ADVERTISEMENT

ಕ್ರೀಡಾ ಯಶಸ್ಸಿಗೆ ಶಿಸ್ತು– ಸಮಯ ಪ್ರಜ್ಞೆ ಮುಖ್ಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:12 IST
Last Updated 31 ಡಿಸೆಂಬರ್ 2017, 10:12 IST
ರಾಷ್ಟ್ರಮಟ್ಟದ ಜೂನಿಯರ್ ಸಮುದ್ರ ಈಜು ಸ್ಪರ್ಧೆಗೆ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.
ರಾಷ್ಟ್ರಮಟ್ಟದ ಜೂನಿಯರ್ ಸಮುದ್ರ ಈಜು ಸ್ಪರ್ಧೆಗೆ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.   

ಉಡುಪಿ: ಸಾಹಸ ಪ್ರವೃತ್ತಿ ಇದ್ದರೆ ಮಾತ್ರ ಜೀವನದಲ್ಲಿ ದೊಡ್ಡ ಯಶಸ್ಸು ಗಳಿಸಬಹುದು ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಬೆಂಗಳೂರು, ಉಡುಪಿ ನಿರ್ಮಿತಿ ಕೇಂದ್ರ ಆಯೋಜಿಸಿರುವ ‘ಉಡುಪಿ ಪರ್ಬ’ ಹಾಗೂ ‘ಸಾಹಸ ಉತ್ಸವ’ದ ಅಂಗವಾಗಿ ಮಲ್ಪೆಯಲ್ಲಿ ಶನಿವಾರ ನಡೆದ ರಾಷ್ಟ್ರಮಟ್ಟದ ಜೂನಿಯರ್ ಸಮುದ್ರ ಈಜು ಸ್ಪರ್ಧೆ (ಓಪನ್ ವಾಟರ್ ಸ್ವಿಮ್ಮಿಂಗ್)ಯನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಸ ಮನೋಭಾವನೆ ಇದ್ದಾಗ ಅಂದುಕೊಂಡದನ್ನು ಸಾಧಿಸುವ ಧೈರ್ಯ ಮತ್ತು ಶಕ್ತಿ ಬರುತ್ತದೆ. ಕ್ರೀಡೆಯಲ್ಲಿ ಯಶಸ್ಸು ಗಳಿಸಬೇಕು ಎಂದು ಶಿಸ್ತು ಹಾಗೂ ಸಮಯ ಪ್ರಜ್ಞೆ ಅಗತ್ಯ. ಈ ಎರಡು ವಿಷಯಗಳಿಗೆ ಕ್ರೀಡಾಪಟುಗಳು ಗಮನ ನೀಡಿದರೆ ಎತ್ತರಕ್ಕೆ ಏರಬಹುದು ಎಂದು ಅವರು ಹೇಳಿದರು.

ADVERTISEMENT

1990ರಲ್ಲಿ ಇದೇ ಮಲ್ಪೆ ಕಡಲ ಕಿನಾರೆಯಲ್ಲಿ ಮೊದಲ ಬಾರಿಗೆ ಸಾಹಸ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿದ್ದೆ. ಆಗಲೇ ಸುಮಾರು ಒಂದು ಲಕ್ಷದಷ್ಟು ಜನರು ಸೇರಿದ್ದರು. ಈ ಮತ್ತೆ ಕ್ರೀಡಾ ಮಂತ್ರಿಯಾಗಿ ಇಂತಹ ಸಾಹಸ ಕ್ರೀಡೆ ಆಯೋಜಿಸುತ್ತಿದ್ದೇನೆ. ಸಮುದ್ರದ ನೀರಿನಲ್ಲಿ ಈಜುವುದು ನಿಜಕ್ಕೂ ಸಾಹಸ ಕೆಲಸ ಎಂದರು.

ಈಜು ಕ್ರೀಡೆಯಲ್ಲಿ ಕರ್ನಾಟಕದ ಕ್ರೀಡಾಪಟುಗಳು ದೊಡ್ಡ ಸಾಧನೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಕೆಲವು ತಿಂಗಳುಗಳ ಹಿಂದೆ ಆಯೋಜಿಸಿದ್ದ ದೇಶದ ಎಲ್ಲ ರಾಜ್ಯಗಳ ಕ್ರೀಡಾ ಸಚಿವರ ಸಮಾವೇಶದಲ್ಲಿ ಪಾಲ್ಗೊಂಡಿದ್ದೆ. ಯಾವ ಕ್ರೀಡೆಯಲ್ಲಿ ನಿಮ್ಮ ರಾಜ್ಯ ದೊಡ್ಡ ಸಾಧನೆ ಮಾಡಿದೆ ಎಂದು ಕೇಂದ್ರ ಸಚಿವರು ಕೇಳಿದಾಗ ಈಜು ಎಂದು ಹೇಳಿದ್ದೆ ಎಂದರು.

ಮಲ್ಪೆಯ ಕಡಲ ಕಿನಾರೆ ಅತ್ಯಂತ ಸುಂದರವಾಗಿದ್ದು, ಇಲ್ಲಿನ ಮರಳು ಗೋವಾ ಕಡಲ ಕಿನಾರೆಯ ಮರಳಿಗಿಂತ ಉತೃಷ್ಟವಾಗಿದೆ. ಇಲ್ಲಿ ನಡೆಯುತ್ತಿರುವ ಸ್ಪರ್ಧೆ ಕ್ರೀಡಾಪಟುಗಳಿಗೆ ಉತ್ತೇಜನಕಾರಿಯಾಗಿದೆ ಎಂದರು.

ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.