ADVERTISEMENT

ಜಿ.ಪಂ, ತಾ.ಪಂ. ಬಹುಮತ ಇದ್ದರೂ ಆಡಳಿತಕ್ಕಾಗಿ ತಿಣುಕಾಟ

ಉಡುಪಿ ಜಿಲ್ಲೆ: ಅಧಿಕಾರಕ್ಕಾಗಿ ಬಣ-ಜಗಳ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 11:05 IST
Last Updated 19 ಡಿಸೆಂಬರ್ 2012, 11:05 IST

ಉಡುಪಿ: ಜಿಲ್ಲಾ ಪಂಚಾಯಿತಿ ಮತ್ತು ಉಡುಪಿ ತಾಲ್ಲೂಕು ಪಂಚಾಯಿತಿಯಲ್ಲಿ ಮೇಲುಗೈ ಸಾಧಿಸಲು ಬಿಜೆಪಿ ಮತ್ತು `ಎಚ್‌ಜೆಪಿ' ಬೆಂಬಲಿಗರು ಕಚ್ಚಾಡುತ್ತಿರುವುದರಿಂದ ಬಹುಮತ ಇದ್ದರೂ ಬಿಜೆಪಿ ಆಡಳಿತ ನಡೆಸಲಾಗದಂತಹ ವಿಚಿತ್ರ ಸನ್ನಿವೇಶ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಎಚ್‌ಜೆಪಿ ಎಂಬ ಪಕ್ಷವೇ ಇಲ್ಲವಲ್ಲ ಎಂದುಕೊಳ್ಳುತ್ತಿದ್ದರೆ ನಿಮ್ಮ ಊಹೆ ಸರಿ, ಎಚ್‌ಜೆಪಿ ಹೆಸರಿನ ಅಧಿಕೃತ ಪಕ್ಷ ಇಲ್ಲ. ಎಚ್‌ಜೆಪಿ ಎಂದರೆ ಹಾಲಾಡಿ ಜನತಾ ಪಾರ್ಟಿ. ಬಿಜೆಪಿಯ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬೆಂಬಲಿಗರನ್ನು ವಿರೋಧ ಪಕ್ಷದ ಸದಸ್ಯರು ಎಚ್‌ಜೆಪಿ ಪಕ್ಷದವರು ಎಂದೇ ಗುರುತಿಸುತ್ತಾರೆ.
 
ಜಿಲ್ಲೆಯಲ್ಲಿ ರಾಜಕೀಯವಾಗಿ ಪ್ರಬಲವಾಗಿರುವ ಹಾಲಾಡಿ ಅವರ ಬೆಂಬಲಿಗರು ಮತ್ತು ಬಿಜೆಪಿಯ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರ ಮಧ್ಯೆ ಅಧಿಕಾರಕ್ಕಾಗಿ ಭರ್ಜರಿ ಪೈಪೋಟಿಯೇ ನಡೆದಿದೆ. ಬಿಜೆಪಿಯವರು ಸೇರು ಎಂದರೆ ಹಾಲಾಡಿ ಬೆಂಬಲಿಗರು ಸವ್ವಾಸೇರು ಎನ್ನುತ್ತಿದ್ದಾರೆ.

ಬೈಂದೂರು ಶಾಸಕ ಕೆ. ಲಕ್ಷ್ಮಿನಾರಾಯಣ್ ಅವರು ಕೆಜೆಪಿ ಜೊತೆ ಗುರುತಿಸಿಕೊಂಡಿರುವುದನ್ನು ಬಿಟ್ಟರೆ ಜಿಲ್ಲೆಯಲ್ಲಿ ಕೆಜೆಪಿ ಆರ್ಭಟ ಇಲ್ಲ, ಆದರೆ ಎಚ್‌ಜೆಪಿಯ ಪಟ್ಟುಗಳಿಗೆ ಬಿಜೆಪಿ ತತ್ತರಿಸುತ್ತಿದೆ.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ ಜನರು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿಯ ಒಟ್ಟು 25 ಸ್ಥಾನಗಳಲ್ಲಿ 16 ಮಂದಿ ಬಿಜೆಪಿ ಸದಸ್ಯರು ಗೆಲುವು ಸಾಧಿಸಿದ್ದರೆ, 9 ಮಂದಿ ಕಾಂಗ್ರೆಸ್ ಸದಸ್ಯರು ಗೆದ್ದಿದ್ದಾರೆ.

ತಾಲ್ಲೂಕು ಪಂಚಾಯಿತಿಯಲ್ಲಿ ಬಿಜೆಪಿಯ 23 ಮತ್ತು ಕಾಂಗ್ರೆಸ್‌ನ 18 ಸದಸ್ಯರಿದ್ದಾರೆ. ಅಚ್ಚರಿ ಎನಿಸಿದರೂ ಸತ್ಯ, ಇಷ್ಟೊಂದು ಸಂಖ್ಯಾಬಲದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿದ್ದರೂ ಬಿಜೆಪಿಗೆ ಕಳೆದ ಮೂರು ತಿಂಗಳಿನಿಂದ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆಗಳೇ ನಡೆಯುತ್ತಿಲ್ಲ.

ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡದೆ ಅವಮಾನ ಮಾಡಿದ (ಇದೇ ಕಾರಣಕ್ಕೆ ಅವರು ರಾಜೀನಾಮೆ ನೀಡಿದ್ದಾರೆ) ಬಿಜೆಪಿಗೆ ತಕ್ಕ ಪಾಠ ಕಲಿಸಲು ಹಾಲಾಡಿ ಅವರ ಬೆಂಬಲಿಗರಾದ ಎಂಟು ಮಂದಿ ಜಿಲ್ಲಾ ಪಂಚಾಯಿತಿ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯನ್ನು ಬಳಸಿಕೊಂಡು ಬಂಡಾಯದ ಬಾವುಟ ಹಾರಿಸಿದ್ದರು.

`ನಾವು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತೇವೆ' ಎಂದು ಎಂಟೂ ಮಂದಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗೆ ಪತ್ರ ಕೊಟ್ಟಿದ್ದರು.

ಜಿಲ್ಲಾ ಪಂಚಾಯಿತಿಗೆ ಚುನಾವಣೆ ನಡೆದಿದ್ದರೆ ಕಾಂಗ್ರೆಸ್‌ನ ಅಭ್ಯರ್ಥಿಗಳು ಗೆಲವು ಸಾಧಿಸುವ ಸಂಭವ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಒಪ್ಪಂದ ಮಾಡಿಕೊಂಡ ಬಿಜೆಪಿ ಮತ್ತು ಹಾಲಾಡಿ ಬೆಂಬಲಿಗ ಸದಸ್ಯರು ಚುನಾವಣೆಗೆ ಗೈರು ಹಾಜರಾಗಿದ್ದರಿಂದ ಕೋರಂ ಇಲ್ಲದೆ ಚುನಾವಣೆಯನ್ನು ಮುಂದೂಡಲಾಗಿತ್ತು.

ಚುನಾವಣೆ ಮುಂದೂಡಿದ್ದು ನಿಯಮ ಬಾಹಿರ ಎಂದು ಕಾಂಗ್ರೆಸ್ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಒಂದು ತಿಂಗಳ ಹಿಂದೆ ಈ ಬಗ್ಗೆ ಆದೇಶ ನೀಡಿದೆ. ಆದರೆ ಆದೇಶದ ಪ್ರತಿ ಇನ್ನೂ ಲಭ್ಯವಾಗಿಲ್ಲ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು ಖಾಲಿ ಇವೆ.
ಮೂರು ತಿಂಗಳಿನಿಂದ ಸಾಮಾನ್ಯ ಸಭೆಯೂ ನಡೆದಿಲ್ಲ. ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಪರಿಹಾರ ಕಂಡುಕೊಳ್ಳಲು ಸದಸ್ಯರಿಗೆ ಸಾಧ್ಯವಾಗುತ್ತಿಲ್ಲ.

ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸಹ ಹಾಲಾಡಿ ಬೆಂಬಲಿಗರು ಮತ್ತು ಬಿಜೆಪಿ ಸದಸ್ಯರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಸಂಧಾನ ನಡೆಸಿದ ಜಿಲ್ಲೆಯ ಮುಖಂಡರು ಹಾಲಾಡಿ ಅವರ ಬೆಂಗಲಿಗರಾದ ಗೌರಿ ಪೂಜಾರಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯರು ತೃಪ್ತಿಪಟ್ಟಿಕೊಂಡಿದ್ದರು.

ಆದರೆ ಈ ಕಚ್ಚಾಟ ಇಷ್ಟಕ್ಕೆ ನಿಲ್ಲಲಿಲ್ಲ. ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿರುವುದರಿಂದ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಿ ಎಂದು ಬಿಜೆಪಿಯವರು ಬೇಡಿಕೆ ಇಟ್ಟಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಹಾಲಾಡಿ ಬೆಂಬಲಿಗರು ತಮ್ಮ ಬಣದ ದಿವಾಕರ ಹೆಗ್ಡೆ ಅವರು ಗೆಲುವು ಸಾಧಿಸುವಂತೆ ನೋಡಿಕೊಂಡರು.

ಇದರಿಂದ ಮುನಿಸಿಕೊಂಡಿರುವ ಬಿಜೆಪಿ ಸದಸ್ಯರು ಸಾಮಾನ್ಯ ಸಭೆಗೆ ಗೈರಾಗುವ ಮೂಲಕ ಹಾಲಾಡಿ ಬೆಂಬಲಿಗರಿಗೆ ಪಾಠ ಕಲಿಸಲು ನಿರ್ಧರಿಸಿದ್ದಾರೆ. ಡಿ.14ರಂದು ನಡೆದ ಸಾಮಾನ್ಯ ಸಭೆಗೆ ಬಿಜೆಪಿಯ ಸದಸ್ಯರು ಹಾಜರಾಗಿರಲಿಲ್ಲ. ಕೋರಂ ಕೊರತೆ ಆದ ಕಾರಣ ಸಭೆಯನ್ನು ಮುಂದೂಡಲಾಗಿತ್ತು. ಬಣ ಜಗಳ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅಂತೆಯೇ ಸಾಮಾನ್ಯ ಸಭೆಯೂ ನಡೆಯುವ ನಂಬಿಕೆ ಇಲ್ಲದಂತಾಗಿದೆ.

ಕುಂದಾಪುರದ ತಾಲ್ಲೂಕು ಪಂಚಾಯಿತಿಯಲ್ಲಿ ಹಾಲಾಡಿ ಅವರ ಬೆಂಬಲಿಗರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಬಿಜೆಪಿ ಮಾತ್ರ ಎಲ್ಲಿಯೂ ಸಲ್ಲದ ಸ್ಥಿತಿಯಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.