ADVERTISEMENT

ಕ್ರಿಯಾಶೀಲತೆಯಿಂದ ಯಶಸ್ಸು: ಪ್ರಭಾಕರ ಶರ್ಮ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:45 IST
Last Updated 8 ಅಕ್ಟೋಬರ್ 2012, 8:45 IST

ಉಡುಪಿ: ಪ್ರಯತ್ನ, ಕ್ರಿಯಾಶೀಲತೆ ಯಿಂದ ಯಶಸ್ಸು ಸಿಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಎಸ್.ಎ.ಪ್ರಭಾಕರ ಶರ್ಮ ಹೇಳಿದರು.

ಉಡುಪಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಉಡುಪಿ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ಅಜ್ಜರಕಾಡು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ  ಭಾನುವಾರ ನಡೆದ ಮೈಸೂರು ವಿಭಾಗೀಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಬಾಲಕ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿ ನಡೆಯುವ ಕ್ರೀಡಾಕೂಟ ಆಟಗಾರರ ನೆನಪಿನಲ್ಲಿ ಉಳಿಯುವಂತಾಗಲಿ. ಇಡೀ ದೇಶಕ್ಕೆ ಹೆಮ್ಮೆ ತರುವಂತಹ ಕ್ರೀಡಾಪಟುಗಳು ಮೂಡಿಬರಲಿ ಎಂದು ಹಾರೈಸಿದರು.

ವಿದ್ಯಾರ್ಥಿಗಳು ಕೇವಲ ಅಂಕಗಳಿಸುವ ಕಡೆಗೆ ಗಮನ ನೀಡದೆ ಕ್ರೀಡೆ ಹಾಗೂ ದೈಹಿಕ ಶಿಕ್ಷಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಸರ್ವತೋಮುಖ ಬೆಳವಣಿಗೆಗೆ ಗಮನ ನೀಡುವಂತೆ ಕುಂದಾಪುರ ಸಹಾಯಕ ಕಮಿಷನರ್ ಸದಾಶಿವ ಪ್ರಭು ಹೇಳಿದರು.

ಮೈಸೂರು ವಿಭಾಗದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಕೊಡಗು, ಮಂಗಳೂರು ಮತ್ತುಉಡುಪಿ ಜಿಲ್ಲೆಯ 32 ತಂಡಗಳು ಎರಡು ದಿನ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಇಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು ನ.10 ಮತ್ತು 11ರಂದು ದಾವಣಗೆರೆಯಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಪಾಲ್ಗೊಳ್ಳಲಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಉಡುಪಿ ಕಲ್ಯಾಣಪುರದ  ಮೌಂಟ್ ರೊಸಾರಿಯೊ ಶಾಲೆಯಲ್ಲಿ ನ.17ರಿಂದ 20ರವರೆಗೆ ರಾಜ್ಯ ಮಟ್ಟದ ಚೆಸ್ ಪಂದ್ಯ ನಡೆಯಲಿದೆ ಎಂದು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠಲ ಶೆಟ್ಟಿ ಮಾಹಿತಿ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಸಹ ನಿರ್ದೇಶಕ ಕೆ. ಆನಂದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಕಾರ್ಯದರ್ಶಿ ಪ್ರಕಾಶ್ ಕೊಡವೂರು, ಆದರ್ಶ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಆಚಾರ್ಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಂದ್ರ ಮಧ್ಯಸ್ಥ, ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ವಸಂತ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಕರುಣಾಕರ ಶೆಟ್ಟಿ,ಉಡುಪಿ ವಲಯದ ಗೌರವ ಅಧ್ಯಕ್ಷ ಸೀತಾರಾಮ ಶೆಟ್ಟಿ,ಅಧ್ಯಕ್ಷ ನವೀನ್ ಶೆಟ್ಟಿ,ಮಾಜಿ ಅಧ್ಯಕ್ಷ ಎಸ್,ಸತೀಶ್ ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ ಶೆಟ್ಟಿ,ಮಧುಕರ ಬ್ರಹ್ಮಾವರ,ಬಾಬು ಪೂಜಾರಿ,ದತ್ತಾತ್ರೇಯ ನಾಯಕ್ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಎಚ್ ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.