ADVERTISEMENT

ಕಾರ್ಕಳ: ದೀಪೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 5:55 IST
Last Updated 5 ಡಿಸೆಂಬರ್ 2012, 5:55 IST

ಕಾರ್ಕಳ: ಇಲ್ಲಿನ ಪಡುತಿರುಪತಿ ಪ್ರಸಿದ್ಧಿಯ ವೆಂಕಟರಮಣ ದೇವಸ್ಥಾನದ ಲಕ್ಷದೀಪೋತ್ಸವಕ್ಕೆ ಮಂಗಳವಾರ ದೇವಾಲಯದಲ್ಲಿ ಚಾಲನೆ ದೊರೆಯಿತು.

ದೇವಸ್ಥಾನದಲ್ಲಿ ಮಧ್ಯಾಹ್ನ ಪೂಜೆ ನಡೆದ ಬಳಿಕ ಆಡಳಿತ ಮೊಕ್ತೇಸರರೂ ಸೇರಿದಂತೆ ಊರಿನ ಹತ್ತು ಸಮಸ್ತರು ಲಕ್ಷದೀಪೋತ್ಸವ ಸಾಂಗವಾಗಿ ನೆರವೇರುವಂತೆ ಪ್ರಾರ್ಥಿಸಿದರು.

ಸ್ವರ್ಣ ಮಂಟಪದಲ್ಲಿ ಶ್ರೀನಿವಾಸ ದೇವರನ್ನು ಹಾಗೂ ಚಿನ್ನದ ಪಲ್ಲಕಿಯಲ್ಲಿ ಪಟ್ಟದ ವೆಂಕಟರಮಣ ದೇವರನ್ನು ಕುಳ್ಳಿರಿಸಿ ವನಭೋಜನ ನಡೆಯುವ ಶ್ರೀನಿವಾಸ ಆಶ್ರಮದತ್ತ ಹಗಲು ಉತ್ಸವದ ಮೂಲಕ ಕೊಂಡೊಯ್ಯಲಾಯಿತು. ವನಕ್ಕೆ ಹೊರಟ ಭವ್ಯ ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು. ಉತ್ಸವ ಸಾಗುವ ಸಂದರ್ಭದಲ್ಲಿ ದಾರಿಯ ಇಕ್ಕೆಲಗಳಲ್ಲಿ ಭಕ್ತರು ಹಣ್ಣುಕಾಯಿ ಕಾಣಿಕೆಗಳನ್ನು ಅರ್ಪಿಸಿದರು.

ಶ್ರೀನಿವಾಸ ಆಶ್ರಮದಲ್ಲಿ ದೇವರಿಗೆ ಅಭಿಷೇಕ, ಪೂಜೆ ಪುನಸ್ಕಾರಗಳು ನಡೆದವು. ವನಭೋಜನ ಸಂತರ್ಪಣೆಯಲ್ಲಿ ಊರ ಪರವೂರ ಸಾವಿರಾರು ಮಂದಿ ಭಾಗಿಯಾದರು. ನಂತರ ರಾತ್ರಿ ಕಟ್ಟೆ ಪೂಜೆಗಳು ನಡೆದವು.

ಲಕ್ಷದೀಪೋತ್ಸವದ ಅಂಗವಾಗಿ ಸೋಮವಾರ ರಾತ್ರಿ ದೊಡ್ಡಕೆರೆ ದೀಪೋತ್ಸವ ನಡೆಯಿತು. ರಾತ್ರಿ ಗರುಡೋತ್ಸವಕ್ಕಿಂತ ಮುನ್ನ ದೇವರಿಗೆ ಪಲ್ಲಕಿಯಲ್ಲಿ ಕೆರೆಯ ಬಳಿಯ ಶಮೀಕಟ್ಟೆಯಲ್ಲಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಕೆಂಪು ವರ್ಣದ ಗರುಡಾರೂಢ ದೇವರನ್ನು ನಗರ ಉತ್ಸವಕ್ಕೆ ಕರೆದೊಯ್ಯಲಾಯಿತು. ನಂತರ ನಡೆದ ದೊಡ್ಡಕೆರೆ ದೀಪೋತ್ಸವದದಲ್ಲಿ ಅಡ್ಡ ಪಲ್ಲಕಿ ಸೇವೆ ನಡೆಯಿತು.

ಕೆರೆ ದೀಪೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಡೆಸಿದ ಸುಡುಮದ್ದು ಪ್ರದರ್ಶನ ಆಕರ್ಷಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.