ADVERTISEMENT

ಕಲ್ಯ: ಅಪರೂಪದ ಹಯಗಜನಂದಿ ಕಿನ್ನರಶಿಲ್ಪ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 10:55 IST
Last Updated 14 ಜೂನ್ 2011, 10:55 IST
ಕಲ್ಯ: ಅಪರೂಪದ ಹಯಗಜನಂದಿ ಕಿನ್ನರಶಿಲ್ಪ ಪತ್ತೆ
ಕಲ್ಯ: ಅಪರೂಪದ ಹಯಗಜನಂದಿ ಕಿನ್ನರಶಿಲ್ಪ ಪತ್ತೆ   

ಉಡುಪಿ: ಕಾರ್ಕಳ ತಾಲ್ಲೂಕಿನ ನಿಟ್ಟೆ ಸಮೀಪದ ಕಲ್ಯ ನಾಗ ಬ್ರಹ್ಮಸ್ಥಾನದಲ್ಲಿ ಅತಿ ಅಪರೂಪದ ಕುದುರೆ ರೂಪದ ಬಳಪದ ಕಲ್ಲಿನ ಮೂರ್ತಿ ಶಿಲ್ಪವೊಂದು ಪತ್ತೆಯಾಗಿದೆ. ಇದು 13 ಶತಮಾನದ ಶಿಲ್ಪವಾಗಿರಬಹುದು ಎಂದು ಇತಿಹಾಸ ಮತ್ತು ಪುರಾತತ್ವ ತಜ್ಞರು ತಿಳಿಸಿದ್ದಾರೆ.

ಈ ಶಿಲ್ಪ 29 ಸೆ.ಮೀ ಉದ್ದ, 18 ಸೆ.ಮೀ ಅಗಲ 7 ಸೆ.ಮೀ ದಪ್ಪವಿದ್ದು, ಎಡಭಾಗದ ಹಿಂದಿನ ಮತ್ತು ಮುಂದಿನ ಕಾಲುಗಳು ಭಗ್ನವಾಗಿವೆ. ಬಲಭಾಗದ ಮುಂದಿನ ಕಾಲು, ದುಂಡಗಿನ ಆನೆಯ ಕಾಲಿನಂತಿದೆ.

ಹಿಂದಿನ ಕಾಲು ನಂದಿಯ ಕಾಲಿನಂತಿದ್ದು ಗೊರಸನ್ನು ಹೊಂದಿದೆ. ಹಿಂಭಾಗದಲ್ಲಿ ಕುದುರೆಯ ಬಾಲದ ಬದಲಿಗೆ ನಂದಿಯ ಬಾಲವಿದೆ. ಮುಖದ ವಿನ್ಯಾಸ ಕುದುರೆಯಂತಿದ್ದು ಬಾಯಿಯ ಒಂದು ಭಾಗ ಒಡೆದಿದೆ. ದೇಹದ ಸುತ್ತ ಗೆಜ್ಜೆಯ ಅಲಂಕಾರವಿದೆ, ಕೊರಳು ಮತ್ತು ಮುಖವನ್ನು ಸೇರಿಸಿರುವ ಆಕರ್ಷಕ ಸರಪಳಿಯಿದೆ.

ಮೂರು ಪ್ರಾಣಿಗಳ ಅಂಗಾಂಗಗಳನ್ನು ಸೇರಿದಂತಿರುವ ಈ ಕ್ರಿಯಾತ್ಮಕ ಶಿಲ್ಪ ಕಲ್ಯ ನಾಗಬ್ರಹ್ಮಸ್ಥಾನದ ಬೆರ್ಮೆರ್ ದೈವದ ವಾಹನವಾಗಿದೆ. ಮುಖದ ಭಾಗ ಕುದುರೆ, ಮುಂಗಾಲು ಆನೆಯದ್ದು, ದೇಹ ನಂದಿಯದ್ದಾಗಿದೆ. ಜನಪದ ನಿರೂಪಣೆಯ ಪ್ರಕಾರ ತುಳುನಾಡಿನಲ್ಲಿ ಕುಳಿತ ಅನೇಕ ಶಿಲ್ಪಗಳನ್ನು ಬೆರ್ಮೆರ್ ಅಥವಾ ಜೈನ ಬೆರ್ಮರು ಎಂದು ಗುರುತಿಸಲಾಗಿದೆ ಎಂದು ಇತಿಹಾಸ ತಜ್ಞ ಪ್ರೊ.ಎಸ್.ಎ.ಕೃಷ್ಣಯ್ಯ ಮತ್ತು  ಪುರಾತತ್ವ ಇತಿಹಾಸ ತಜ್ಞ ಪ್ರೊ.ಟಿ.ಮುರುಗೇಶಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಲ್ಯದಲ್ಲಿ ಬೆರ್ಮೆರ್ ಎಂದು ಪೂಜಿಸುತ್ತಿರುವ ಈ ದೈವವನ್ನು ಸದ್ಯ ಕಾಲ್ಪನಿಕ ಪ್ರಾಣಿಯಾಗಿ `ಹಯಗಜನಂದಿ~ ಎಂದು ಕರೆಯಬಹುದಾಗಿದೆ. ಕುದುರೆ ಶಿಲ್ಪದ ತಲೆಯ ಭಾಗದಲ್ಲಿ ಕೊಂಬು (ಒಕ್ಕೋಡು) ಇದ್ದು ಭಗ್ನವಾಗಿದೆ. ಅಲ್ಲದೇ ಶಿಲ್ಪದ ಒಂದು ಪಾರ್ಶ್ವವೂ ಕೆತ್ತಿಹೋಗಿದೆ. ತಲೆಯ ಮೇಲೆ ಮುಂಚಾಚಿದ ಏಕಶೃಂಗವಿದ್ದು  ಅದು ಮುರಿದು ಹೋಗಿದ್ದು, ಏಕಶೃಂಗಿ ಕುದುರೆ ದೊರೆತಿರುವುದು ದೇಶದಲ್ಲೇ ಪ್ರಥಮವಾಗಿದೆ. ಶಿಲ್ಪ ಶೈಲಿಯ ಆಧಾರದ ಮೇಲೆ ಇದನ್ನು 13ನೇ ಶತಮಾನಕ್ಕೆ ಸೇರಿದ ಶಿಲ್ಪವೆಂದು ಪರಿಗಣಿಸಬಹುದಾಗಿದೆ ಎಂದು ತಜ್ಞರು ತಿಳಿಸಿದರು.

`ಏಕಶೃಂಗಿ ಫಲವತ್ತತೆಯ ಸಂಕೇತ. ಕಲ್ಯದ ಬ್ರಹ್ಮಸ್ಥಾನದಲ್ಲಿ, ಬೆರ್ಮೆರ್, ನಾಗ ಮತ್ತು ಕ್ಷೇತ್ರಪಾಲರು ಪ್ರತ್ಯೇಕವಾಗಿದ್ದು, ನಂದಿ ಹಾಗೂ ರಕ್ತೇಶ್ವರಿ ಅಬೇಧ ರೂಪದಲ್ಲಿರುವುದು ವಿಶೇಷ. ಒಕ್ಕೋಡು ಕುದುರೆ ಧರ್ಮಸ್ಥಳದ ಲಾಂಛನದಲ್ಲಿದ್ದು, ಧರ್ಮಸ್ಥಳದ ಇತಿಹಾಸ ಅಧ್ಯಯನದ ದೃಷ್ಟಿಯಿಂದಲೂ ಇದು ಮಹತ್ವಪೂರ್ಣವಾಗಿದೆ~ ಎಂದರು.

ಈ ಶಿಲ್ಪವನ್ನು ರಾಷ್ಟ್ರೀಯ ಶಿಲ್ಪಕಲಾ ಸಂಗ್ರಹಾಗಾರಕ್ಕೆ ನೀಡಲಾಗುತ್ತಿದ್ದು ಇಂತಹ ಅಮೂಲ್ಯ ಶಿಲ್ಪವನ್ನು ಕಲ್ಯದ ಶ್ರೀಧರ ಉಪಾಧ್ಯ ಅವರು ನೀಡಿದ್ದಾರೆ. ಈ ಸಂಗ್ರಹಕ್ಕೆ ಪ್ರೇರಣೆ ನೀಡಿದ ಸಗ್ರಿ ಗೋಪಾಲಕೃಷ್ಣ ಸಾಮಗ, ಶಿರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷಯಾ ಮತ್ತು ಶ್ವೇತಾ ಸುದ್ದಿಗೋಷ್ಠಿಯಲ್ಲಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.