ADVERTISEMENT

ಕರಾವಳಿ: ನೇತ್ರದಾನ ಅಭಿಯಾನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 10:45 IST
Last Updated 15 ಅಕ್ಟೋಬರ್ 2011, 10:45 IST

ಉಡುಪಿ: ನಗರದ ಪ್ರಸಾದ್ ನೇತ್ರಾಲಯ, ಲಯನ್ಸ್ ಕ್ಲಬ್ ಹಾಗೂ ಡಯಲ್ ಮಂತ್ರ ಸಂಸ್ಥೆಯ ಸಹಯೋಗದಲ್ಲಿ ಅಕ್ಟೋಬರ್ ತಿಂಗಳಿನಿಂದ ಮುಂದಿನ 4 ತಿಂಗಳು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರದಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸಾದ್ ನೇತ್ರಾಲಯದ ನಿರ್ದೇಶಕ ಡಾ.ಕೃಷ್ಣಪ್ರಸಾದ್, `ಜಿಲ್ಲೆಯಲ್ಲಿ ಒಂದು ಸಾವಿರ ಮಂದಿಗೆ ಕಣ್ಣಿನ ಕರಿಗುಡ್ಡೆ ಸಮಸ್ಯೆಯಿದೆ. ಹೀಗಾಗಿ ಇಂಥವರಿಗೆಲ್ಲ ಬದಲಿ ಕಣ್ಣಿನ ಕರಿಗುಡ್ಡೆ ಅಳವಡಿಸುವುದು ಅನಿವಾರ್ಯ~ ಎಂದರು.

`ರಾಜ್ಯ ಸರ್ಕಾರ ಪ್ರಸಾದ್ ನೇತ್ರಾಲಯಕ್ಕೆ ನೇತ್ರದಾನ ಬ್ಯಾಂಕ್ ಮಾನ್ಯತೆಯನ್ನು ನೀಡಿದೆ. ಇಲ್ಲಿ ಕಣ್ಣಿನ ಕರಿಗುಡ್ಡೆ ಅಗತ್ಯದವರಿಗೆ ಅಳವಡಿಸುವ ಶಸ್ತ್ರಚಿಕಿತ್ಸೆ ಲಭ್ಯವಿದೆ. ದಾನಿಗಳ ಕಣ್ಣುಗಳನ್ನು ಸಂಗ್ರಹಿಸಿಡುವ ವ್ಯವಸ್ಥೆ ಇಲ್ಲಿದೆ~ ಎಂದರು.

`ಉಡುಪಿ, ದ.ಕ. ಜಿಲ್ಲೆಯಲ್ಲೂ ಮೂಢನಂಬಿಕೆಗಳು ಇನ್ನೂ ಹೋಗಿಲ್ಲ. ಸತ್ತ ಬಳಿಕ ಕಣ್ಣನ್ನು ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ಕುರುಡರಾಗಿ ಹುಟ್ಟುತ್ತಾರೆ ಎಂಬ ನಂಬಿಕೆಬಿಲ್ಲಿನ ಜನರಲ್ಲಿದೆ. ಹೀಗಾಗಿ ಬಹಳಷ್ಟು ಮಂದಿ ತಮ್ಮ ಮರಣಾನಂತರ ಕಣ್ಣುಗಳನ್ನು ದಾನ ಮಾಡಲು ಒಪ್ಪುವುದಿಲ್ಲ. ಬಂಧುಗಳು ಮೃತ ಪಟ್ಟಾಗ ಅವರ ಕಣ್ಣು ದಾನ ಮಾಡಿಸಲೂ ಮುಂದಾಗುತ್ತಿಲ್ಲ. ಕಣ್ಣುದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ತನ್ಮೂಲಕ ಅಂಧರ ಬಾಳಲ್ಲಿ ಬೆಳಕು ತರಬೇಕು~ ಎಂದರು.

ದೇಶದಲ್ಲಿ 40 ಲಕ್ಷ ಮಂದಿಗೆ ಕರಿಗುಡ್ಡೆ: `ವಿಶ್ವದಲ್ಲಿ ಸುಮಾರು 4 ಕೋಟಿ ಅಂಧರಿದ್ದಾರೆ. ಅವರಲ್ಲಿ 60-80 ಲಕ್ಷ ಜನರು ಕರಿಗುಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ 40 ಲಕ್ಷ ಮಂದಿ ಕಣ್ಣಿನ ಕರಿಗುಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದಾರೆ~ ಎಂದು ವಿವರ ನೀಡಿದ ಅವರು, `ಉಡುಪಿ ಜಿಲ್ಲೆಯಲ್ಲಿಯೇ ಸಾವಿರಕ್ಕೂ ಅಧಿಕ  ಮಂದಿ ಕರಿಗುಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದಾರೆ~ ಎಂದು ಅಂಕಿಅಂಶ ನೀಡಿದರು.

ವಿದ್ಯಾರ್ಥಿ ಕಣ್ಣು ತಪಾಸಣೆ 15ರಿಂದ:   ಲಯನ್ಸ್324 ಡಿ-4ಜಿಲ್ಲೆ  ವತಿಯಿಂದ ಉಡುಪಿ ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಇದೇ 15ರಿಂದ ಕಣ್ಣಿನ ತಪಾಸಣೆ ಹಮ್ಮಿಕೊಳ್ಳಲಾಗು ವುದು ಎಂದು ಲಯನ್ಸ್ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಡಯಲ್ ಮಂತ್ರ ಸಂಸ್ಥೆಯ ನಿರ್ದೇಶಕ ಸುದೇಶ್ ಶೆಟ್ಟಿ ಮತ್ತು ಮನೋಜ್ ಶೆಟ್ಟಿ, ಪ್ರಸಾದ್ ನೇತ್ರಾಲಯದ ವ್ಯವಸ್ಥಾಪಕ ಅಬ್ದುಲ್ ಖಾದರ್ ಇದ್ದರು.

ನೇತ್ರದಾನ ಮಾಡಬೇಕೆ...  `ಡಯಲ್~ ಮಾಡಿ
ಯಾವುದೇ ವ್ಯಕ್ತಿ ಮರಣಾನಂತರ ಕಣ್ಣು ದಾನ ಮಾಡಲು ಬಯಸಿದಲ್ಲಿ ಉಡುಪಿಯಲ್ಲಿ ಪ್ರಸಾದ್ ನೇತ್ರಾಲಯವನ್ನು ಸಂಪರ್ಕಿಸಬಹುದು. ಇದಕ್ಕಾಗಿ `ಡಯಲ್~ ಸಂಸ್ಥೆಯ ಸಹಾಯವಾಣಿ 9243 60 60 60 ಈ ಸಂಖ್ಯೆಗೂ ಕರೆ ಮಾಡಬಹುದು.

`ವ್ಯಕ್ತಿ ಮೃತಪಟ್ಟ 6 ಗಂಟೆ ಒಳಗಾಗಿ ಆ ಕಣ್ಣುಗಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ನೇತ್ರದಾನದ ಬ್ಯಾಂಕ್‌ನಲ್ಲಿ ಸಂಗ್ರಹಿಸಬೇಕಾಗುತ್ತದೆ. ಕಣ್ಣು ದಾನ ಪಡೆಯುವ ವ್ಯಕ್ತಿಗೆ ನಾಲ್ಕು ದಿನಗಳೊಳಗೆ ಕಣ್ಣನ್ನು ಅಳವಡಿಸಬೇಕಾಗುತ್ತದೆ. ನಂತರ ಅವುಗಳನ್ನು ಸಂರಕ್ಷಿಸಿಡಲು ಸಾಧ್ಯವಿಲ್ಲ~ ಎಂದು ಸರ್ಕಾರದ ಮಾನ್ಯತೆ ಪಡೆದಿರುವ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ.ಕೃಷ್ಣಪ್ರಸಾದ್ ಇಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.