ADVERTISEMENT

ನಿರ್ವಹಣೆಯಿಲ್ಲದೆ ಸೊರಗುತ್ತಿರುವ ಆಶ್ರಮ ಶಾಲೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 9:27 IST
Last Updated 25 ಅಕ್ಟೋಬರ್ 2017, 9:27 IST
ಆರ್ಡಿ ಆಶ್ರಮ ಶಾಲೆಯ ಕೋಣೆಯಲ್ಲಿರುವ ಶಿಥಿಲಗೊಂಡಿರುವ ಸಾಮಗ್ರಿಗಳು
ಆರ್ಡಿ ಆಶ್ರಮ ಶಾಲೆಯ ಕೋಣೆಯಲ್ಲಿರುವ ಶಿಥಿಲಗೊಂಡಿರುವ ಸಾಮಗ್ರಿಗಳು   

ಸಿದ್ದಾಪುರ: ‘ವಸತಿ ಸಹಿತ ಆಶ್ರಮ ಶಾಲೆಗೆಂದು ನಿರ್ಮಾಣವಾದ ಕಟ್ಟಡ ನಿರ್ವಹಣೆಯ ಕೊರತೆಯಿಂದ ಬಿದ್ದು ಹೋಗುವ ಸ್ಥಿತಿ ತಲುಪಿದ್ದರೂ ಅಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆ ಇನ್ನೂ ಎಚ್ಚರಗೊಂಡಿಲ್ಲ’ ಎಂದು ದೂರುತ್ತಾರೆ ಸ್ಥಳೀಯ ನಿವಾಸಿ ರೋಹಿತ್ ಶೆಟ್ಟಿ.

‘ಬೆಳ್ವೆ ಗ್ರಾಮ ಪಂಚಾಯಿತಿ ಅಲ್ಬಾಡಿ ಗ್ರಾಮದ ಆರ್ಡಿಯಲ್ಲಿ ಬಹಳ ವರ್ಷಗಳ ಹಿಂದೆಯೇ ವಸತಿ ಸಹಿತ ಆಶ್ರಮ ಶಾಲೆ ಮಂಜೂರಾಗಿತ್ತು. ಹಲವು ವಿಘ್ನಗಳನ್ನು ಎದುರಿಸಿ ಪ್ರಾರಂಭವಾದ ಶಾಲೆ ಒಂದೆರಡು ವರ್ಷಗಳವರೆಗೆ ಚೆನ್ನಾಗಿ ನಡೆದಿತ್ತು. ನಂತರದ ದಿನಗಳಲ್ಲಿ ಮಕ್ಕಳ ಕೊರತೆಯಿಂದ ಆಶ್ರಮ ಶಾಲೆ ಸ್ಥಗಿತಗೊಂಡಿತ್ತು. ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿದ್ದ ಶಾಲೆ ಮಕ್ಕಳಿಲ್ಲದೇ ಮುಚ್ಚಿದ ನಂತರ ಕಟ್ಟಡ ಖಾಲಿಯಿದ್ದರೂ ನಿರ್ವಹಣೆ ಮಾಡುವಲ್ಲಿ ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದರು’ ಎನ್ನುತ್ತಾರೆ ಅವರು.

‘ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ಕಟ್ಟಡದಲ್ಲಿ ಐಟಿಡಿಪಿ ಇಲಾಖೆಯು ಜಿಲ್ಲೆಯ ಕೊರಗ ಸಮುದಾಯದ ಹೆಣ್ಣುಮಕ್ಕಳಿಗೆ ಕೈಮಗ್ಗ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ತರಬೇತಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಇಲಾಖೆ ವತಿಯಿಂದ ನೀಡಿದ್ದು, ತರಬೇತಿ ಮುಗಿದ ನಂತರವೂ ಕಟ್ಟಡದಲ್ಲಿಯೇ ಉಳಿಸಿಕೊಂಡಿದ್ದರಿಂದ ಉಪಯೋಗವಿಲ್ಲದೆ ವ್ಯರ್ಥವಾಗಿದೆ. ಮರದ ಸಾಮಗ್ರಿಗಳು ಗೆದ್ದಲು ಹಿಡಿದು ಪ್ರಯೋಜನಕ್ಕೆ ಬಾರದಂತಾಗಿದ್ದರೂ ಅಧಿಕಾರಿಗಳು ಇದನ್ನು ಕಣ್ಣೆತ್ತಿಯೂ ಕೂಡ ನೋಡದಿರುವುದು ದುರಂತ’ ಎಂದು ದೂರುತ್ತಾರೆ ಸ್ಥಳೀಯರು.

ADVERTISEMENT

‘ವಸತಿಯುತ ಆಶ್ರಮ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯ ಅಳವಡಿಸಲಾಗಿತ್ತು. ಸೋಲಾರ್ ವಾಟರ್‌ ಹೀಟರ್, ಕುಡಿಯುವ ನೀರಿನ ಟ್ಯಾಂಕ್ ಸೇರಿದಂತೆ ಹಲವು ಸೌಲಭ್ಯಗಳಿದ್ದವು. ಆದರೆ ಮಕ್ಕಳ ಕೊರತೆಯಿಂದ ಶಾಲೆ ಮುಚ್ಚಿದ್ದರಿಂದ ಅಳವಡಿಸಿದ ಸವಲತ್ತುಗಳು ಕೂಡ ಕಾಲಕ್ರಮೇಣ ಕಣ್ಮರೆಯಾದವು. ಪ್ರಸ್ತುತ ಕಟ್ಟಡವಿದ್ದು ಅದರ ಮರದ ಸಾಮಗ್ರಿಗಳು ಹಾಳಾಗಿವೆ. ಕಟ್ಟಡ ಸೂಕ್ತ ನಿರ್ವಹಣೆಯಿಲ್ಲದೆ, ಸ್ಥಳೀಯ ಗ್ರಾಮ ಪಂಚಾಯಿತಿಗೂ ಹಸ್ತಾಂತರಗೊಳ್ಳದೆ ಶಿಥಿಲಾವಸ್ಥೆ ತಲುಪುತ್ತಿದ್ದರೂ ಅಧಿಕಾರಿಗಳು, ಆಡಳಿತ ವ್ಯವಸ್ಥೆ ಕಣ್ತೆರೆಯದೆ ವಿಶಾಲವಾದ ಕಟ್ಟಡ ನೆಲಸಮವಾಗುವ ಭೀತಿ ಎದುರಾಗಿದೆ’ ಎಂಬ ಆರೋಪ ಸ್ಥಳೀಯರದ್ದು.

‘ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿತವಾದ ಕಟ್ಟಡ ಪ್ರಸ್ತುತ ಐಟಿಡಿಪಿ ನಿರ್ವಹಣೆ ಮಾಡಬೇಕಿತ್ತು. ಕಟ್ಟಡದ ಬಾಗಿಲು ಮುರಿದು ಹೋಗಿದ್ದರಿಂದ ಬೆಲೆಬಾಳುವ ಸಾಮಗ್ರಿಗಳು ಸ್ಥಳೀಯರ ಪಾಲಾಗಿವೆ. ಕಟ್ಟಡ ನೆಲಸಮವಾಗುವುದಕ್ಕಿಂತ ಮುಂಚೆ ನಿರ್ವಹಣೆ ಮಾಡಿದರೆ ಉಳಿಸಿಕೊಳ್ಳಬಹುದು’ ಎನ್ನುವುದು ರೋಹಿತ್ ಶೆಟ್ಟಿ ಅವರ ಅಭಿಪ್ರಾಯ.

‘ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವ ಕುರಿತು ಜಿಲ್ಲಾ ಪಂಚಾಯಿತಿಯ 18ನೇ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಕೈಗೊಳ್ಳಲಾಗಿತ್ತು. ಹಸ್ತಾಂತರಿಸುವ ಕುರಿತು ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ನಾಲ್ಕು ಬಾರಿ ಪತ್ರ ಬರೆದಿದ್ದರು. ಸರ್ಕಾರವು ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡುವುದು ಅಗತ್ಯವೇ ಎಂದು ಇಲಾಖೆಗೆ ಪ್ರಶ್ನಿಸಿತ್ತು. ಅದಕ್ಕೆ ಇಲಾಖೆಯು ‘ನಮಗೆ ಅಗತ್ಯವಿಲ್ಲ’ ಎಂದು ನಿರ್ಣಯ ಕೈಗೊಂಡು ಉತ್ತರ ಕಳುಹಿಸಿದ್ದು, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ವಿಶ್ವನಾಥ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂದೇಶ್ ಶೆಟ್ಟಿ ಆರ್ಡಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.