ADVERTISEMENT

ಡಿಸಿಗೆ ಕೊಡವೂರು ಗ್ರಾಮಸ್ಥರ ಮನವಿ; ಪ್ರತಿಭಟನೆ ಎಚ್ಚರಿಕೆ.ತ್ಯಾಜ್ಯ ಪರಿಹಾರಕ್ಕೆ 15 ದಿನ ಗಡುವು.

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 10:10 IST
Last Updated 18 ಫೆಬ್ರುವರಿ 2011, 10:10 IST

ಉಡುಪಿ: ಇಂದ್ರಾಣಿ ಹೊಳೆಗೆ (ಕಲ್ಮಾಡಿ ಹೊಳೆ) ಉಡುಪಿ ನಗರಸಭೆ ವಿಸರ್ಜಿಸುತ್ತಿರುವ ತ್ಯಾಜ್ಯ ನಿಲ್ಲಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೊಡವೂರು ಗ್ರಾಮದ ನಿವಾಸಿಗಳು ಜಿಲ್ಲಾಧಿಕಾರಿಯವರಿಗೆ ಗುರುವಾರ ಮನವಿ ಸಲ್ಲಿಸಿದರು.‘ಕಲ್ಮಾಡಿ ಹೊಳೆಗೆ ನಗರಸಭೆ ತ್ಯಾಜ್ಯ’- ಅಲ್ಲಿನ ಜನರ ಸಮಸ್ಯೆಗಳ ಕುರಿತು ಫೆ.3 ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಿಬಹುದು.

ಅಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿಕೊಟ್ಟ ಅವರು, ಈ ಎಲ್ಲ ವಿಚಾರಗಳ ಬಗ್ಗೆ ಇನ್ನು 15 ದಿನಗಳೊಳಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಉಡುಪಿ ನಗರಸಭೆಗೆ ಸ್ಪಷ್ಟವಾದ ಸೂಚನೆ ನೀಡುವಂತೆ ಆಗ್ರಹಿಸಿದರು. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ತಮ್ಮ ಮನವಿ ಬಗ್ಗೆ ಸೂಕ್ತವಾಗಿ ಸ್ಪಂದಿಸಿ ಸ್ಥಳ ಪರಿಶೀಲಿಸಿ ಸಮಸ್ಯೆಗಳ ವಾಸ್ತವ ಅರಿತು ಸ್ವಚ್ಛ ಪರಿಸರದಲ್ಲಿ ತಮಗೆ ಬದುಕಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.ನಗರಸಭೆಯು ಕುಡ್ಸೆಂಪ್ ಯೋಜನೆಯೊಂದಿಗೆ ತ್ಯಾಜ್ಯ ವಿಲೇವಾರಿ ನಿರ್ವಹಿಸಲು ಮಾಡಿದ ವ್ಯವಸ್ಥೆಯ ಕರಾರಿನಲ್ಲಿ ಇಂದ್ರಾಣಿ ನದಿಯನ್ನು ಮರೆಮಾಚಲಾಗಿದ್ದು ಕೂಡಲೇ ಅದನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪ್ರಸ್ತುತ ನಿಟ್ಟೂರಿನಲ್ಲಿರುವ ಕೊಳಚೆ ನೀರು ಶುದ್ಧೀಕರಣ ಘಟಕ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ನಗರಸಭೆ ಅದನ್ನು ಕುಡ್ಸೆಂಪ್ ಯೋಜನೆಯಿಂದ ತನ್ನ ಸುಪರ್ದಿಗೆ ಪಡೆಯುವಾಗಲೂ ಅದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಕೊಳಚೆ ನೀರಿನಿಂದ ವರ್ಷಪೂರ್ತಿ ಕೃಷಿ ಅವಲಂಬಿಸಿರುವ ಇಂದ್ರಾಣಿ ನದಿ ತೀರದ ಕೃಷಿಕರು, ಆಸುಪಾಸಿನ ನಿವಾಸಿಗಳು ದುರ್ವಾಸನೆಯೊಂದಿಗೆ ವಿಚಿತ್ರ ಕಾಯಿಲೆಯಿಂದ ಬಳಲುವಂತಾಗಿದೆ. ನಗರಸಭೆಯು ಇಂದ್ರಾಣಿ ಹೊಳೆಯನ್ನು ಸಾಮಾನ್ಯ ಹೊಳೆ ಎಂದು ಕುಡ್ಸೆಂಪ್ ಯೋಜನೆಯಲ್ಲಿ ನೋಂದಾಯಿಸಿದೆ. ನಗರಸಭೆಯು ನಗರ ಪ್ರದೇಶದ ಕೊಳಚೆ ನೀರನ್ನು ಶುದ್ಧೀಕರಿಸದೇ ನೇರವಾಗಿ ಇಂದ್ರಾಣಿ ನದಿಗೆ ಬಿಡುತ್ತಿದೆ ಎಂದು ಸ್ಥಳೀಯರು ದೂರಿದರು.

ಇಂದ್ರಾಣಿ ನದಿ ನೀರನ್ನು ಸಂಗ್ರಹಿಸಿ ಪ್ರಯೋಗ ಶಾಲೆಗೆ ಕಳುಹಿಸಿ ರಾಸಾಯನಿಕ ಪರೀಕ್ಷೆಗೊಳಪಡಿಸಿ ಅದರಲ್ಲಿರುವ ಸಾಂಕ್ರಾಮಿಕ ರೋಗಕಾರಕ ಅಂಶಗಳು ಹಾಗೂ ವಿಷಯುಕ್ತ ಪದಾರ್ಥಗಳ ಬಗ್ಗೆ ವರದಿ ತರಿಸಿ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.ತಂಡದಲ್ಲಿ ಸುಮನಸಾ ಕೊಡವೂರು ತಂಡದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದಿವಾಕರ ಶೆಟ್ಟಿ, ರತ್ನಾಕರ್ ಅಮೀನ್, ಕಾಂತಪ್ಪ ಕರ್ಕೆರ, ಪ್ರಕಾಶ್ ಜಿ., ಸಂಪ ಪೂಜಾರಿ, ಸುಂದರ ಜೆ., ಕೃಷ್ಣ ಅಮೀನ್, ಯವುಜೀನ್ ಲಸ್ರಾದೋ ಇದ್ದರು. ನಂತರ ನಗರಸಭೆ ಆಯುಕ್ತರಿಗೆ ಕೂಡ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.