ADVERTISEMENT

ತಡವರಿಸಿದ ಅಧಿಕಾರಿಗಳು, ಬೆವರಿಳಿಸಿದ ಸಚಿವ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 8:35 IST
Last Updated 9 ಅಕ್ಟೋಬರ್ 2012, 8:35 IST

ಬಂಟ್ವಾಳ: ತಾಲ್ಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮತ್ತು ವಸತಿ ಸೌಲಭ್ಯದ ಜೊತೆಗೆ ವಿದ್ಯುತ್ ಪೂರೈಕೆ ಹಾಗೂ ಕುಡಿಯುವ ನೀರಿನ ಕೊರತೆ ಒಂದೆಡೆಯಾದರೆ ವಿವಿಧ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಸೋಮವಾರ ನಡೆದಿದೆ.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ವಿವಿಧ ಇಲಾಖೆ ಅಧಿಕಾರಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದಾಗ ಅಧಿಕಾರಿಗಳು ಉತ್ತರ ನೀಡಲು ತಡವರಿಸಿ, ಬೆವರು ಒರೆಸಿಕೊಂಡರು.

ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದ್ಕೋಳಿ, ಪಾಂಡವರಕಲ್ಲು ಮತ್ತಿತರ ಕಡೆಗಳಲ್ಲಿ ಕುಡಿಯುವ ನೀರಿನ ಕೊರತೆ ಬಗ್ಗೆ ಸ್ಥಳೀಯರು ಸಚಿವರಿಗೆ ನೇರವಾಗಿ ಮನವಿ ಸಲ್ಲಿಸಿದ್ದು, ಇದೇ ಮಾದರಿಯಲ್ಲಿ ಒಟ್ಟು 10 ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಇದೆ ಎಂಬುದು ಸಭೆಯಲ್ಲಿ ಸಚಿವರ ಗಮನಕ್ಕೆ ಬಂತು.

`ನಮ್ಮ ಗ್ರಾಮ ನಮ್ಮ ರಸ್ತೆ~ ಯೋಜನೆಯಡಿ ವಿದ್ಯುತ್ ಸಂಪರ್ಕ ಮತ್ತು ಕಂಬ ಸ್ಥಳಾಂತರ ವೇಳೆ ಮೆಸ್ಕಾಂ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಪರಸ್ಪರ ಸಮನ್ವಯದೊಂದಿಗೆ ಇರಲು  ಮೆಸ್ಕಾಂನ ಸಹಾಯಕ ಎಂಜಿನಿಯರ್‌ಗೆ ಸಚಿವರು ಸೂಚಿಸಿದರು.

ತಪ್ಪು ಮಾಹಿತಿಗೆ ಏನು ಶಿಕ್ಷೆ...?: ತಾಲ್ಲೂಕಿನಲ್ಲಿ ಒಟ್ಟು 235 ಎಪಿಎಲ್ ಮತ್ತು 1,527 ಬಿಪಿಎಲ್ ಹೀಗೆ ಒಟ್ಟು 1,762 ಮನೆಗೆ ವಿದ್ಯುತ್ ಸಂಪರ್ಕ ಬಾಕಿಯಿದ್ದು, ಈ ಪೈಕಿ 538 ಮನೆ ಬಗ್ಗೆ ಸಭೆಗೆ ತಪ್ಪು ಮಾಹಿತಿ ನೀಡಿದ ಮೆಸ್ಕಾಂನ ಸಹಾಯಕ ಎಂಜಿನಿಯರ್ ಯಶವಂತ ಅವರನ್ನು ಇದಕ್ಕೆ ಏನು ಶಿಕ್ಷೆ ಎಂದು ಸಚಿವರು ಪ್ರಶ್ನಿಸಿದರು.
ಅಸಂಘಟಿತ ಕಾರ್ಮಿಕರಿಗೆ ಸರಕಾರವು ರೂಪಿಸಿರುವ ಪಿಂಚಣಿ ಮತ್ತು ಅಪಘಾತ ವಿಮೆ ಬಗ್ಗೆ ತಕ್ಷಣವೇ ಮಾಹಿತಿ ನೀಡಿ ಫಲಾನುಭವಿಗಳನ್ನು ಗುರುತಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗೆ ಎಚ್ಚರಿಸಿದರು.

ತಾಲ್ಲೂಕಿನ ರಾಯಿ ಗ್ರಾ.ಪಂ.ವ್ಯಾಪ್ತಿಯ ಹೋರಂಗಳ, ನರಿಕೊಂಬು ಗ್ರಾಮ ಪಂಚಾಯಿತಿ ಮತ್ತಿತರ ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಅಬಕಾರಿ ಪೊಲೀಸರಿಗೆ ಎಚ್ಚರಿಕೆ ನೀಡಿದರು.

ಹಲವಾರು ಮಂದಿ ಫಲಾನುಭವಿಗಳಿಗೆ ಬಸವ ವಸತಿ ಯೋಜನೆಯಡಿ ಮಂಜೂರಾದ ಮನೆ ರದ್ದುಗೊಂಡಿರುವ ಬಗ್ಗೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.

ಪೊಲೀಸರಿಗೆ ದೂರು:

ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳಿಗೆ ಮಂಜೂರಾದ ಗಂಗಾ ಕಲ್ಯಾಣ ಕೊಳವೆ ಬಾವಿ ಕೊರೆಯುವಲ್ಲಿ ವಿಫಲವಾಗಿರುವ ಗುತ್ತೆದಾರರ ವಿರುದ್ಧ ವಂಚನೆ ಪ್ರಕರಣ, ಸಮಾಜ ಕಲ್ಯಾಣ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ವಿಳಂಬ ಧೋರಣೆ ಅನುಸರಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಕೂಡಲೇ ~ದಲಿತ ದೌರ್ಜನ್ಯ~ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ದೂರು ಸಲ್ಲಿಸಲು ಸಚಿವರು ಸೂಚಿಸಿದರು.

ಪಶು ಸಂಗೋಪನಾ ಇಲಾಖೆಗೆ ಸಂಬಂಧಿಸಿದಂತೆ ಕಳೆದ 2007ರಲ್ಲಿ ಜಾನುವಾರು ಗಣತಿ ನಡೆಸಲಾಗಿದ್ದು, ಪ್ರಸಕ್ತ ತಾಲ್ಲೂಕಿನಲ್ಲಿ ಒಟ್ಟು 56 ಹುದ್ದೆ ಖಾಲಿಯಿದೆ. ಸಾಮಾಜಿಕ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಕೇವಲ ಮೂರು ಮಂದಿ ಸಿಬ್ಬಂದಿಯಿದ್ದರೂ ಮನೆ ಬಾಡಿಗೆ ಮತ್ತು ವೇತನ ಹೀಗೆ ವಾರ್ಷಿಕ ಖರ್ಚು ಹೆಚ್ಚಳವಾಗುತ್ತಿರುವ ಬಗ್ಗೆ ಸಚಿವರು ರೇಗಿದರು.

ದೇವರು ಕೊಟ್ಟರೂ ಪೂಜಾರಿ ಬಿಡ: ತಾಲ್ಲೂಕಿನಲ್ಲಿ ಒಟ್ಟು 30ಸಾವಿರ ಮಂದಿ ಸಣ್ಣ ಮತ್ತು ಅತಿ ಸಣ್ಣ ರೈತರಿದ್ದು, 1,400 ಮಂದಿ ಅರ್ಹ ಫಲಾನುಭವಿಗಳಿದ್ದಾರೆ. ಈ ಬಾರಿ ಕೇವಲ 4ಮಂದಿ ಅರ್ಜಿ ಸಲ್ಲಿಸಿದ್ದು, ಮೂವರನ್ನು ಆಯ್ಕೆಗೊಳಿಸಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ನೀಡಿದ ಉತ್ತರಕ್ಕೆ~ದೇವರು ಕೊಟ್ಟರೂ ಪೂಜಾರಿ ಬಿಡ~ ಎಂದು ಸಚಿವರು ಉದ್ಘರಿಸಿದರು.

ತುಂಬೆ ಪುನರ್ ಸರ್ವೆಗೆ ಸೂಚನೆ: ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 13ಮೀಟರ್ ಎತ್ತರದ ಅಣೆಕಟ್ಟೆಯಲ್ಲಿ 7ಮೀಟರ್ ನೀರು ಸಂಗ್ರಹ ಮತ್ತಿತರ ಗೊಂದಲದಿಂದ ಸ್ಥಳೀಯರಲ್ಲಿ ಆತಂಕ ಎದುರಾಗಿದ್ದು, ಈ ಬಗ್ಗೆ ಕೂಡಲೇ ಪುನರ್‌ಸರ್ವೆ ನಡೆಸಿ ಸ್ಥಳೀಯರಿಗೆ ಸೂಕ್ತ ಮಾಹಿತಿ ಮತ್ತು ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.

ಶಾಸಕರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಜಿ.ಪಂ.ಅಧ್ಯಕ್ಷ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ರಿತೇಶ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಶೈಲಜಾ ಪಿ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವೆ ಎಸ್.ಮಾವೆ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್, ಪುರಸಭಾಧ್ಯಕ್ಷ ಬಿ.ದಿನೇಶ ಭಂಡಾರಿ, ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ವಿಜಯಪ್ರಕಾಶ್, ಸಹಾಯಕ ಆಯುಕ್ತ ಡಾ.ವೆಂಕಟೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.