ADVERTISEMENT

ಕಾಮಗಾರಿ ಪರಿಶೀಲನೆಗೆ ತಜ್ಞರ ತಂಡ

ಸ್ಥಳೀಯರ ಆಕ್ಷೇಪಕ್ಕೂ ಕಿವಿಗೊಡದ ಇಲಾಖೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 10:49 IST
Last Updated 1 ಜೂನ್ 2018, 10:49 IST
ಹೆಜಮಾಡಿ-– ಪಡುಬಿದ್ರಿ ಸಂಪರ್ಕಿಸುವ ಸೇತುವೆ
ಹೆಜಮಾಡಿ-– ಪಡುಬಿದ್ರಿ ಸಂಪರ್ಕಿಸುವ ಸೇತುವೆ   

ಪಡುಬಿದ್ರಿ: ಸ್ಥಳೀಯರ ಅಭಿಪ್ರಾಯವನ್ನು ಕೇಳದೆ ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಮಾಡುವ ಕಾಮಗಾರಿ ಪೋಲಾಗುತ್ತಿರುವುದಕ್ಕೆ ಹೆಜಮಾಡಿ-ಪಡುಬಿದ್ರಿ ಮುಟ್ಟಳಿವೆ ಪ್ರದೇಶದಲ್ಲಿ ನಿರ್ಮಾಣವಾದ ಸೇತುವೆ ಹಾಗೂ ರಸ್ತೆಯೇ ಸ್ಪಷ್ಟ ನಿದರ್ಶನ ಎಂಬುದು ಇಲ್ಲಿನ ನಾಗರಿಕರ ಆರೋಪ.

ಹೆಜಮಾಡಿ-ಪಡುಬಿದ್ರಿ ಸಂಪರ್ಕಿಸಲು ಮುಟ್ಟಳಿವೆಯಲ್ಲಿ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಬಹುಕಾಲದಿಂದಲೂ ಇತ್ತು. ಈ ನಿಟ್ಟಿನಲ್ಲಿ ಕಳೆದ ವರ್ಷ ನಬಾರ್ಡ್‌ನ ₹80 ಲಕ್ಷ ಅನುದಾನದಲ್ಲಿ 65 ಮೀಟರ್ ಉದ್ದದ ಸೇತುವೆ ಹಾಗೂ 190 ಮೀಟರ್ ಉದ್ದದ ಮಣ್ಣಿನ ರಸ್ತೆ ನಿರ್ಮಿಸಲಾಗಿತ್ತು. ರಸ್ತೆ, ಸೇತುವೆ ಕಾಮಗಾರಿಯ ಅಗತ್ಯವಿದ್ದರೂ ಅದನ್ನು ವೈಜ್ಞಾನಿಕವಾಗಿ ನಡೆಸಲಿಲ್ಲ. ಈ ಯೋಜನೆಯಿಂದ ಮಳೆಗಾಲದಲ್ಲಿ ನದಿ ತೀರದ ಪ್ರದೇಶ ಮುಳುಗಡೆಯಾಗಲಿದೆ ಎಂದು ಸ್ಥಳೀಯರು ಎಚ್ಚರಿಸಿದ್ದರು. ಆದರೆ, ಆಗಿನ ಎಂಜಿನಿಯರ್ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿ ಸ್ಥಳೀಯರ ಬಾಯಿ ಮುಚ್ಚಿಸಿದ್ದರು.

ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದ ಸಮುದ್ರ ಹಾಗೂ ಕಾಮಿನಿ ನದಿಯ ಮಧ್ಯೆ ನಿರ್ಮಾಣವಾದ ಸೇತುವೆ ಹಾಗೂ ರಸ್ತೆಯಿಂದ ನೀರು ಹರಿದು ಬಂದು ಮುಳುಗಡೆಯ ಭೀತಿಯನ್ನು ಜನರು ಎದುರಿಸಿದರು. ಸ್ಥಳೀಯರು ಎಂಜಿನಿಯರ್‌ ಅನ್ನು ಸ್ಥಳಕ್ಕೆ ಕರೆಯಿಸಿಕೊಂಡು ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟುಹಿಡಿದರು. ಬಳಿಕ ಜೆಸಿಬಿ ಮೂಲಕ ರಸ್ತೆಯನ್ನು ಕಡಿದು ನದಿ ನೀರು ಸಮುದ್ರಕ್ಕೆ ಹೋಗಲು ವ್ಯವಸ್ಥೆ ಕಲ್ಪಿಸಲಾಯಿತು.

ADVERTISEMENT

ನೀರು ಹರಿಯಲು ಕಡಿದ ಪ್ರದೇಶವೇ ಸೇತುವೆ ನಿರ್ಮಾಣಕ್ಕೆ ಸೂಕ್ತ ಸ್ಥಳವಾಗಿದೆ. ಈಗ ಸೇತುವೆ ನಿರ್ಮಿಸಿರುವ ಸ್ಥಳ ಎತ್ತರವಾಗಿರುವುದರಿಂದ ಅಲ್ಲಿ ನೀರಿನ ಹೊರ ಹರಿವು ಇಲ್ಲ. ಇದರಿಂದ ಹಿನ್ನೀರಿನ ಪ್ರಮಾಣ ಹೆಚ್ಚಳಕ್ಕೂ ಕಾರಣವಾಗಲಿದೆ. ಸೇತುವೆ ಅಡಿ ಉಬ್ಬರದಿಂದ ಸಮುದ್ರದ ಉಪ್ಪು ನೀರು ನದಿ ಸೇರುತ್ತಿದೆ. ಅಲ್ಲದೆ ಈ ಪ್ರದೇಶದಲ್ಲಿ ಮರಳು ಶೇಖರಣೆಯಾಗುತ್ತಿದೆ.

ಪರಿಶೀಲನೆಗೆ ತಜ್ಞರ ತಂಡ: ‘ಮುಟ್ಟಳಿವೆ ಪ್ರದೇಶದಲ್ಲಿ ನಿರ್ಮಾಣವಾದ ಸೇತುವೆ ಹಾಗೂ ರಸ್ತೆ ಕಾಮಗಾರಿಯ ಬಗ್ಗೆ ಪರಿಶೀಲಿಸಲು ಬೆಂಗಳೂರಿನ ಸಿವಿಲೆಡ್ ಟೆಕ್ನಾಲಜಿಸ್ ಪ್ರ. ಲಿಮಿಟೆಡ್ ಸಂಸ್ಥೆಯ ತಜ್ಞರ ತಂಡ ಬರಲಿದೆ. ಈಗ ನಡೆದಿರುವ ಕಾಮಗಾರಿ ಹಾಗೂ ನೀರಿನ ಹರಿವಿನ ಬಗ್ಗೆ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಕಳೆದ ಮೂರು ದಿನಗಳು ಸುರಿದ ಮಳೆಯಿಂದಾದ ಸಮಸ್ಯೆ ಬಗ್ಗೆಯೂ ಅವರಿಗೆ ಸಚಿತ್ರ ವರದಿ ನೀಡಲಾಗುವುದು. ಅವರು ಪರಿಶೀಲನೆಗೆ ಬಂದಾಗ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು. ಪರಿಶೀಲನಾ ಸಮಿತಿ ನೀಡುವ ಮಾರ್ಗದರ್ಶನದಂತೆ ಮತ್ತೆ ರಸ್ತೆ ನಿರ್ಮಾಣ ಮಾಡಲಾಗುವುದು. ಮಳೆಯಿಂದ ನೆರೆ ಉಂಟಾದ ಸಂದರ್ಭದಲ್ಲಿ ಜನರ ಸಮಾಧಾನಕ್ಕೋಸ್ಕರ ರಸ್ತೆಯನ್ನು ಕಡಿದು ನೀರು ಹರಿಯಲು ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಬಂದರು ಮತ್ತು ಮೀನುಗಾರಿಕಾ ಇಲಾಖೆ ಎ.ಇ.ನಾಗರಾಜ್ ಹೇಳಿದರು.

ರಸ್ತೆ ರಕ್ಷಣೆಗೆ ತಡೆಗೋಡೆ

ಹೆಜಮಾಡಿ– ಮುಟ್ಟಳಿವೆ ಪ್ರದೇಶದಲ್ಲಿ ಪಡುಬಿದ್ರಿ ಕಡಲ ಕಿನಾರೆ ಸಂಪರ್ಕಿಸಲು ನಿರ್ಮಿಸುತ್ತಿರುವ ರಸ್ತೆ ರಕ್ಷಣೆಗಾಗಿ ಬಂದರು ಹಾಗೂ ಮೀನುಗಾರಿಕಾ ಇಲಾಖೆ ಮೂಲಕ ಸಮುದ್ರ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ.
₹2 ಕೋಟಿ ವೆಚ್ಚದಲ್ಲಿ ಸುಮಾರು 200 ಮೀಟರ್ ಉದ್ದಕ್ಕೆ ಅಳಿವೆ ಪ್ರದೇಶದಲ್ಲಿ ಸಮುದ್ರ ತಡೆಗೋಡೆ ನಿರ್ಮಾಣ ಮಾಡುವ ಕಾಮಗಾರಿಯನ್ನೂ ಈಗಾಗಲೇ ಆರಂಭಿಸಲಾಗಿದೆ. ಮುಟ್ಟಳಿವೆ ಪ್ರದೇಶದಲ್ಲಿ ಬಂದರು ಮತ್ತು ಮೀನುಗಾರಿಕಾ ಇಲಾಖೆ ಮೂಲಕ ₹60 ಲಕ್ಷ ವೆಚ್ಚದಲ್ಲಿ ಸೇತುವೆ ಹಾಗೂ ₹20 ಲಕ್ಷ ವೆಚ್ಚದಲ್ಲಿ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.