ADVERTISEMENT

ಧನುಷ್ಕೋಟಿಯಲ್ಲಿ ಧುಮ್ಮಿಕ್ಕುತ್ತಿದ್ದಾಳೆ ಕಾವೇರಿ

ಚುಂಚನಕಟ್ಟೆ: ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು, ಸೀತಾ ಬಚ್ಚಲಿಗೆ ಮಹಿಳೆಯರಿಂದ ಪೂಜೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 10:07 IST
Last Updated 13 ಜೂನ್ 2018, 10:07 IST
ಸಾಲಿಗ್ರಾಮ ಸಮೀಪ ಚುಂಚನಕಟ್ಟೆ ಗ್ರಾಮದ ಹೊರ ವಲಯದಲ್ಲಿರುವ ಧನುಷ್ಕೋಟಿ ಜಲಪಾತದಲ್ಲಿ ಧುಮ್ಮಿಕ್ಕುತ್ತಿರುವ ಕಾವೇರಿ ನದಿ
ಸಾಲಿಗ್ರಾಮ ಸಮೀಪ ಚುಂಚನಕಟ್ಟೆ ಗ್ರಾಮದ ಹೊರ ವಲಯದಲ್ಲಿರುವ ಧನುಷ್ಕೋಟಿ ಜಲಪಾತದಲ್ಲಿ ಧುಮ್ಮಿಕ್ಕುತ್ತಿರುವ ಕಾವೇರಿ ನದಿ   

ಸಾಲಿಗ್ರಾಮ: ಕೊಡಗಿನಲ್ಲಿ ವರ್ಷಧಾರೆ ಹೆಚ್ಚಾಗುತ್ತಿದ್ದಂತೆ ಕಾವೇರಿ ನದಿಯಲ್ಲಿ ಹರಿವು ಹೆಚ್ಚಾಗಿದ್ದು, ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಬಳಿ ಇರುವ ಪುರಾಣ ಪ್ರಸಿದ್ಧ ಸೀತಾ ಬಚ್ಚಲು ಹಾಗೂ ಧನುಷ್ಕೋಟಿ ಜಲಪಾತ ಭೋರ್ಗರೆಯುತ್ತಿವೆ.

ಆ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೆರೆ ಹೊರೆಯ ಜಿಲ್ಲೆಗಳಿಂದ ಪ್ರವಾಸಿಗರ ದಂಡು ಇಲ್ಲಿಗೆ ಹರಿದುಬರುತ್ತಿದೆ.

ಶ್ರೀರಾಮ ವನವಾಸ ಮಾಡುತ್ತಿದ್ದ ದಿನಗಳಲ್ಲಿ ಪತ್ನಿ ಸೀತಾಮಾತೆ ನೀರು ಕೇಳಿದಾಗ ತನ್ನ ಬಳಿ ಇದ್ದ ಬಿಲ್ಲನ್ನು ಬಿಟ್ಟು ಜಲಧಾರೆ ಬರುವಂತೆ ಮಾಡಿದ ಎಂಬ ಪ್ರತೀತಿ ಇರುವ ಸ್ಥಳವನ್ನು ಧನುಷ್ಕೋಟಿ ಎಂದು ಕರೆಯಲಾಗುತ್ತಿದೆ. ಈ ಜಲಪಾತದಲ್ಲಿ ನೀರು ನೊರೆಯಾಗಿ ಬೀಳುವುದನ್ನು ನೋಡುವುದೇ ಒಂದು ಸಂಭ್ರಮ.

ADVERTISEMENT

ಈ ಸ್ಥಳದಲ್ಲಿ ಸೀತಾಮಾತೆ ಸ್ನಾನ ಮಾಡುತ್ತಿದ್ದರು. ಅದ್ದರಿಂದ ಇಲ್ಲಿ ಹರಿಯುವ ನೀರು ಶೀಗೆ ಮಿಶ್ರಣದಂತೆ ಕಾಣುತ್ತದೆ ಎಂಬ ನಂಬಿಕೆ ಇದ್ದು, ಅನೇಕ ಮಹಿಳಾ ಪ್ರವಾಸಿಗರು ಇಲ್ಲಿ ಕಾವೇರಿಗೆ ಪೂಜೆ ಸಲ್ಲಿಸಿ ಹೋಗುತ್ತಾರೆ. ಅಲ್ಲದೇ, ಸಮೀಪದಲ್ಲೇ ಇರುವ ಕೋದಂಡರಾಮನ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.

ಧನುಷ್ಕೋಟಿಯಲ್ಲಿ ಸುಮಾರು 45 ಅಡಿ ಎತ್ತರದಿಂದ ಭೋರ್ಗರೆಯುತ್ತ ಧುಮ್ಮಿಕ್ಕುವ ಸದ್ದು ಸುಮಾರು ಒಂದು ಮೈಲಿ ದೂರಕ್ಕೆ ಕೇಳಿಸುತ್ತದೆ. ಆದರೆ, ಕೋದಂಡರಾಮನ ದೇವಾಲಯದ ಒಳಗಡೆ ಸ್ವಲ್ಪವೂ ಶಬ್ಧ ಕೇಳಿಸದೇ ಇರುವುದು ಸಹ ಅಚ್ಚರಿಗೆ ಕಾರಣವಾಗಿದೆ.

ಪ್ರಕೃತಿಯ ಸೊಬಗನ್ನು ಹೊಂದಿರುವ ಚುಂಚನಕಟ್ಟೆ ಗ್ರಾಮವನ್ನು ಒಂದು ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು. ಅಲ್ಲದೇ, ಈ ಬಾರಿ ಜಲಪಾತೋತ್ಸವಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಕರೆಸಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ತಿಳಿಸಿದ್ದಾರೆ.

ಮೈಸೂರಿನ ಸಿಎಫ್‌ಟಿಆರ್‌ಐನ ವಿಜ್ಞಾನಿ ಈಚೆಗೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಹಿನ್ನೆಲೆಯಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.