
ಕಾರ್ಕಳ: ಇಲ್ಲಿನ ಬಂಗ್ಲೆಗುಡ್ಡೆ ಪರಿಸರದಲ್ಲಿ ಹಲವು ಸಮಯದಿಂದ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಯ ವಿರುದ್ಧ ಆಕ್ರೋಶಗೊಂಡ ಪರಿಸರದ ಸಾರ್ವಜನಿಕರು ಸೋಮವಾರ ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿ ಪುರಸಭಾ ಮುಖ್ಯಾಧಿಕಾರಿ ಮಾಬೆಲ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಪುರಸಭಾ ಕಚೇರಿ ತೆರೆಯುತ್ತಿದ್ದಂತೆ ಪುರಸಭಾ ಕಚೇರಿಗೆ ಧಾವಿಸಿದ ಸಾರ್ವಜನಿಕರು ಮುಖ್ಯಾಧಿಕಾರಿ ಕಚೇರಿಯ ಒಳಗಡೆ ಕುಳಿತು ಸಮಸ್ಯೆ ಪರಿಹಾರದ ಮಾತನಾಡುವ ಬದಲು ಸ್ಥಳಕ್ಕಾಗಮಿಸಿ ಪರಿಶೀಲಿಸುವಂತೆ ಒತ್ತಾಯಿಸಿದರು.
ಮುಖ್ಯಾಧಿಕಾರಿ ಯಾವ ಉತ್ತರ ನೀಡಿದರೂ ಪಟ್ಟುಬಿಡದ ಸಾರ್ವಜನಿಕರು ಖುದ್ದಾಗಿ ಬಂದು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಖ್ಯಾಧಿಕಾರಿ ಪುರಸಭಾ ಕಾರಿನಲ್ಲಿ ಬಂಗ್ಲೆಗುಡ್ಡೆಗೆ ತೆರಳಿದಾಗ ನಡೆದುಕೊಂಡು ಬರಲು ಒತ್ತಾಯಿಸಿದರು. ಬೇಸಿಗೆಯ ಬಿಸಿಲಲ್ಲಿ ಜನರ ಕಷ್ಟ ಅರ್ಥವಾಗಬೇಕಾದರೆ ನಡೆದುಕೊಂಡು ಬರಬೇಕು ಎಂದು ಅವರನ್ನು ಕಾರಿನಿಂದ ನಡೆಸಿಕೊಂಡು ಸದ್ಭಾವನಾ ನಗರದ ಗುಂಡ್ಯ ಸಂಪರ್ಕ ರಸ್ತೆಗೆ ಸೇರುವ ರಸ್ತೆಯ ತನಕ ಕರೆದೊಯ್ದರು.
ದಾರಿಯುದ್ದಕ್ಕೂ ನೀರಿಗಾಗಿ ತಾವು ಪಡುತ್ತಿರುವ ಬವಣೆಯನ್ನು ಮಹಿಳೆಯರು ಮುಖ್ಯಾಧಿಕಾರಿ ಗಮನಕ್ಕೆ ತಂದರು. ಪುರಸಭೆಯ ನಳ್ಳಿಯಲ್ಲಿ ಸರಿಯಾಗಿ ನೀರು ಬರುವುದಿಲ್ಲ. ಬಂದರೂ ಕೆಲವು ಸಮಯ ಮಾತ್ರ. ಕೇಳಿದರೆ ರಸ್ತೆಯ ಕಾಮಗಾರಿಯಲ್ಲಿ ಪೈಪ್ ಹಾನಿಗೊಂಡಿದೆ, ಸರಿಯಾದ ತಕ್ಷಣ ನೀರು ಬರುತ್ತದೆ ಇತ್ಯಾದಿ ಸಬೂಬು ಹೇಳಲಾಗುತ್ತಿದೆ.
ನಾವು ನಮ್ಮ ಬಟ್ಟೆ ಬರೆಗಳನ್ನು ತೊಳೆಯಲು, ಅಡುಗೆ ಮಾಡಿಕೊಳ್ಳುವುದು ಹೇಗೆ? ಎಂದರು. ನಮಗೆ ಅನ್ನ ಕೊಡಿ, ತಿನ್ನಲು ಕೊಡಿ ಎಂದು ಕೇಳುವುದಿಲ್ಲ, ಆದರೆ ನಮಗೆ ನೀರನ್ನು ನೀಡಿ ಎಂದು ಕೇಳುತ್ತಿದ್ದೇವೆ. ಇದರಲ್ಲಿ ತಪ್ಪೇನಿದೇ ? ಎಂದರು.
ಸಮಸ್ಯೆ ಅರ್ಥಮಾಡಿಕೊಂಡ ಮುಖ್ಯಾಧಿಕಾರಿ ಟ್ಯಾಂಕರ್ ಮೂಲಕ ನೀರಿನ ಸರಬರಾಜಿಗೆ ವ್ಯವಸ್ಥೆ ಮಾಡಿಸುವುದಾಗಿ ತಿಳಿಸಿದರು.
ಇದಕ್ಕೆ ಮಹಿಳೆಯರು ಒಪ್ಪಲಿಲ್ಲ. ನೀವು ಟ್ಯಾಂಕರ್‌ನಲ್ಲಿ ನೀರು ಕೊಡುತ್ತೀರಿ, ಆದರೆ ಅದನ್ನು ಹೊತ್ತು ತರಲು ನಮಗೆ ಸಾಧ್ಯವಿಲ್ಲ. ನಮ್ಮ ಗಂಡಸರಿಗೆ ಆಪರೇಶನ್ ಆಗಿ ಹಾಸಿಗೆಯಲ್ಲಿದ್ದಾರೆ ಎಂದು ಕೆಲವರು ತಿಳಿಸಿದರೆ, ಇನ್ನು ಕೆಲವರು ತಮ್ಮ ತಮ್ಮ ಕಷ್ಟಗಳನ್ನು ತಿಳಿಸಿ ಪೈಪ್ ಮೂಲಕವೇ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿದರು. ರಸ್ತೆ ಅಗೆಯುವಾಗ ಪೈಪ್‌ಲೈನ್ ಹಾಳಾಗಿದೆ. ಅದು ದುರಸ್ತಿಯಾದ ತಕ್ಷಣ ಪೈಪ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭ ಪುರಸಭಾ ಆರೋಗ್ಯಾಧಿಕಾರಿ ಸುಂದರ ಪೂಜಾರಿ, ಎಂಜಿನಿಯರ್ ಮದನ್, ವಾರ್ಡ್‌ನ ಪ್ರತಿನಿಧಿ ಮೊಹಮದ್ ಶರೀಫ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.