ADVERTISEMENT

ನೇರಳೆ ಹಣ್ಣಿನ ಸವಾರಿ....

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 8:46 IST
Last Updated 4 ಜೂನ್ 2018, 8:46 IST
ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ವ್ಯಾಪಾರ
ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ವ್ಯಾಪಾರ   

ರಳೆ ಹಣ್ಣನ್ನು ಇಷ್ಟಪಡದವರು ಅಪರೂಪ. ಹಣ್ಣನ್ನು ನೋಡುತ್ತಿದಂತೆ ಬಾಯಲ್ಲಿ ನೀರೂರುತ್ತದೆ. ಮುಂಗಾರು ಮಳೆಗೂ ಮುನ್ನವೇ ಬೆಳಗಾವಿ, ಹುಬ್ಬಳ್ಳಿ ಕಡೆಯಿಂದ ನೇರಳೆ ಹಣ್ಣುಗಳು ಉಡುಪಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಭರ್ಜರಿ ಮಾರಾಟ ಆರಂಭವಾಗಿದೆ. ವ್ಯಾಪಾರಿಗಳ ಮುಖದಲ್ಲಿ ಮಂದಾಸ ಮೂಡಿದೆ. ಕೆಲವರು ಇದನ್ನು ಜಂಬು ನೇರಳೆ ಅಂತಲೂ ಹೇಳುವುದುಂಟು.

ಮಾವಿನ ಹಣ್ಣು, ಹಲಸಿನ ಹಣ್ಣುಗಳ ಘಮ ಮೂಗಿಗೆ ಬಡಿಯುವಂತೆ  ನೇರಳೆ ಹಣ್ಣು ಅಥವಾ ಜಂಬುನೇರಳೆ ಹಣ್ಣು ತನ್ನ ಬಣ್ಣ ಮತ್ತು ರುಚಿಯಿಂದ ಗಮನ ಸೆಳೆಯುತ್ತಿದೆ. ಇದರ ಬಣ್ಣವೇ ತುಂಬಾ ಆಕರ್ಷಕ.‌ ಹಿಂದೆಲ್ಲಾ ಕಾಡು ಹಣ್ಣಾಗಿದ್ದ ನೇರಳೆ ಈಗ ಮಾರುಕಟ್ಟೆಯಲ್ಲಿ ಪ್ರಮುಖ ಹಣ್ಣಾಗಿ ಗಮನ ಸೆಳೆಯುತ್ತಿದೆ. ಅದರಲ್ಲೂ ಮಾನ್ಸೂನ್‌ ಸೀಸನ್‌ನಲ್ಲಿ ಈ ಹಣ್ಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರೋಗ್ಯಕ್ಕೂ ಒಳ್ಳೆಯದು ಎಂಬ ಕಾರಣಕ್ಕೆ ಬಹುತೇಕ ಜನರು ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ.

15 ದಿನದಿಂದ ಉಡುಪಿ ಮಾರುಕಟ್ಟೆಗೆ ಈ ಹಣ್ಣು ಲಗ್ಗೆಯಿಟ್ಟಿದ್ದು ನಗರದ ಪ್ರಮುಖ ಭಾಗಗಳಾದ ಕಾಪೋರೇಶನ್‌ ಬ್ಯಾಂಕ್ ವೃತ್ತ, ಅಕ್ಷಯ ಟವರ್ ಬಳಿ, ಸಿಟಿ ಬಸ್‍ನಿಲ್ದಾಣ, ಕಲ್ಸಂಕ ಹಾಗೂ ಗುಂಡಿಬೈಲು ರಸ್ತೆಯಲ್ಲಿ ತಳು ಗಾಡಿಯಲ್ಲಿ ನೇರಳೆ ಹಣ್ಣು ಮಾರಾಟ ಮಾಡಲಾಗುತ್ತಿದೆ. ಒಮ್ಮೆ ಈ ಗಾಡಿಯತ್ತ ಕಣ್ಣು ಹಾಯಿಸಿದವರು ಖರೀದಿಸದೇ ಹಿಂದಿರುಗಲಾರದು.ಅಲ್ಲದೆ ನಗರದ ಪ್ರಮುಖ ಹಣ್ಣಿನ ಅಂಗಡಿಗಳಲ್ಲಿಯೂ ನೇರಳೆ ಹಣ್ಣು ಲಭ್ಯವಿದೆ.

ADVERTISEMENT

ರಸ್ತೆ ಬದಿಯಲ್ಲಿ ಮರಾಟವಾಗುವ ಅಂಗಡಿಗಳಲ್ಲಿ ಕೊಳ್ಳುವವರಲ್ಲಿ ವಿದ್ಯಾರ್ಥಿಗಳ ಮಹಿಳೆಯರ ಸಂಖ್ಯೆಯೇ ಹೆಚ್ಚು. ಕಾಲೇಜು, ಉದ್ಯೋಗ ಮುಗಿಸಿಕೊಂಡು ಗುಂಪು ಗುಂಪಾಗಿ ಮನೆಗೆ ಹೋಗುವ ವಿದ್ಯಾರ್ಥಿಗಳು, ಮಹಿಳೆಯರು ನೇರಳೆ ಹಣ್ಣು ಖರೀದಿಸಿ ತಿನ್ನುವ ದೃಶ್ಯ ಸಂಜೆ ಸಮಯದಲ್ಲಿ ಹೊತ್ತಿನಲ್ಲಿ ಕಂಡು ಬರುವುದು ಸಾಮಾನ್ಯವಾಗಿದೆ. ಸೇಬು, ದಾಳಿಂಬೆ ಹಣ್ಣಿನ ವ್ಯಾಪರದ ನಡುವೆ ನೇರಳೆ ಹಣ್ಣಿನ ವ್ಯಾಪಾರ ತುಸು ಜೋರಾಗಿದೆ.

ಉಡುಪಿ ಮಾರುಕಟ್ಟೆಯಲ್ಲಿ ಜಂಬು ನೇರಳೆ ಕೆ.ಜಿ.ಗೆ ₹ 200 ರಂತೆ ಮಾರಾಟವಾಗುತ್ತಿದೆ. ಅತ್ಯಂತ ದುಬಾರಿ ಬೆಲೆ ಎಂದರೆ ತಪ್ಪಿಲ್ಲ. ಕಳೆದ ವರ್ಷ ಇದೇ ಹಣ್ಣಿಗೆ 140-160 ರೂಪಾಯಿಗೆ ಮಾರಾಟವಾಗುತ್ತಿತ್ತು. ಇದ್ಯಾವುದರರ ಪರಿವೆಯಿಲ್ಲದೇ ಗ್ರಾಹಕರು ಮಾತ್ರ ನೇರಳೆ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ.

ನೇರಳೆ ಹಣ್ಣಿನಲ್ಲಿ ಗ್ಲೂಕೋಸ್‌ ಮತ್ತು ಫ್ರಕ್ಟೋಸ್‌ ಎಂಬ ಸಕ್ಕರೆ ಅಂಶಗಳಿವೆ. 'ಸಿ' ಜೀವ ಸತ್ವ ಸಾಕಷ್ಟು ಪ್ರಮಾಣದಲ್ಲಿರುವ ಈ ಹಣ್ಣುಗಳಲ್ಲಿ ಖನಿಜ ಲವಣಗಳಿದ್ದು, ಮಧುಮೇಹ ಚಿಕಿತ್ಸೆಗೆ ನೇರಳೆಹಣ್ಣು ಉತ್ತಮ ಎನ್ನುತ್ತವೆ ವೈದ್ಯಕೀಯ ಮೂಲಗಳು.

ತಿನ್ನಲು ಯೋಗ್ಯವಾದ 100 ಗ್ರಾಂ ನೇರಳೆಹಣ್ಣಿನಲ್ಲಿ ಸಾರಜನಕ-0.7 ಗ್ರಾಂ, ನಾರು-0.9 ಗ್ರಾಂ, ಕಬ್ಬಿಣ-1.2 ಮಿಲಿಗ್ರಾಂ, ಕ್ಯಾಲ್ಸಿಯಂ-15 ಮಿಲಿಗ್ರಾಂ, 'ಸಿ' ಜೀವಸತ್ವ-18 ಮಿಲಿಗ್ರಾಂ, ಪೋಲಿಕ್‌ ಆಮ್ಲ-3 ಮಿಲಿಗ್ರಾಂ ಇರುತ್ತದೆ. ಗಾಯದಿಂದ ಸೋರುವ ರಕ್ತ ತಡೆಗೆ, ಸಂಕುಚಿಸುವ ವಿಶಿಷ್ಟ ಗುಣ ಮರದ ತೊಗಟ್ಟೆಗೆ ಇದಕ್ಕಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ತಿನ್ನಲು ರುಚಿ ಇರುವ ಹಾಗೂ ಔಷಧದ ಗುಣ ಹೊಂದಿರುವ ಈ ಹಣ್ಣುಗಳು, ವರ್ಷಕ್ಕೊಮ್ಮೆ ಮಾತ್ರ ದೊರೆಯುತ್ತಿದ್ದು, ಗ್ರಾಹಕರು ಇಷ್ಟಪಟ್ಟ ಖರೀದಿಸುತ್ತಿದ್ದಾರೆ. ಬೇಡಿಕೆ ತಕ್ಕಂತೆ ಪೂರೈಕೆ ಕೊರತೆಯಿದೆ.

ಗುಡ್ಡ, ಕಾಡುಗಳಲ್ಲಿ ಕಾಣ ಸಿಗುವ ನೇರಳೆ ಹಣ್ಣನ್ನು ಒಂದು ಬೆಳೆಯಾಗಿಯೂ ಬೆಳೆಯಬಹುದು. ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ, ಮುಖ್ಯವಾಗಿ ಮಧುಮೇಹವನ್ನು ಹತೋಟಿಗೆ ತರಲು ಬಳಕೆಯಾಗುವ ನೇರಳೆ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ.

ನೇರಳೆಯಲ್ಲಿ ಕಸಿ, ಹೈಬ್ರೀಡ್, ಜಂಬು ನೇರಳೆ ಹೀಗೆ ಮೂರು ತಳಿಗಳಿವೆ. ಸೀಡ್‍ಲೆಸ್ ಹಣ್ಣಿನ ತಳಿಯೂ ಇತ್ತೀಚೆಗೆ ಚಾಲ್ತಿಗೆ ಬರುತ್ತಿದೆ. ಜೂನ್ ತಿಂಗಳು ಗಿಡದ ನಾಟಿಗೆ ಸೂಕ್ತ. ಈ ಅನೇಕ ದಿನಗಳವರೆಗೆ ನೀರು ಹಿಡಿದಿಡುವ ಸಾಮರ್ಥ್ಯ ಈ ಗಿಡ್ಡಕ್ಕೆ ಇರುವುದರಿಂದ  ಪ್ರತಿನಿತ್ಯ ನೀರುಣಿಸಬೇಕಾಗಿಲ್ಲ. ಇತರ ಬೆಳೆಗಳಿಗೆ ಹೋಲಿಸಿದರೆ ನಿರ್ವಹಣೆ ಸುಲಭ. ವರ್ಷದಲ್ಲೊಂದು ಬಾರಿ ಕೊಟ್ಟಿಗೆ ಗೊಬ್ಬರ ನೀಡಿದರೆ ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ. ನಾಟಿ ಮಾಡಿದ ಮೂರು ವರ್ಷಗಳಲ್ಲಿ ಬೆಳೆ ಆರಂಭವಾಗುತ್ತದೆ. ಹೂವು ನೀಡಿದ ಮೂವತ್ತು ದಿನಗಳಲ್ಲಿ ಗೊಂಚಲಾಗಿ ಕಾಯಿಗಳು ಕಾಣಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.