ADVERTISEMENT

ನಿಸ್ವಾರ್ಥ ಸೇವೆಯಿಂದ ದೇಶದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 7:35 IST
Last Updated 21 ಏಪ್ರಿಲ್ 2012, 7:35 IST

ಬ್ರಹ್ಮಾವರ: ಇಂದಿನ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆ ಸುಧಾರಿಸಬೇಕಾದರೆ ಯುವಜನತೆ ವಿವೇಕಾನಂದರ ಜೀವನದಿಂದ ಸ್ಫೂರ್ತಿ ಪಡೆದು ನಿಸ್ವಾರ್ಥ ಸೇವೆ ಮಾಡಬೇಕಿದೆ. ಹೀಗಾದಲ್ಲಿ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕೊಡಗು ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಜಗದಾತ್ಮಾನಂದ ಮಹಾರಾಜ್  ಹೇಳಿದರು.

ಬಾರ್ಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟ್, ರಾಮಕೃಷ್ಣ ಆಶ್ರಮದ ರಾಜ್ಯ ಶಾಖೆಗಳು, ಬಾರ್ಕೂರು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಈಚೆಗೆ ನಡೆದ ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮಳಗಿನ ಆಂತರಿಕ ಭಿನ್ನಾಭಿಪ್ರಾಯಗಳನ್ನು ದೂರಮಾಡಿ `ಏಳಿ ಎದ್ದೇಳಿ ಗುರಿಮುಟ್ಟುವ ತನಕ ನಿಲ್ಲದಿರಿ~ ಎನ್ನುವ ವಿವೇಕಾನಂದರ ವಾಣಿಯಂತೆ ನಾವೆಲ್ಲರೂ ಅಹಂಭಾವ ಬಿಟ್ಟು ಸ್ವಾಭಿಮಾನದಿಂದ ದೇಶೋ ದ್ಧಾರದ ಗುರಿ ತಲುಪುವ ತನಕ ಸಾಗಲು ಒಂದಾಗೋಣ ಎಂದು ಯುವಜನತೆಗೆ ಕರೆ ನೀಡಿದರು.

ಉಡುಪಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಿ. ಮಂಜುನಾಥಯ್ಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ರಾಮೋಹಳ್ಳಿ ರಾಮಕೃಷ್ಣ ಯೋಗಾಶ್ರಮದ ಅಧ್ಯಕ್ಷ ಯೋಗೇಶ್ವರಾನಂದಜೀ ಸ್ವಾಮೀಜಿ
ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಬಾರ್ಕೂರು ನರಸಿಂಹ ಗಾಣಿಗ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ರಾಮದಾಸ ಗಾಣಿಗ, ಪ್ರಧಾನ ಸಂಘಟಕ ರಾಮಭಟ್ಟ ಸಜಂಗದ್ದೆ, ಕಾಲೇಜಿನ ಪ್ರಾಂಶುಪಾಲ ಸಿ.ರಾಜಶೇಖರ್ ಹೆಬ್ಬಾರ್, ಕಾರ್ಯಾಧ್ಯಕ್ಷ ಬಿ.ಶ್ರೀನಿವಾಸ ಶೆಟ್ಟಿಗಾರ್, ಉಡುಪಿ ಜಿಲ್ಲಾ ಯೋಗ ಸಂಘಟಕ ಬಿ.ಅಶೋಕ್ ಸಿ ಪೂಜಾರಿ, ಉಪಾಧ್ಯಕ್ಷ ಕೆ.ಸತ್ಯನಾರಾಯಣ ಉಡುಪ, ಉದ್ಯಮಿ ಶಾಂತಾರಾಮ ಶೆಟ್ಟಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.