ADVERTISEMENT

`ಜಾನಪದ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಯಾಗಲಿ'

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 7:00 IST
Last Updated 15 ಏಪ್ರಿಲ್ 2013, 7:00 IST

ಉಡುಪಿ: `ತುಳು ಜಾನಪದ ಕ್ಷೇತ್ರದಲ್ಲಿ ಸಂಶೋಧನೆ ನಡೆದಿದ್ದು, ಸಾಹಿತ್ಯ ಕೇತ್ರದಲ್ಲಿ ಮಂದಾರ ಕೃತಿ ಬಗ್ಗೆ ಸಂಶೋಧನಾ ಗ್ರಂಥ ಬಿಡುಗಡೆ ಆಗುತ್ತಿರುವುದು ಪ್ರಥಮ ಪ್ರಯತ್ನ' ಎಂದು ಮಂಗಳೂರು ವಿಶ್ವ ವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಕೆ.ಅಭಯ ಕುಮಾರ್ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕೆಮ್ಮಲಜೆ ಜಾನಪದ ಪ್ರಕಾಶನ, ರಾಶಿ ಪ್ರಕಾಶನ ಉಡುಪಿ, ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂಕನ್ನಡ ಸ್ನಾತಕೋತ್ತರ ಆಧ್ಯಯನ ಕೇಂದ್ರದ ಆಶ್ರಯದಲ್ಲಿ ಉಡುಪಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ನಿಕೇತನಾ ಅವರ ಮಂದಾರ ರಾಮಾಯಣ `ಸ್ವರೂಪ ಮತ್ತು ಅನನ್ಯತೆ' ಸಂಶೋಧನಾ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ತುಳು ಪರಂಪರೆ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ತುಳು ಸಂಶೋಧನಾ ಗ್ರಂಥ ಬಂದಿರುವುದು ಮುಂದಿನ ಪೀಳಿಗೆಗೆ ತುಳು ಸಂಸ್ಕೃತಿ ತಿಳಿಯಲು ಅನುಕೂಲವಾಗುತ್ತದೆ. ಕೃತಿಯಲ್ಲಿ ಎಲ್ಲಾ ರಾಮಾಯಣಗಳ ಪೂರಕ ಮಾಹಿತಿ  ಇದೆ. ತುಳು ಭಾಷೆ, ಸಂಸ್ಕೃತಿ, ಸಾಹಿತ್ಯ ಸಂಶೋಧನೆ  ಮೇಲೆ  ಗ್ರಂಥ ಬೆಳಕು ಚೆಲ್ಲುತ್ತದೆ ಎಂದರು.

ತುಳು ಕಾವ್ಯ ಪರಂಪರೆ ಮೇಲೆ ಬೆಳಕು ಚೆಲ್ಲುವ ಕೃತಿ ಮಂದಾರ ಕೇಶವ ಭಟ್ ಅವರ `ಮಂದಾರ ರಾಮಾಯಣ' ನಿಕೇತನಾ ಅವರ ಸಂಶೋಧನಾ ಕೃತಿ ಸ್ನಾತಕೋತ್ತರ ಮತ್ತು ಸ್ನಾತಕ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಪೂರಕವಾಗಿದೆ ಎಂದು ಅವರು ಹೇಳಿದರು.

ತೆಂಕನಿಡಿಯೂರು  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಿ.ಯೋಗಾನಂದ ಅಧ್ಯಕ್ಷತೆ ವಹಿಸಿದ್ದರು. ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದರು. ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದದ್ರ ಸಂಶೋಧನಾಧಿಕಾರಿ ಡಾ.ರಾಜಶ್ರೀ ಕೃತಿಯ ಪರಿಚಯ ಮಾಡಿದರು. ಮಂದಾರ ರಾಮಾಯಣ ಅನನ್ಯತೆ ಕುರಿತು ಡಾ.ನಿಕೇತನಾ ಮತ್ತು ಮಂದಾರ ರಾಮಾಯಣದ ಸ್ತ್ರೀ ಪಾತ್ರಗಳ ಬಗ್ಗೆ ಬರಹಗಾರ್ತಿ ಜ್ಯೋತಿ ಚೇಳ್ಯಾರು ಮಾತನಾಡಿದರು.

ತೆಂಕನಿಡಿಯೂರು ಕಾಲೇಜು ಕನ್ನಡ ಸ್ನಾತಕೋತ್ತರ ವಿಭಾಗ ಮುಖ್ಯಸ್ಥ ಡಾ.ಗಣನಾಥ ಎಕ್ಕಾರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಡಿದರು. ಬಾಲಕೃಷ್ಣ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.