ADVERTISEMENT

ನಷ್ಟದಲ್ಲಿದ್ದ ಕೆಎಸ್‌ಐಐಡಿಸಿ ಲಾಭದತ್ತ

​ಪ್ರಜಾವಾಣಿ ವಾರ್ತೆ
Published 9 ಜನವರಿ 2011, 10:45 IST
Last Updated 9 ಜನವರಿ 2011, 10:45 IST

ಮಂಗಳೂರು: ‘ಕಳೆದ ಎರಡು ವರ್ಷದಲ್ಲಿ ಹಮ್ಮಿಕೊಂಡ ವಿನೂತನ ಕಾರ್ಯಕ್ರಮಗಳಿಂದಾಗಿ ನಷ್ಟದಲ್ಲಿದ್ದ ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಲಾಭದಾಯಕ ಸಂಸ್ಥೆಯಾಗಿ ಮಾರ್ಪಟ್ಟಿದೆ’ ಎಂದು ನಿಗಮದ ಅಧ್ಯಕ್ಷ ಹಾಗೂ ಶಾಸಕ ಎನ್.ಯೋಗೀಶ್ ಭಟ್ ತಿಳಿಸಿದರು.

ಇಲ್ಲಿನ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧ್ಯಕ್ಷರಾದ ಬಳಿಕ ರೂ 44,632 ಕೋಟಿ ವೆಚ್ಚದ ಒಟ್ಟು 27 ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೆಎಸ್‌ಐಐಡಿಸಿ ನೇತೃತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೈಕಿ 3ಸಾವಿರ ಕೋಟಿ ವೆಚ್ಚದಲ್ಲಿ ತದಡಿ ಬಂದರು ಅಭಿವೃದ್ಧಿ ಪಡಿಸುವ ಮೊದಲ ಹಂತದ ಯೋಜನೆ ಕುರಿತು ಅಧ್ಯಯನ ನಡೆಯುತ್ತಿದೆ. 9ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೇವನಹಳ್ಳಿ ವಾಣಿಜ್ಯ ಪಾರ್ಕ್ (ಡಿಬಿಪಿ) ಹರಾಜು ಪ್ರಕ್ರಿಯೆಗೆ ಹಾಗೂ ಬಳ್ಳಾರಿಯಲ್ಲಿ 30ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಮಗ್ರ ಯೋಜನೆ ರೂಪಿಸಲು ಸಲಹೆಗಾರರ ನೇಮಿಸಿಕೊಳ್ಳಲು ಸರ್ಕಾರದ ಅನುಮತಿ ಮಾತ್ರ ಬಾಕಿ ಇದೆ. ಜಿಎಐಎಲ್ ಸಂಸ್ಥೆಯ ಸಹಯೋಗದಲ್ಲಿ ನಡೆಯುವ ರೂ 6 ಸಾವಿರ ಕೋಟಿ ವೆಚ್ಚದ ಧಾಬೋಲ್-ಬೆಂಗಳೂರು ಗ್ಯಾಸ್ ಪೈಪ್‌ಲೈನ್ ಯೋಜನೆಯ ಕಾಮಗಾರಿ ಈಗಾಗಲೇ ಆರಂಭವಾಗಿದೆ’ ಎಂದರು.

ಮಂಗಳಾ ಕಾರ್ನಿಷ್ ಯೋಜನೆಗೆ ಸಂಬಂಧಿಸಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕೆಐಪಿಡಿಸಿ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಮಂಗಳೂರು ದಕ್ಷಿಣ ಘಟಕ ಅಧ್ಯಕ್ಷ ಶ್ರೀಕರ ಪ್ರಭು, ರಾಜ್ಯ ಮೀನುಗಾರಿಕಾ ನಿಗಮ ಅಧ್ಯಕ್ಷ ನಿತಿನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.