸಲ ಕುಟುಂಬಗಳು ಮೂಲಸೌಕರ್ಯ ವಂಚಿತರಾಗಿದ್ದು ಕತ್ತಲಲ್ಲಿ ದಿನ ದೂಡುತ್ತಿದ್ದಾರೆ.ಇಲ್ಲಿನ ಆರು ಕುಟುಂಬಗಳಲ್ಲಿ 30ಕ್ಕೂ ಅಧಿಕ ಮಂದಿ ವಾಸವಾಗಿದ್ದು ನೀರು, ವಿದ್ಯುತ್, ರಸ್ತೆ, ಶಿಕ್ಷಣ ಸೇರಿದಂತೆ ಎಲ್ಲಾ ಮೂಲಸೌಕರ್ಯದಿಂದ ವಂಚಿತರಾಗಿದ್ದಾರೆ,
ಪ್ರಮುಖವಾಗಿ ಕಾಡುವ ನೀರಿನ ಸಮಸ್ಯೆ: ಘಟ್ಟದ ತಪ್ಪಲಿನಲ್ಲಿದ್ದ ಕಬ್ಬಿನಾಲೆ ಹಸಲ ಕುಟುಂಬಕ್ಕೆ ನೀರು ಪ್ರಮುಖ ಸಮಸ್ಯೆಯಾಗಿದೆ. ಪಂಚಾಯಿತಿ ವತಿಯಿಂದ ಅಸಮರ್ಪಕ ನೀರು ಸರಬರಾಜು ವ್ಯವಸ್ಥೆಯಿಂದ ಇವರು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ವಿದ್ಯುತ್ ಸಂಪರ್ಕವಿದ್ದರೂ ಬಿಲ್ ಪಾವತಿಸದೇ ಸಂಪರ್ಕ ಕಡಿತಗೊಳಿಸಲಾಗಿದೆ. ನಾಡ್ಪಾಲು ಪಂಚಾಯತಿ ಮೂಲಕ ಸಾಗುವ ರಸ್ತೆ ಆಗುಂಬೆಯ ತಪ್ಪಲ್ಲಲ್ಲಿ ಇರುವುದರಿಂದ ವಿಪರೀತ ಮಳೆ ಬಿದ್ದು ರಸ್ತೆ ಸಂಚಾರ ಕಡಿತಗೊಂಡಿದೆ.
‘ನಮ್ಮ ಆರು ಮನೆಗಳಲ್ಲಿ ಇರುವ ಮೂವರು ವಿದ್ಯಾರ್ಥಿಗಳು ಸಮೀಪದ ಕಾಸನಮಕ್ಕಿ ಶಾಲೆಗೆ 3 ಕಿ.ಮೀ. ನಡೆದು ಸಾಗಬೇಕು. ಸಮೀಪದಲ್ಲಿ ಅಂಗನವಾಡಿ ಇದ್ದರೆ ಒಳ್ಳೆಯದು. ಮನೆಗಳನ್ನು ಕಟ್ಟಿಕೊಳ್ಳಲು ಈ ಹಿಂದೆ ರೂ 30 ಸಾವಿರ ಬಂದಿದೆ. ಅಷ್ಟು ಹಣದಲ್ಲಿ ಮನೆ ಕಟ್ಟುವುದು ಹೇಗೆ. ನಾವು ಕೂಲಿ ಕೆಲಸ ಮಾಡುತ್ತೇವೆ. ಈ ಹಣದಲ್ಲಿ ಸಂಸಾರ ಸಾಗಿಸುವುದೇ ಕಷ್ಟ. ಚುನಾವಣೆ ಸಮಯದಲ್ಲಿ ರಾಜಕೀಯ ವ್ಯಕ್ತಿಗಳು ಬರುತ್ತಾರೆ ಮತ್ತು ಪಂಚಾಯತಿಯವರು ಕೆಲವೊಮ್ಮೆ ಬರುತ್ತಾರೆ. ಸರ್ಕಾರದ ಸೌಲಭ್ಯ ಬಂದರೆ ನಮಗೆ ತಿಳಿಯುವುದಿಲ್ಲ. ಆದರೂ ನಾವು ಸರ್ಕಾರದ ಆಶ್ರಯ ಯೋಜನೆ ಹಣ ಮತ್ತು ಸ್ವಂತ ಖರ್ಚು ಮಾಡಿ ಮನೆ ಕಟ್ಟಿಕೊಂಡಿದ್ದೇವೆ’ ಎಂದು ಬಮ್ಮಿ ಹಸಲ ಹೇಳುತ್ತಾರೆ.
ನಮಗೆ ನೀರಿನ ಸಮಸ್ಯೆ ಪ್ರಮುಖವಾಗಿದ್ದು ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಕಾಲೊನಿಯಲ್ಲಿ ಕೆಲವರು ಸ್ವಲ್ಪ ತೆಂಗು ಮತ್ತು ಗೇರು ಗಿಡಗಳನ್ನು ನೆಟ್ಟಿದ್ದಾರೆ. ನೀರಿನ ಸಮಸ್ಯೆಯಿಂದ ಗಿಡಗಳು ಸಾಯುತ್ತಿವೆ. ನಾವು ಕೂಲಿ ಕೆಲಸ ಮತ್ತು ಕಾಡು ಉತ್ಪತ್ತಿ ಸಂಗ್ರಹ ಮಾಡುತ್ತೇವೆ. ನನ್ನ ಪತ್ನಿ ಪಂಚಾಯಿತಿ ಉಪಾಧ್ಯಕ್ಷಳಾದರೂ ನಮ್ಮ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಮಡಾಮಕ್ಕಿ ಪಂಚಾಯಿತಿ ಮಾಜಿ ಉಪಾಧ್ಯೆಕ್ಷೆ ಸುಶೀಲಾ ಅವರ ಪತಿ ಈಶ್ವರ್ ಹಸಲ ಅಳಲು ತೋಡಿಕೊಂಡಿದ್ದಾರೆ.
‘ನಮಗೆ ಸರ್ಕಾರದಿಂದ ಅನೇಕ ಸೌಲಭ್ಯಗಳು ಸಿಗುತ್ತವೆ. ಅದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರುವುದಿಲ್ಲ’ ಎಂದು ರತ್ನಾಕರ ಹಸಲ ಹೇಳುತ್ತಾರೆ.
‘ಮಡಾಮಕ್ಕಿ ಗ್ರಾಮ ಪಂಚಾಯಿತಿಯಿಂದ ತೀವ್ರ ನಿರ್ಲಕ್ಷ್ಯಕ್ಕೊಳಗಾದ ಪ್ರದೇಶ ಕಬ್ಬಿನಾಲೆ. ಈ ಭಾಗದಲ್ಲಿ ಹಸಲರ ಕಾಲೊನಿ ಸೇರಿದಂತೆ ಹತ್ತಾರು ಮನೆಗಳಿವೆ. ಇಲ್ಲಿಗೆ ಸಮರ್ಪಕ ರಸ್ತೆ ಇಲ್ಲ. ನೀರಿನ ಸೌಲಭ್ಯ ಇಲ್ಲ. ಮಳೆಗಾಲ ಬಂತೆಂದರೆ ಕಾಡಿನ ಮಧ್ಯೆ ಹಾದು ಬರುವ ವಿದ್ಯುತ್ ತಂತಿಗಳ ಮೇಲೆ ಮರದ ಗೆಲ್ಲು ಬಿದ್ದು ಕಂಬಗಳು ಉರುಳುತ್ತವೆ. ಅದರಿಂದ ವಾರಗಟ್ಟಲೆ ವಿದ್ಯುತ್ ಸರಬರಾಜು ನಿಲ್ಲುತ್ತದೆ ಎಂದು ಕಬ್ಬಿನಾಲೆಯ ಸಾಮಾಜಿಕ ಕಾರ್ಯಕರ್ತ ಸೋಮಯ್ಯ ನಾಯ್ಕಿ ಹೇಳುತ್ತಾರೆ.
ಹಸಲರಿಗೆ ಹಕ್ಕುಪತ್ರ ಸಮಸ್ಯೆ ಇದೆ. ಜತೆಗೆ ಹತ್ತು ಹಲವಾರು ಸಮಸ್ಯೆಗಳು ಕಾಡುತ್ತಿವೆ. ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಇದನ್ನು ಹಲವಾರು ಸಲ ಗ್ರಾಮ ಸಭೆ, ವಾರ್ಡ್‌ಸಭೆ ಮತ್ತು ನಕ್ಸಲ್ ಪೀಡಿತ ಭಾಗಗಳ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ರಾಜ್ಯ ಗುಪ್ತದಳದ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆದರೂ ಫಲಿತಾಂಶ ಶೂನ್ಯ’ ಎಂದು ಅವರು ದೂರಿದರು.
ನಕ್ಸಲ್‌ಪೀಡಿತ ಹಣೆಪಟ್ಟಿ: ಕಬ್ಬಿನಾಲೆ ನಕ್ಸಲ್‌ಪೀಡಿತ ಭಾಗ. ಹಸಲರ ಕಾಲೊನಿ ಮತ್ತು ಆ ಭಾಗದ ಮೂಲಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಗಮನ ನೀಡಿದ ಗ್ರಾಮಸಭೆ, ಜನಸಂಪರ್ಕ ಸಭೆಗಳ ಮೂಲಕ ಅಧಿಕಾರಿಗಳ, ಶಾಸಕರು, ವಿಧಾನ ಪರಿಷತ್ ಸದಸ್ಯರು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತರಲಾಗಿದೆ. ಈ ಕಾರ್ಯ ಪ್ರಗತಿಯಲ್ಲಿದೆ’ ಎಂದು ಗ್ರಾಮ ಪಂಚಾಯತಿ ಸದಸ್ಯ ಕಾರಿಮನೆ ದಯಾನಂದ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.