ADVERTISEMENT

ಕೊಕ್ಕರ್ಣೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 8:30 IST
Last Updated 5 ಅಕ್ಟೋಬರ್ 2012, 8:30 IST

ಬ್ರಹ್ಮಾವರ: ಕೊಕ್ಕರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಯೋಜನೆಯಡಿ ಸುಮಾರು 20ಲಕ್ಷ ರೂ. ಅಂದಾಜಿನಲ್ಲಿ ಬಾವಿ, ಪೈಪ್ ಲೈನ್ ಅಳವಡಿಸಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.

ಕೊಕ್ಕರ್ಣೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಅವರು ಸಂಧ್ಯಾ ಸುರಕ್ಷೆ, ಭಾಗ್ಯಲಕ್ಷ್ಮೀ, ವಿಧವಾ ವೇತನ ಮತ್ತು ಇನ್ನಿತರ ಯೋಜನೆಗಳ ಫಲಾನುಭವಿಗಳಿಗೆ ಬಾಂಡ್, ಚೆಕ್‌ಗಳನ್ನು ವಿತರಿಸಿ ಮಾತನಾಡಿದರು.

ಕೊಕ್ಕರ್ಣೆಗೆ ಸಂಪರ್ಕ ಕಲ್ಪಿಸುವ ಕಂಗಿಬೆಟ್ಟು ಸೂರಾಲು ರಸ್ತೆಯನ್ನು ಸಂಪೂರ್ಣವಾಗಿ ಡಾಂಬರೀಕರಣ ಮಾಡಲಾಗಿದೆ. ಅದೇ ರೀತಿ ಸುಮಾರು 76ಲಕ್ಷ ರೂ.ಅಂದಾಜಿನಲ್ಲಿ ಕಾಡೂರು ಸೇತುವೆಯಿಂದ ಕೆಂಜೂರು ತನಕ ಫೇವರ್ ಫಿನಿಷ್ ರಸ್ತೆ ಮಾಡಲಾಗುವುದು ಎಂದು ಶಾಸಕ ಭಟ್ ತಿಳಿಸಿದರು.

ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗೆ ಅಗತ್ಯವಿರುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಕಿಂಡಿ ಅಣೆಕಟ್ಟುಗಳ ರಚನೆ, ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಈಗಾಗಲೇ ಇದರಿಂದ ಅನೇಕ ರೈತರು ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ಕೊಕ್ಕರ್ಣೆ ಮುದ್ದೂರು ರಸ್ತೆ ಅಭಿವೃದ್ಧಿಗೆ 25ಲಕ್ಷ ರೂ, ಹೊರ್ಲಾಳಿ ಬೀಯಾಳಿ ರಸ್ತೆ ಕಾಂಕ್ರಿಟೀಕರಣ, ಕುದಿ ಕೋಟಂಬೈಲು ರಸ್ತೆ ಅಭಿವೃದ್ದಿಗೆ 25 ಲಕ್ಷ ರೂಪಾಯಿ, ಬೆನಗಲ್ ಕೊಕ್ಕರ್ಣೆ ರಸ್ತೆ ಅಭಿವೃದ್ಧಿ, ಕುಡುಬಿ ಕಾಲೋನಿ ಮತ್ತು ಮೊಗವೀರ ಪೇಟೆಯಲ್ಲಿ ಸಮುದಾಯ ಭವನದ ನಿರ್ಮಾಣ ಹೀಗೆ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳು ಕೊಕ್ಕರ್ಣೆ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಬೇಕಿವೆ ಎಂದರು. 

ಪಂಚಾಯಿತಿ ಉಪಾಧ್ಯಕ್ಷೆ ಅಂಬಾ ಶೆಟ್ಟಿ, ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿ ಸದಾನಂದ ನಾಯಕ್, ಕಂದಾಯ ಅಧಿಕಾರಿ ಶಂಕರ ಶೆಟ್ಟಿ, ಪಂಚಾಯಿತಿ ಸದಸ್ಯರಾದ ವಸಂತ ಸೇರ್ವೆಗಾರ, ಅಭಿವೃದ್ಧಿ ಅಧಿಕಾರಿ ಅಮೃತಕಲಾ, ಶಂಭು ದೇವಾಡಿಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.