ADVERTISEMENT

ನಕ್ಸಲ್ ನಿಗ್ರಹಕ್ಕೆ 15 ಹೊಸ ಶಿಬಿರ: ಡಿಜಿಪಿ ಅಲೋಕ್ ಯೋಜನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 10:05 IST
Last Updated 3 ಸೆಪ್ಟೆಂಬರ್ 2011, 10:05 IST

ಹೆಬ್ರಿ: ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆಯನ್ನು ಬೇರು ಸಹಿತ ಕಿತ್ತು ಹಾಕಲು ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ 15 ನಕ್ಸಲ್ ನಿಗ್ರಹ ಪಡೆಯ ಶಿಬಿರ ಆರಂಭಿಸಲು ರಾಜ್ಯದ ನಕ್ಸಲ್ ನಿಗ್ರಹ ಪಡೆಯ ನೂತನ ಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ದಾರೆ. ಪೊಲೀಸ್ ಮೂಲಗಳು ಈ ಮಾಹಿತಿ ನೀಡಿವೆ.

ಎಎನ್‌ಎಫ್ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಲೋಕ್ ಕುಮಾರ್ ಅವರು, ಮಂಗಳವಾರದಿಂದ ನಕ್ಸಲ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು. ನಕ್ಸಲ್ ನಿಗ್ರಹ ಪಡೆ ಶಿಬಿರಗಳಿಗೆ ಗುರುವಾರ ಭೇಟಿ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದರು.
 
ಹೆಬ್ರಿ, ಕಾರ್ಕಳ, ಶಂಕರನಾರಾಯಣ, ಅಮಾಸೆಬೈಲು, ಜಡ್ಡಿನಗದ್ದೆ ಪ್ರದೇಶಕ್ಕೆ ನಕ್ಸಲ್ ಪೀಡಿತ ಭೇಟಿ ನೀಡಿದ್ದ ಅವರು, ನಕ್ಸಲ್ ನಾಯಕ ಕೂಡ್ಲು ವಿಕ್ರಂಗೌಡನ ಹುಟ್ಟೂರು ನಾಡ್ಪಾಲು ಗ್ರಾಮಕ್ಕೂ ತೆರಳಿ ಅಲ್ಲಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು ಎಂದು ಮೂಲಗಳು ತಿಳಿಸಿವೆ.

`ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಯಶಸ್ಸು ದೊರೆಯುವ ರೀತಿ ಕೆಲಸ ಮಾಡಲೇಬೇಕು~ ಎಂದು ಎಎನ್‌ಎಫ್ ಸಿಬ್ಬಂದಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ನಕ್ಸಲ್ ನಿಗ್ರಹ ಪಡೆಯ ವರಿಷ್ಠಾಧಿಕಾರಿ ವಾಸುದೇವ ಮೂರ್ತಿ, ಹೆಬ್ರಿ ನಕ್ಸಲ್ ನಿಗ್ರಹ ಪಡೆಯ ಸಹಾಯಕ ಕಮಾಡೆಂಟ್ ವಿ.ಎಸ್.ನಾಯಕ್ ಸೇರಿದಂತೆ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಡಿಜಿಪಿ ಜತೆ ಇದ್ದರು.

ನಾಡ್ಪಾಲಿನ್ಲ್ಲಲೂ ಶಿಬಿರ
ಹೆಬ್ರಿಯಲ್ಲಿರುವ ಸಹಾಯಕ ಕಮಾಡೆಂಟ್ ನೇತೃತ್ವದ ನಕ್ಸಲ್ ನಿಗ್ರಹ ಪಡೆ ಶಿಬಿರವನ್ನು ಉಳಿಸಿಕೊಂಡು, ನಾಡ್ಪಾಲು ವನಜಾರಿನಲ್ಲಿ ಮತ್ತೊಂದು ಕ್ಯಾಂಪ್ ಆರಂಭಿಸಲು ಡಿಜಿಪಿ ಆಲೋಕ್ ಕುಮಾರ್ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅದಕ್ಕೆ ಬೇಕಾದ ಸಿದ್ಧತೆ ಆರಂಭವಾಗಿದ್ದು, ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆದಿದೆ. ನಾಡ್ಪಾಲು ಗ್ರಾಮಕ್ಕೆ ನಕ್ಸಲರ ಭೇಟಿಯೂ ಸೇರಿದಂತೆ ಇಲ್ಲಿ ನಕ್ಸಲರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸ್ಪಷ್ಟ ಮಾಹಿತಿ ಇರುವ ಹಿನ್ನೆಲೆಯಲ್ಲಿ ನೂತನ ಹಿನ್ನಲೆ ಡಿಜಿಪಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದ ಮಲೆನಾಡಿನಲ್ಲಿ ನಕ್ಸಲರ ಬೆನ್ನು ಹತ್ತಲು ಸಹಕಾರಿ ಎಂಬುದು ಅವರ ಯೋಚನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.