ADVERTISEMENT

ಬದಲಾಗದ ಮೂಲನಿವಾಸಿಗಳ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 10:00 IST
Last Updated 20 ಜೂನ್ 2011, 10:00 IST
ಬದಲಾಗದ ಮೂಲನಿವಾಸಿಗಳ ಸ್ಥಿತಿ
ಬದಲಾಗದ ಮೂಲನಿವಾಸಿಗಳ ಸ್ಥಿತಿ   

ಸಿದ್ದಾಪುರ: ಕುಂದಾಪುರ ತಾಲ್ಲೂಕಿನ ಪಶ್ಚಿಮಘಟ್ಟ ಪ್ರದೇಶದ ಅಂಚಿನಲ್ಲಿರುವ ಹಿಂದುಳಿದ ಮೂಲನಿವಾಸಿಗಳಿರುವ ಗ್ರಾಮ ದೇವರಬಾಳುವಿನಲ್ಲಿ ನಕ್ಸಲ್ ಎನ್‌ಕೌಂಟರ್ ನಡೆದು (ಜೂನ್ 23) ಆರು ವರ್ಷ ತುಂಬುತ್ತಿದೆ. ಆದರೆ ಇಲ್ಲಿ ಮೂಲಸೌಕರ್ಯದ ಸಮಸ್ಯೆ ಮಾತ್ರ ಯಥಾ ರೀತಿಯಲ್ಲಿ ಮುಂದುವರಿದಿದೆ.

ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ಮೂಡಿಗೆರೆಯ ಉಮೇಶ್ ಮತ್ತು ಬೆಳಗಾವಿಯ ಅಜಿತ್ ಕುಸುಬಿ ಅವರ ನೆತ್ತರು ಹರಿದು ರಾಜ್ಯದ ಗಮನ ಸೆಳೆದ ಈ ಪ್ರದೇಶ ಈಗಲೂ ತೀರಾ ಹಿಂದುಳಿದ ಪ್ರದೇಶವಾಗಿಯೇ ಉಳಿದಿದೆ.

ಈ ಎನ್‌ಕೌಂಟರ್ ನಡೆದ ಕೆಲವೇ ಸಮಯದಲ್ಲಿ  ಪೊಲೀಸ್ ಮಾಹಿತಿದಾರ ಎಂಬ ಶಂಕೆಯಲ್ಲಿ ಯಡಗೇರಿಯ ಕೃಷಿಕ ಕೇಶವ ಯಡಿಯಾಳ ಅವರನ್ನು ಹತ್ಯೆ ಮಾಡಲಾಗಿತ್ತು.

ಕಟ್ಟಿನಾಡಿ, ರಾಮನಹಕ್ಲು, ಕಬ್ಬಿನಾಲೆ, ನೀರ್‌ಕೊಡ್ಲು, ಬೊಮ್ಮನಹಳ್ಳ, ದೇವರಬಾಳು ಪ್ರದೇಶಗಳಲ್ಲಿ ಮೂಲ ನಿವಾಸಿಗಳ ಪರಿಸ್ಥಿತಿ ಒಂದಿಷ್ಟೂ ಬದಲಾಗಿಲ್ಲ. ಸರ್ಕಾರದ ಅಭಿವೃದ್ಧಿ ಯೋಜನೆಗಳು, ಸ್ಥಳೀಯ ಜನಪ್ರತಿನಿಧಿಗಳ ಭರವಸೆಗಳು ಇಲ್ಲಿ ಕಾರ್ಯರೂಪಕ್ಕೆ ಬಂದೇ ಇಲ್ಲ.

ಈ ಭಾಗದ 60ಕ್ಕೂ ಮಿಕ್ಕಿ ಮನೆಗಳಲ್ಲಿನ ವಾಸಿಗಳು  ಹಸ್ಲ, ಮರಾಠಿ ಮೂಲನಿವಾಸಿಗಳು. ಹಕ್ಕುಪತ್ರ ಸಮಸ್ಯೆ, ಸಂಪರ್ಕ ರಸ್ತೆ, ವಿದ್ಯುತ್ ಸೇರಿದಂತೆ ನೂರೆಂಟು ಸಮಸ್ಯೆಗಳಿಂದ ಅವರು ಕಂಗೆಟ್ಟಿದ್ದಾರೆ.

ಸಮೀಪದ ಪೇಟೆಯಾದ ಚಕ್ರಾ ಮೈದಾನದಿಂದ ಹೊಸಬಾಳು ರಾಮನ ರಾಮನಹಕ್ಲು ಪ್ರದೇಶಕ್ಕೆ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರಸ್ತೆ ಮಜೂರಾತಿ ಆದ ಬಗ್ಗೆ ಮಾಹಿತಿ ಇದ್ದರೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಮಣ್ಣಿನ ರಸ್ತೆಯ ದೇವರಬಾಳು ಸಂಪರ್ಕಕ್ಕೆ ಜನ ಈಗಲೂ ಆಶ್ರಯಿಸಿರುವುದು ಮರದ ಕಾಲುಸಂಕವನ್ನೇ.

ಕಮಲಶಿಲೆ, ಯಡಗೇರಿ ಮೂಲಕ ಸಾಹಿಬ್ರಂಗಡಿ ಮೂಲಕ ಸುತ್ತು ಬಳಸಿ ಬರುವ ರಸ್ತೆಯನ್ನು ಸಡಕ್ ಯೋಜನೆಯಡಿಯಲ್ಲಿ ಡಾಂಬರೀಕರಣ ನಡೆಯುತ್ತಿದೆ. ರಸ್ತೆಯನ್ನು ಅಗಲಗೊಳಿಸುವ ಕಾಮಗಾರಿ, ಡಾಂಬರೀಕರಣಗಳೆಲ್ಲ ಅರ್ಧಂಬರ್ಧ ನಡೆದಿವೆ. ಇದರಿಂದ ಪಾದಚಾರಿಗಳ ಸಂಚಾರಕ್ಕೂ ತೊಂದರೆ ಉಂಟಾಗಿದೆ.

ಹಳ್ಳಿಹೊಳೆ ಗ್ರಾ.ಪಂ.ನ ದೇವರಬಾಳು ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಪಣ ಕೊಟ್ಟಿದೆ, ನಕ್ಸಲ್ ಪ್ಯಾಕೇಜ್, ದೂರ ಪ್ರದೇಶಾಭಿವೃದ್ದಿ ಯೋಜನೆಗಳಿಂದಲೂ ಸಾಕಷ್ಟು ಅನುದಾನ ಹರಿದಿದೆ. ಆದರೆ ಅದೆಲ್ಲವನ್ನೂ ದುರುಪಯೋಗ ಮಾಡಲಾಗಿದೆ ಎಂದು ಕಟ್ಟಿನಾಡಿ ಸುಧಾಕರ್ ಹೇಳುತ್ತಾರೆ.

ಪ್ರತಿ ಮನೆಗೆ ಬೇಕಾದ ಆವಶ್ಯಕ ಸಾಮಗ್ರಿಗಳನ್ನು ತರಲು ಪೇಟೆಗೆ ಹೋದರೆ ಇಡೀ ದಿನ ವ್ಯರ್ಥವಾಗುದರಿಂದ ವಾರಕ್ಕೊಮ್ಮೆ ಹೋಗಿ ತರುವ ಪರಿಪಾಠವನ್ನು ಇಲ್ಲಿನ ಜನ ಇಟ್ಟುಕೊಂಡಿದ್ದಾರೆ. ಅವರಿಗೆ ಹತ್ತಿರದ ಬಸ್ ನಿಲ್ದಾಣ ಎಂದರೆ ಐದು ಕಿ.ಮೀ. ದೂರದ ಹಳ್ಳಿಹೊಳೆಯೇ. ಇಂದಿಗೂ ಇಲ್ಲಿನ ಮಂದಿ ಅನಾರೋಗ್ಯಪೀಡಿತರನ್ನು ಕಂಬಳಿಯಲ್ಲಿ ಕಟ್ಟಿ ಕುರ್ಚಿಯಲ್ಲಿ ಹೊತ್ತುಕೊಂಡು ಹಳ್ಳಿಹೊಳೆಗೆ ನಡೆದೇ ಬರಬೇಕಾಗಿದೆ.

ಕುಬ್ಜಾ, ಚಕ್ರಾ ನದಿಯಿಂದ ಸುತ್ತುವರಿದಿರುವ ದೇವರಬಾಳು, ಕಟ್ಟಿನಾಡಿ, ರಾಮನಹಕ್ಲು ದ್ವೀಪದಂತೆ ಇದೆ. ದೇವರಬಾಳು ಹತ್ತಿರ ಕೆಲವು ವರ್ಷಗಳ ಹಿಂದೆ ಸಣ್ಣ ಸೇತುವೆಯೊಂದನ್ನು ನಿರ್ಮಿಸಿದ್ದರೂ, ಅದರಲ್ಲಿ ಬೈಕ್ ಸಹ ಸಂಚರಿಸುವಂತಿಲ್ಲ. ಇಲ್ಲಿನ ಸಂಪರ್ಕಕ್ಕೆ ಸ್ಥಳೀಯ ಜನರೇ ಒಟ್ಟುಸೇರಿ ಎರಡು ಮರದ ಕಾಲು ಸಂಕ ನಿರ್ಮಿಸಿಕೊಂಡಿದ್ದಾರೆ. ಇವುಗಳೂ ಮಳೆ ಜೋರಾದಾಗ ಮುಳುಗಿ ಹೋಗಿ ಸಂಚಾರ ಸ್ಥಗಿತಗೊಳ್ಳುತ್ತದೆ.

ಇಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ಜನರಿಗೆ ಇನ್ನೂ ಹಕ್ಕುಪತ್ರ ನೀಡಿಕೆ ಪೂರ್ಣಗೊಂಡಿಲ್ಲ. ಪರಶಿಷ್ಟ ಪಂಗಡದವರಿಗೆ ಮಾತ್ರ ಹಕ್ಕುಪತ್ರ ನೀಡಿಕೆ ಪೂರ್ಣಗೊಂಡಿದೆ. ಕೆಲವು ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾಗಿದ್ದು, ಸ್ವಸಹಾಯ ಪದ್ಧತಿಯಿಂದ ಊರಿನ ಅಭಿವೃದ್ಧಿ ಸಾಧಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.