ADVERTISEMENT

ಪಕ್ಷಕ್ಕೆ ದ್ರೋಹ ಮಾಡಲಾರೆ: ಪ್ರಮೋದ್

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 7:03 IST
Last Updated 30 ಮಾರ್ಚ್ 2018, 7:03 IST

ಉಡುಪಿ: ‘ನಾನು ಬಿಜೆಪಿಗೆ ಹೋಗುತ್ತೇನೆ ಎಂಬ ಸುದ್ದಿ ಸುಳ್ಳು. ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡುವ ಬಗ್ಗೆ ಕನಸಿನಲ್ಲಿಯೂ ಯೋಚನೆ ಮಾಡಿಲ್ಲ’ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ಸುಮಾರು 55 ವರ್ಷದಿಂದ ನಮ್ಮ ಕುಟುಂಬ ಜನರ ಸೇವೆಯಲ್ಲಿ ತೊಡಗಿದೆ. ಅದು ಮುಂದುವರೆಯಲಿದೆ. ಪ್ರಚಾರ ವಾಹನಕ್ಕೆ ಎಸ್ಪಿ ಅವರಿಂದ ಅನುಮತಿ ಪಡೆಯಲಾಗಿತ್ತು ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಅವರಿಗೂ ಅನುಮತಿಗೆ ಅರ್ಜಿ ಸಲ್ಲಿಸಲಾಗಿತ್ತು. ಬುಧವಾರ ಆ ವಾಹನ ಪ್ರಚಾರಕ್ಕೆ ಹೋಗುತ್ತಿರಲಿಲ್ಲ, ನನ್ನ ಮನೆಯ ಕಡೆ ಬರುತ್ತಿತ್ತು. ನೀತಿ ಸಂಹಿತೆಯನ್ನು ಪಾಲಿಸುತ್ತೇನೆ ಹಾಗೂ ಪಾಲಿಸುವಂತೆ ಎಲ್ಲ ಕಾರ್ಯಕರ್ತರಿಗೂ ಹೇಳಿದ್ದೇನೆ’ ಎಂದರು.

ADVERTISEMENT

‘ವಂಚನೆ ಆರೋಪ ಮಾಡಿರುವ ಟಿ.ಜೆ. ಅಬ್ರಹಾಂ ಅವರ ವಿರುದ್ಧ ಪ್ರಕರಣ ದಾಖಲಿಸುವುದು ನಿಶ್ಚಿತ. ಆದರೆ ಅವರ ಬಗ್ಗೆ ಕೆಲವೊಂದು ದಾಖಲೆಗಳನ್ನು ದೆಹಲಿಯಿಂದ ಪಡೆದುಕೊಳ್ಳಬೇಕಿದ್ದು, ಅದಕ್ಕಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದೇನೆ. ವಿನಾಕಾರಣ ಸಮಯ ಹಾಳು ಮಾಡಿದ ಕಾರಣ ಸುಪ್ರೀಂ ಕೋರ್ಟ್ ಅವರಿಗೆ ₹25 ಲಕ್ಷ ದಂಡ ವಿಧಿಸಿತ್ತು. ಬೆಂಗಳೂರಿನ ನ್ಯಾಯಾಲಯ ಅವರಿಗೆ ಜೈಲು ಶಿಕ್ಷೆ ವಿಧಿಸಿತ್ತು. ಅಂತಹ ವ್ಯಕ್ತಿಯ ವಿಶ್ವಾಸಾರ್ಹತೆ ಎಷ್ಟಿರಬಹುದು ನೀವೇ ಊಹಿಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.