ADVERTISEMENT

`ಜಾನುವಾರು ಆಹಾರ- ಕಾಳಜಿ ಅಗತ್ಯ'

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 10:08 IST
Last Updated 15 ಡಿಸೆಂಬರ್ 2012, 10:08 IST

ಕೊಕ್ಕರ್ಣೆ (ಬ್ರಹ್ಮಾವರ): ಜಾನುವಾರುಗಳ ಆಹಾರದಲ್ಲಿ ನಾರಿನ ಅಂಶ ಅವಶ್ಯಕತೆ ಇರುವುದರಿಂದ ಬರೀ ಪಶು ಆಹಾರ ಅವಲಂಬಿಸದೇ ಅಡಿಕೆ ಹಾಳೆ, ಹಸಿ ಹುಲ್ಲು, ಒಣಹುಲ್ಲನ್ನು ಮೇವಾಗಿ ನೀಡುವುದರಿಂದ ಹಾಲಿನಲ್ಲಿ ಅಧಿಕ ಇಳುವರಿ, ಗುಣಮಟ್ಟದ ಹಾಲು ಪಡೆಯಲು ಸಾಧ್ಯ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.

ಕೊಕ್ಕರ್ಣೆಯ ನಾರಾಯಣಗುರು ಸಭಾ ಭವನದಲ್ಲಿ ಶುಕ್ರವಾರ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ, ಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಹೆನ್ನಿ ನುಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಬೆನಗಲ್ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಚೆಗ್ರಿಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ, ಬೈದೆಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ, ಕಂಗಿಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಆಧುನಿಕ ಹೈನುಗಾರಿಕೆ ಮಾಹಿತಿ ಶಿಬಿರ ಮತ್ತು ಪ್ರಾತ್ಯಕ್ಷಿಕೆ  ಸಮಾರೋಪದಲ್ಲಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ಪಡೆದು ಹೈನುಗಾರಿಕೆಯನ್ನು ಮಾಡಿದಾಗ ಮಾತ್ರ ಲಾಭ ಗಳಿಸಬಹುದು. ಇಂದು ಮಾರುಕಟ್ಟೆಯಲ್ಲಿ ಹಾಲಿನ ಉತ್ಪನ್ನಗಳಿಗೆ ಮಾತ್ರ ನಿರ್ದಿಷ್ಟ ಬೆಲೆ ಮತ್ತು ಲಾಭ ಸಿಗುತ್ತಾ ಇದೆ. ಹಾಲು ಉತ್ಪಾದಕರ ಒಕ್ಕೂಟದಿಂದ ಸಿಗುವ ಜನಶ್ರೀ, ರೈತರ ಕಲ್ಯಾಣ ಟ್ರಸ್ಟ್ ಮುಂತಾದ ಜನಪ್ರಿಯ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ತಾ.ಪಂ ಸದಸ್ಯೆ ಬೇಬಿ ಅಧ್ಯಕ್ಷತೆ ವಹಿಸಿದ್ದರು.ದ.ಕ ಹಾಲು ಒಕ್ಕೂಟದ ನಿರ್ದೇಶಕರಾದ ಐರೋಡಿ ಜಗದೀಶ ಕಾರಂತ, ಜಾನಕಿ ಹಂದೆ, ಮುಕುಂದ ನಾಯ್ಕ, ಡಾ.ಸತ್ಯನಾರಾಯಣ, ಡಾ.ಮಧುಸೂಧನ ಕಾಮತ್, ನಾಗರಾಜ ಉಳಿತಾಯ, ನಾಗೇಂದ್ರ ಶಾನುಭೋಗ್, ವಿಸ್ತರಣಾಧಿಕಾರಿ ಸುಧಾಕರ್, ಉಷಾ ಭಟ್, ಲಕ್ಷ್ಮೀ ಭಟ್ ಮತ್ತಿತರರರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿಡಾ.ಜಿ.ವಿ.ಹೆಗ್ಡೆ, ಡಾ.ನಿತ್ಯಾನಂದ ಭಕ್ತ, ಡಾ. ಮನೋಹರ ಕೆ, ಶ್ರುತಿ ಟಿ. ಕೆ. ಹೈನುಗಾರಿಕೆಯ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಬೆಳಿಗ್ಗೆ ನಡೆದ  ಶಿಬಿರವನ್ನು ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ನ ಕೆ.ಎಂ. ಉಡುಪ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.