ADVERTISEMENT

ಕ್ಷಯರೋಗ- ಜನಜಾಗೃತಿ ಮೂಡಿಸಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 7:30 IST
Last Updated 25 ಮಾರ್ಚ್ 2011, 7:30 IST

ಉಡುಪಿ: ನಮ್ಮ ದೇಶದಲ್ಲಿ ಕ್ಷಯರೋಗ ವ್ಯಾಪಕವಾಗಿ ಹರಡಿದ್ದು ಆ ಬಗ್ಗೆ ಜನಜಾಗೃತಿ ಹಾಗೂ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಶೇಖರ್ ಇಲ್ಲಿ ತಿಳಿಸಿದರು.ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಗುರುವಾರ ಬ್ರಹ್ಮಗಿರಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಉಡುಪಿ ತಾಲ್ಲೂಕು ಕ್ಷಯರೋಗ ನಿಯಂತ್ರಣ ಘಟಕ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವದಲ್ಲಿನ ಒಟ್ಟು ಕ್ಷಯರೋಗದ ಪ್ರಮಾಣದಲ್ಲಿ ಶೇ 20ರಷ್ಟು ನಮ್ಮ ದೇಶದಲ್ಲಿಯೇ ಈ ರೋಗ ಹರಡಿಕೊಂಡಿದೆ. ದೇಶದಲ್ಲಿ ಪ್ರತಿದಿನ ಸುಮಾರು 40 ಸಾವಿರ ಮಂದಿಗೆ ಕ್ಷಯರೋಗದ ರೋಗಾಣುಗಳು ದೇಹವನ್ನು ಸೇರಿಕೊಳ್ಳುತ್ತವೆ. ಪ್ರತಿದಿನ 1000 ಮಂದಿ ಕ್ಷಯರೋಗ ಪೀಡಿತರಾಗುತ್ತಿದ್ದಾರೆ, ಅಲ್ಲದೇ ಅಂದಾಜು ಸಾವಿರಾರು ಮಂದಿ ಈ ರೋಗದಿಂದ ದಿನಂಪ್ರತಿ ಸಾವಿಗೀಡಾಗುತ್ತಿದ್ದಾರೆ ಎಂದು ಅವರು ಹೇಳಿದರು.

ನಮ್ಮ ರಾಷ್ಟ್ರದಲ್ಲಿ ಪ್ರತಿವರ್ಷ ಕ್ಷಯರೋಗಕ್ಕಾಗಿ ಸುಮಾರು 12 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಕ್ಷಯರೋಗದ ಚಿಕಿತ್ಸೆ ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಾಡಲಾಗುತ್ತಿದೆ. ನಿಯಮಿತವಾಗಿ ಮತ್ತು ನಿಗದಿತ ಅವಧಿಯವರೆಗೆ ಈ ರೋಗಕ್ಕೆ ಚಿಕಿತ್ಸೆ ಪಡೆದರೆ ಮಾತ್ರವೇ ಈ ರೋಗವನ್ನು ಪೂರ್ಣವಾಗಿ ಗುಣಪಡಿಸಬಹುದು. ಈ ಬಗ್ಗೆ ಇನ್ನಷ್ಟು ಜನಜಾಗೃತಿ ಅನಿವಾರ್ಯ ಎಂದರು.

ಈಸಂದರ್ಭ ಸಂತ ಅಲೋಷಿಯಸ್ ಕಾಲೇಜಿನ ಸಾಮಾಜಿಕ ಕಾರ್ಯ ವಿಭಾಗ- ಪಿಎಸ್‌ಐ ಕಾಲೇಜಿನ ವಿದ್ಯಾರ್ಥಿಗಳು ಕ್ಷಯರೋಗದ ಬಗ್ಗೆ ಜನಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶಿಸಿದರು.

ಕ್ಷಯರೋಗದ ಬಗ್ಗೆ ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ಬಾಯರಿ ಉಪನ್ಯಾಸ ನೀಡಿದರು. ಕ್ಷಯರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ, ರೋಗದ ಲಕ್ಷಣಗಳು, ರೋಗ ಪತ್ತೆ, ಎಚ್‌ಐವಿ ಮತ್ತು ಏಡ್ಸ್ ರೋಗಿಗಳಲ್ಲಿ ಈ ರೋಗದ ಸೋಂಕಿಗೆ ಬೇಗನೇ ಒಳಗಾಗುವುದು, ಕಫದ ಪರೀಕ್ಷೆ, ‘ಡಾಟ್ಸ್’ ಚಿಕಿತ್ಸೆ, ಕ್ಷಯರೋಗ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು ಇತ್ಯಾದಿ ವಿಷಯಗಳ ಬಗ್ಗೆ  ಮಾಹಿತಿ ನೀಡಿದರು.

ಉಡುಪಿ ನಗರಸಭೆ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಚಂದ್ರಶೇಖರ್ ಅಡಿಗ, ಜಿಲ್ಲಾ ಪ್ರಭಾರ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ವಿಶ್ವನಾಥ ಬಿ., ವಾರ್ತಾಧಿಕಾರಿ ಜುಂಜಣ್ಣ, ಗುಣಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.