ADVERTISEMENT

ದಾಖಲೆ ಸಮೇತ ಮಾಹಿತಿ ಸಂಗ್ರಹಣೆಗೆ ಸೂಚನೆ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 9:35 IST
Last Updated 22 ಮಾರ್ಚ್ 2014, 9:35 IST

ಚಿಕ್ಕಮಗಳೂರು: ಈಗಾಗಲೇ ಲೋಕಸಭಾ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ  ಸಂಬಂಧಿಸಿದಂತೆ ದಾಖಲೆ ಸಮೇತ ಮಾಹಿತಿ ಸಂಗ್ರಹಿಸಬೇಕೆಂದು ಅಧಿಕಾರಿಗಳಿಗೆ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರಾದ ರಂಜನಾ ಝಾ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ಪಾಟಿಕ್ ಸರ್ವೆಲೆನ್ಸ್ ಸಮಿತಿ, ಕಣ್ಗಾವಲು ಸಮಿತಿ ಹಾಗೂ ಮಾಧ್ಯಮ ನಿಗಾ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಕುರಿತು ಮಾಹಿತಿ ನೀಡಿ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಚಟುವಟಿಕೆ ಮೇಲೆ ನಿಗಾ ವಹಿಸಬೇಕು. ವೀಡಿಯೋ, ವೀವಿಂಗ್ ತಂಡ ಮತ್ತು ವೀಡಿಯೋ ಸರ್ವೆ ಲೆನ್ಸ್ ತಂಡದವರು ರಾಜಕೀಯ ಪಕ್ಷದವರು ನಡೆಸುವ ರ್‍್ಯಾಲಿ, ಸಮಾವೇಶ, ರೋಡ್ ಶೋ ಸೇರಿದಂತೆ ಇತರೆ ಕಾರ್ಯ­ಕ್ರಮಗಳನ್ನು ಸ್ಥಳದಲ್ಲಿಯೇ ಚಿತ್ರೀಕರಿಸಿ­ಕೊಳ್ಳಬೇಕೆಂದು ಸೂಚಿಸಿದರು.

ಕಾರ್ಯಕ್ರಮಕ್ಕೆ ಎಷ್ಟು ವಾಹನಗಳನ್ನು ಬಳಕೆಮಾಡಿಕೊಳ್ಳಲಾಗಿದೆ. ಅವುಗಳ ನೋಂದಣಿ ಸಂಖ್ಯೆ, ತಾರಾ ಪ್ರಚಾರಕರು ಮತ್ತು ಮುಖಂಡರು ಭಾಗವಹಿಸಿರುವುದು, ಪೆಂಡಲ್ ಅಳತೆ, ಕುರ್ಚಿಗಳ ಬಳಕೆ, ಊಟದ ವ್ಯವಸ್ಥೆ ಸೇರಿದಂತೆ ಇತರೆ ಸಂಗತಿಗಳನ್ನು ವೀಡಿಯೋ ಮಾಡಬೇಕು. ವಿ.ವಿ.ಟಿ. ಮುಖ್ಯಸ್ಥರು ಖರ್ಚು ಎಷ್ಟು ಎಂಬುದನ್ನು ಅಂದಾಜಿಸಬೇಕೆಂದು ಹೇಳಿದರು.

ಎಸ್.ಎಸ್.ಟಿ.ತಂಡದವರು ಚೆಕ್ ಪೋಸ್ಟ್ ಗಳಲ್ಲಿ ರಾಜಕೀಯ ಪಕ್ಷದವರ ವಾಹನ ಹಾಗೂ ಇತರೆ ವಾಹನಗಳನ್ನು ತಪ್ಪದೆ ತಪಾಸಣೆಯನ್ನು ವೀಡಿಯೋ ಚಿತ್ರೀಕರಣದೊಂದಿಗೆ ಮಾಡಬೇಕು. ₨ 50ಸಾವಿರ ಮೇಲ್ಪಟ್ಟ ಹಣ, ಸೀರೆ, ಬಟ್ಟೆ, ಆಭರಣಗಳು ಹಾಗೂ ಮದ್ಯ ಸಾಗಣೆಯನ್ನು ತಡೆಗಟ್ಟಬೇಕೆಂದು ತಿಳಿಸಿದರು.

ಮಾಧ್ಯಮ ನಿಗಾ ಸಮಿತಿಯವರು ಪತ್ರಿಕೆ ಹಾಗೂ ದೃಶ್ಯಮಾಧ್ಯಮಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪರವಾಗಿ ನೀಡುವ ಜಾಹಿರಾತು, ಕಾಸಿಗಾಗಿ ಸುದ್ದಿ ಇದ್ದಲ್ಲಿ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕೆಂದರು.

ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಎಸ್ಪಿ ಚೇತನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ­ನಿರ್ವಹಣಾ­ಧಿಕಾರಿ ಪಿ.ಬಿ.ಕರುಣಾಕರ್, ಉಪವಿಭಾಗಾಧಿ­ಕಾರಿಗಳಾದ ಕೆ.ಚನ್ನಬಸವಪ್ಪ, ಅನುರಾಧಾ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.