ಉಡುಪಿ: ಜಿಲ್ಲೆಯ 155 ಗ್ರಾಮ ಪಂಚಾಯಿತಿಗಳ 2,126 ಸ್ಥಾನಗಳಿಗೆ ಮೇ 29ರಂದು ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆಯಲಿದ್ದು, ಸಂಜೆ 5 ಗಂಟೆಯ ಒಳಗೆ ಫಲಿತಾಂಶ ಹೊರಬೀಳಲಿದೆ. ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಕುಂದಾಪುರ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಎಣಿಕೆ ಕಾರ್ಯ ಕುಂದಾಪುರ ನಗರದ ಭಂಡಾರ್‌ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ, ಉಡುಪಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಎಣಿಕೆ ನಗರದ ಸೇಂಟ್ ಸಿಸಿಲೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಕಾರ್ಕಳದ ತಾಲ್ಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಎಣಿಕೆ ಕಾರ್ಯ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.
ಒಟ್ಟು 1,396 ಸಿಬ್ಬಂದಿಯನ್ನು ಎಣಿಕೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ರ್ಯಾಂಡಮೈಸೇಷನ್ ಮೂಲಕ ಸಿಬ್ಬಂದಿಯನ್ನು ಎಣಿಕೆಗೆ ನಿಯೋಜಿಸಲಾಗುತ್ತದೆ. ಎಣಿಕೆ ಸಂದರ್ಭದಲ್ಲಿ ಮತ್ತು ಫಲಿತಾಂಶ ಹೊರಬಿದ್ದ ನಂತರ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಸುಮಾರು 1200 ಪೊಲೀಸ್ ಸಿಬ್ಬಂದಿ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಮುಂಜಾಗ್ರತೆಯಾಗಿ ಜಿಲ್ಲೆಯಲ್ಲಿ ಜೂನ್ 5ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 6ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಇದೆ. ವಿಜಯೋತ್ಸವ, ಮೆರವಣಿಗೆ, ಘೋಷಣೆ ಕೂಗಲು ಅವಕಾಶವಿಲ್ಲ. ಅಭ್ಯರ್ಥಿಗಳಾಗಲಿ ಅಥವಾ ಅವರ ಏಜೆಂಟರಾಗಲಿ ಮತ ಎಣಿಕೆ ಕೇಂದ್ರದ ಒಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.