ADVERTISEMENT

ಕಾಂಗ್ರೆಸ್- ಬಿಜೆಪಿ ಪ್ರತಿಭಟನೆ ಸಮರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 8:15 IST
Last Updated 23 ಸೆಪ್ಟೆಂಬರ್ 2011, 8:15 IST

ಉಳ್ಳಾಲ: ಉಳ್ಳಾಲ ಪುರಸಭೆಯಲ್ಲಿ  ಆಡಳಿತ ನಡೆಸುತ್ತಿರುವ ಕಾಂಗ್ರೆಸ್  ಅವ್ಯವಹಾರ, ಹಗರಣ, ಪಕ್ಷಪಾತ ಮತ್ತು ತಾರತಮ್ಯ ಧೋರಣೆ ಅನುಸರಿಸುತ್ತಿದ್ದು, ಇದರಿಂದ ಪುರಸಭೆ ದಿವಾಳಿ ಅಂಚಿನಲ್ಲಿದೆ ಎಂದು  ಉಳ್ಳಾಲದ ಮಾಜಿ ಶಾಸಕ ಜಯರಾಮ ಶೆಟ್ಟಿ ದೂರಿದರು.

ಉಳ್ಳಾಲ ಪುರಸಭೆ ದುರಾಡಳಿತ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಬಿಜೆಪಿ ಉಳ್ಳಾಲ ಪುರಸಭಾ ಸಮಿತಿ ಆಶ್ರಯದಲ್ಲಿ  ಉಳ್ಳಾಲ ಪುರಸಭೆ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

13ನೇ ಹಣಕಾಸು ಯೋಜನೆಯಿಂದ ಮಂಜೂರಾದ ಸುಮಾರು ರೂ 1.20 ಕೋಟಿ ಅನುದಾನದ  ಹಂಚಿಕೆಯಲ್ಲಿ ವಾರ್ಡ್‌ಗಳಿಗೆ  ತಾರತಮ್ಯ  ಧೋರಣೆ ಮತ್ತು ರೂ 55.50 ಲಕ್ಷ ಕಾಮಗಾರಿಯನ್ನು ನಿರ್ಣಯ ಮಾಡದೆ ಮಂಜೂರಾತಿಗೆ ಕಳುಹಿಸಿದೆ. ಪುರಸಭೆಗೆ ಮಂಗಳೂರು ಮಹಾನಗರಪಾಲಿಕೆಯಿಂದ ಒದಗಿಸಿದ ಕುಡಿಯುವ ನೀರಿನ ಬಿಲ್ಲು ರೂ 1.60 ಕೋಟಿ   ಪಾವತಿಸದೇ ಬಾಕಿಯಾಗಿದೆ.

ಆದರೆ ಜನರಿಂದ ಸಂಗ್ರಹಿಸಲಾದ ಹಣ ಎಲ್ಲಿಗೆ ಹೋಗಿದೆ. ಪ್ರತಿದಿನ 30 ಲಕ್ಷ ಲೀಟರ್ ನೀರು ಪಾಲಿಕೆಯಿಂದ ಸರಬರಾಜು ಆಗುತ್ತಿರುವುದು ಯಾವ ಕಾರಣಕ್ಕಾಗಿ ಎಂದು ಅವರು ಪ್ರಶ್ನಿಸಿದರು.
ಪುರಸಭೆ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಲು ಕಾನೂನುಬಾಹಿರವಾಗಿ ಅನುಮತಿ ನೀಡಲಾಗಿದೆ. ಬಿಜೆಪಿ ಸದಸ್ಯರಿರುವ ವಾರ್ಡ್‌ಗಳನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದ್ದು, ಇಲ್ಲಿನ ಒಳರಸ್ತೆಗಳು ಹದಗೆಟ್ಟಿವೆ.  

ಆಶ್ರಯ ಯೋಜನೆಯಲ್ಲಿ ಉಳ್ಳಾಲ ಒಂಬತ್ತುಕೆರೆಯಲ್ಲಿ ನಿರ್ಮಿಸಿರುವ ಮನೆಗಳ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಲೋಕಾಯುಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಚಂದ್ರಹಾಸ ಉಳ್ಳಾಲ್,  ಬಿಜೆಪಿ ಮುಖಂಡ ಚಂದ್ರಶೇಖರ ಉಚ್ಚಿಲ್,  ಜಿ.ಪಂ. ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರು,  ಸತೀಶ್ ಕುಂಪಲ,  ಕ್ಷೇತ್ರ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಫಝಲ್ ಅಸೈಗೋಳಿ, ಪುರಸಭಾ ಉಪಾಧ್ಯಕ್ಷೆ ಭವಾನಿ ಕಾಪಿಕಾಡ್, ಪೊಡಿಮೋನು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.