ADVERTISEMENT

ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಪತನ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 9:55 IST
Last Updated 17 ಮಾರ್ಚ್ 2012, 9:55 IST

ಉಡುಪಿ: ಉಡುಪಿ-ಚಿಕ್ಕಮಗಳೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ. ಉಪ ಚುನಾವಣೆ ಬಳಿಕ ಕೆಲವೇ ದಿನಗಳಲ್ಲಿ ಬಿಜೆಪಿ ಸರ್ಕಾರ ಪತನಗೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಇಲ್ಲಿ ಹೇಳಿದರು.

ಉಡುಪಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಭಯ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಲೆ ಕಂಡು ಬರುತ್ತಿದ್ದು, ನಮ್ಮ ಅಭ್ಯರ್ಥಿಗೆ ಬೆಂಬಲ ದೊರಕುತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಉತ್ತರ-ದಕ್ಷಿಣ ಧ್ರುವದಂತೆ ಆಗಿದ್ದಾರೆ. ಬಿಜೆಪಿ ಈಗ ಒಡೆದ ಮನೆಯಾಗಿದೆ. ಕಾಂಗ್ರೆಸ್ ಪಕ್ಷ ಸಂಘಟಿತವಾಗಿ ಈ ಚುನಾವಣೆಯನ್ನು ಎದುರಿಸುತ್ತಿದೆ ಎಂದರು.

`ಯಾವ ಇಲಾಖೆಯಲ್ಲಿ ಕೆಲಸ ಆಗುತ್ತಿಲ್ಲ, ತೋರಿಸಿಕೊಡಿ~ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಸವಾಲು ಹಾಕಿದ್ದಾರೆ. `ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?~ ಎಂದು ವ್ಯಂಗ್ಯವಾಡಿದ ಉಗ್ರಪ್ಪ, ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಸಾವಿರ ಉದಾಹರಣೆ ತೋರಿಸಿಕೊಡಬಲ್ಲೆ, ರಾಜ್ಯದ ಪ್ರತಿ ಇಲಾಖೆಯೂ ನಿಷ್ಕ್ರಿಯವಾಗಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಬಿಜೆಪಿ ಸರ್ಕಾರದ ಹಿಂದೆ ಇರುವುದು ಕೇವಲ ಅಧಿಕಾರದ ದಾಹವೇ ಹೊರತೂ ಯಾವುದೇ ಜನಪರ ಕೆಲಸಗಳೂ ಅಲ್ಲ ಎಂದು ಅವರು ಟೀಕಿಸಿದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕಾಂಗ್ರೆಸ್ ಗೆಲುವು ನಿಶ್ಚಿತ, ಬಿಜೆಪಿ ಹಗರಣಗಳ ಕೂಪವಾಗಿದ್ದು ಇವೆಲ್ಲವೂ ಕಾಂಗ್ರೆಸ್ಸಿಗೆ ಮತ ತಂದು ಕೊಡಲಿವೆ ಎಂದರು. ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಪಿ.ಸಿ.ಮೋಹನ್  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.