ADVERTISEMENT

ಬಿಜೆಪಿ ಕುಟಿಲ ನೀತಿ ಕರಾವಳಿಗರಿಗೆ ತಿಳಿಯಲಿ

ಮೋದಿ ಸುಳ್ಳಿನ ಸರದಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 12:34 IST
Last Updated 21 ಮಾರ್ಚ್ 2018, 12:34 IST

ಉಡುಪಿ: ಜಾತಿ, ಧರ್ಮದ ಮಧ್ಯೆ ವಿಷ ಬೀಜ ಬಿತ್ತುವ ಬಿಜೆಪಿ ಕುಟಿಲ ರಾಜಕಾರಣವನ್ನು ರಾಜಕೀಯ ಪ್ರಜ್ಞೆ ಇರುವ ಕರಾವಳಿ ಭಾಗದ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಜನಾಶೀರ್ವಾದ ಯಾತ್ರೆಯ ಅಂಗವಾಗಿ ಪಡುಬಿದ್ರಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾ ಡಿದರು. ರಾಜ್ಯದಲ್ಲಿ ಶಾಂತಿ– ನೆಮ್ಮದಿ ನೆಲೆಸುವಂತೆ ಮಾಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯವೇ ಹೊರತು, ಕೋಮುವಾದಿ ಬಿಜೆಪಿಯಿಂದ ಅಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ್ತೆ ಅಧಿಕಾರಕ್ಕೆ ತರಬೇಕು ಎಂದ ಅವರು ಮನವಿ ಮಾಡಿದರು.

ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಧರ್ಮ ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಯಾರದ್ದೇ ಕೊಲೆಯಾಗಲಿ ಆರ್‌ಎಸ್‌ಎಸ್ ಸದಸ್ಯ ಎಂದು ಸುಳ್ಳು ಹೇಳುತ್ತಿದ್ದಾರೆ. ಅಶಾಂತಿ ಸೃಷ್ಟಿಸಿ ಅಧಿಕಾರ ಹಿಡಿಯಲು ಅವರುಪ್ರಯತ್ನಿಸುತ್ತಿದ್ದಾರೆ. ಕರಾವಳಿ ಭಾಗವನ್ನು ಆರ್‌ಎಸ್‌ಎಸ್, ಬಜರಂಗದಳ ಹಾಗೂ ವಿಎಚ್‌ಪಿ ಕೋಮುವಾದದ ಪ್ರಯೋಗಾಲಯ ಮಾಡಿಕೊಂಡಿವೆ ಎಂದು ದೂರಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದಿಂದ ದೇಶದಲ್ಲಿ ವಿಷಯ ಸ್ಥಿತಿ ನಿರ್ಮಾಣವಾಗುತ್ತಿದೆ. ₹500, ₹1000 ಮುಖ ಬೆಲೆಯ ನೋಟು ರದ್ದು ಮಾಡಿದ ಅವರು ಕಪ್ಪು ಹಣ ಹೋಗಲಾಡಿಸಲು, ಭಯೋತ್ಪಾದನೆಗೆ ಕಡಿವಾಣ ಹಾಕಲಾಗುವುದು, ಖೋಟಾ ನೋಟು ನಿರ್ಮೂಲನೆ ಮಾಡಲಾಗುವುದು ಎಂದರು. ಆದರೆ ಅದ್ಯಾವುದೂ ಆಗಲಿಲ್ಲ. ಯಾವೊಬ್ಬ ಕಪ್ಪು ಕುಳನೂ ನಿದ್ದೆಗೆಡಲಿಲ್ಲ. ಬಡವರು, ಕಾರ್ಮಿಕರು, ದಲಿತರು ಇದರಿಂದ ತೊಂದರೆ ಅನುಭವಿಸಿದರು. ಶ್ರೀಮಂತರು ಕಪ್ಪು ಹಣವನ್ನು ಬಿಳಿಯಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅವರು ನೋಟು ರದ್ದು ಮಾಡಿದರು ಎಂದು ಆರೋಪಿಸಿದರು.

ಕಾಂಗ್ರೆಸ್ ಯಾವಾಗಲೂ ಸಾಮರಸ್ಯ ಬಯಸುತ್ತದೆ. ಅದೇ ಕಾರಣಕ್ಕೆ ಉಲ್ಲಾಳದಿಂದ ಉಡುಪಿ ವರೆಗೆ 2013ರಲ್ಲಿ ಸಾಮರಸ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಕರಾವಳಿ ಭಾಗದ ಜನರು ಪಕ್ಷಕ್ಕೆ ಆಶೀರ್ವಾದ ಮಾಡಿದ ಕಾರಣ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಇನ್ನೊಮ್ಮೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಹೆದ್ದಾರಿ ಪಕ್ಕದಲ್ಲೇ ಕಾರ್ನರ್ ಮೀಟಿಂಗ್

ಪಡುಬಿದ್ರಿ: ಜನಾಶೀರ್ವಾದ ಯಾತ್ರೆ ಅಂಗವಾಗಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಡುಬಿದ್ರಿಯಲ್ಲಿ ಆಯೋಜಿಸಿದ ಕಾರ್ನರ್ ಮೀಟಿಂಗ್ ಹೆದ್ದಾರಿ ಪಕ್ಕದಲ್ಲೇ ಆಯೋಜಿಸಿದ ಪರಿಣಾಮ ಸಾರ್ವಜನಿಕರು ಸಮಸ್ಯೆ ಅನುಭವಿಸಬೇಕಾಯಿತು.

ಮಂಗಳವಾರ ನಡೆದ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮವನ್ನು ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ ಎರಡು ಬ್ಯಾಂಕ್‌ಗಳಿದ್ದು, ಭದ್ರತಾ ಸಿಬ್ಬಂದಿ ಬ್ಯಾಂಕ್ ಹೊರತುಪಡಿಸಿ ವಾಣಿಜ್ಯ ಮಳಿಗೆ ಮುಚ್ಚಿಸಿದರು. ಈ ಬಗ್ಗೆ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕಾಗಿ ಜನರಿಗಾಗಿ ಹಾಕಲಾದ ಪೆಂಡಾಲ್‌ನಲ್ಲಿ ಜನರು ತುಂಬಿದ್ದು, ಇನ್ನು ಕೆಲವರು ಹೆದ್ದಾರಿಯಲ್ಲಿ ನಿಂತೇ ಕಾರ್ಯಕ್ರಮ ವೀಕ್ಷಿಸಿದರು.

ಮಂಗಳವಾರ ವಾರದ ಸಂತೆ ಇತ್ತು. ಮೊದಲೇ ವಾಹನ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ಇರುವಾಗ ಸಂತೆಗೆ ಬರುವ ಜನ ಕಿರಿಕಿರಿ ಅನುಭವಿಸಿದರು. ವಾಹನ ಪಾರ್ಕಿಂಗ್‌ಗೂ ಸಾಕಷ್ಟು ಸ್ಥಳಾವಕಾಶ ಇಲ್ಲದೇ ಇರುವುದರಿಂದ ಕಾರ್ಕಳ ರಸ್ತೆ, ಸಹಿತ ವಿವಿಧ ಖಾಲಿ ಜಾಗದಲ್ಲಿ ವ್ಯವಸ್ಥೆ ಮಾಡಲಾಯಿತು.

ಎರ್ಮಾಳಿನಲ್ಲಿ ಕಾರ್ಯಕ್ರಮ ಮುಗಿಸಿ ಪಡುಬಿದ್ರಿಗೆ ಬಂದಾಗ ಉಡುಪಿ, ಮಂಗಳೂರು, ಕಾರ್ಕಳ ಕಡೆಗಳಿಂದ ಬರುವ ವಾಹನಗನ್ನು ತಡೆಹಿಡಿಯಲಾಯಿತು. ಇದರಿಂದ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಪಡುಬಿ ದ್ರಿಯಲ್ಲಿ ಕಾರ್ಯಕ್ರಮ ಮುಗಿಸಿ ಹೆಜಮಾಡಿಗೆ ತೆರಳುವಾಗ ಮತ್ತೆ ವಾಹನ ಸಂಚಾರ ವ್ಯತ್ಯಯ ಉಂಟಾ ಯಿತು. ಬಂದೋಬಸ್ತ್‌ಗಾಗಿ ಬಂದಿದ್ದ ಪೊಲೀಸರು ಸುಗಮ ಸಂಚಾರಕ್ಕೆ ಹರಸಾಹಸ ಪಡಬೇಕಾ ಯಿತು. ಸುಮಾರು 3ಗಂಟೆಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಸಾರ್ವಜನಿಕರು ಹಿಡಿಶಾಪ ಹಾಕುವಂತಾ ಯಿತು.

ರೋಡ್ ಶೋ ರದ್ದು: ಎರ್ಮಾಳಿನಲ್ಲಿ ಕಾರ್ಯಕ್ರಮ ಮುಗಿಸಿ ಪಡುಬಿದ್ರಿಗೆ ರೋಡ್‌ ಶೋನಲ್ಲಿ ಬರುವುದಾಗಿ ಹೇಳಲಾಗಿತ್ತು. ರೋಡ್ ಶೋನಲ್ಲಿ ರಾಹುಲ್ ಗಾಂಧಿ ಬರುತ್ತಾರೆಂದು ಸಾರ್ವಜನಿಕರು ಪೇಟೆಯಲ್ಲಿ ಅಲ್ಲಲ್ಲಿ ಕಾದು ಕುಳಿತಿದ್ದರು. ಆದರೆ, ರಾಹುಲ್‌ ಗಾಂಧಿ ಅವರು ನೇರವಾಗಿ ಬೆಂಗಾವಲು ವಾಹನದಲ್ಲೇ ಕಾರ್ಯಕ್ರಮ ಸ್ಥಳಕ್ಕೆ ಬಂದರು. ಇದರಿಂದ ಕಾರ್ಯಕರ್ತರು ನಿರಾಶೆಗೊಂಡರು.

ಆಕ್ರೋಶ: ರಾಷ್ಟ್ರಿಯ ಹೆದ್ದಾರಿ ಚತುಷ್ಪಥ ಕಾಮಗಾರಿಯೂ ಅಪೂರ್ಣವಾ ಗಿರುವದರಿಂದ ಈ ಪ್ರದೇಶದಲ್ಲಿ ಸಂಚಾರಕ್ಕೂ ಅಡಚಣೆ ಆಯಿತು. ಭದ್ರತೆ ದೃಷ್ಟಿಯಿಂದ ಜನನಿಬಿಡವಾಗಿರುವ ಇಂತಹ ಸ್ಥಳದಲ್ಲಿ ಕಾರ್ಯಕ್ರಮ ಆಯೋ ಜಿಸುವ ಬದಲು ಬೇರೆ ಸ್ಥಳವನ್ನು ಆಯ್ಕೆ ಮಾಡುತ್ತಿದ್ದರೆ ಉತ್ತಮ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪಡುಬಿದ್ರಿಯಿಂದ ವಿಶೇಷ ಬಸ್: ಎರ್ಮಾಳಿನಿಂದ ಪಡುಬಿದ್ರಿಗೆ ಕಾರಿನಲ್ಲಿ ಬಂದ ರಾಹುಲ್‌ಗಾಂಧಿ ಅವರು ಪಡುಬಿದ್ರಿಯಲ್ಲಿ ಕಾರ್ಯಕ್ರಮ ಮುಗಿಸಿ ವಿಶೇಷವಾಗಿ ಸಿದ್ಧಪಡಿಸಿದ ಬಸ್‌ನಲ್ಲಿ ಹೆಜಮಾಡಿ ಮೂಲಕ ಸಂಚರಿಸಿದರು. ಬಸ್‌ಗೆ ರಾಹುಲ್‌ಗಾಂಧಿ ಹಾಗೂ ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಸಹಿತ ಹಲವು ಗಣ್ಯರು ಬಸ್‌ನಲ್ಲಿಯೇ ಇದ್ದರು. ಬಸ್‌ಗೆ ರಾಹುಲ್‌ಗಾಂಧಿ, ಸಿದ್ದರಾಮಯ್ಯ ತೆರಳಿದಾಗ  ಕಾರ್ಯಕರ್ತರು ಘೋಷಣೆ ಕೂಗಿದರು. ಸಿದ್ಧರಾಮಯ್ಯ ಜನರತ್ತ ಬಂದು ಕೈಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.