ADVERTISEMENT

ಬಿ.ಸಿ.ರೋಡ್: ರಕ್ತೇಶ್ವರಿ ಬ್ರಹ್ಮಕಲಶ ಇಂದು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 9:05 IST
Last Updated 18 ಮಾರ್ಚ್ 2011, 9:05 IST

ಬಂಟ್ವಾಳ:ತಾಲ್ಲೂಕಿನ ಕೇಂದ್ರಸ್ಥಾನವಾಗಿ ಗುರುತಿಸಿಕೊಂಡಿರುವ ಬಿ.ಸಿ.ರೋಡ್‌ನಲ್ಲಿ ಇದೀಗ ಇಲ್ಲಿನ ಪ್ರಸಿದ್ಧ ‘ರಕ್ತೇಶ್ವರಿ ದೇವಿ ಸನ್ನಿಧಿ’ಯಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಸಡಗರ ಕಂಡು ಬಂದಿದೆ. ಕಳೆದ ಭಾನುವಾರದಿಂದ ಮೊದಲ್ಗೊಂಡು 18ರ ವರೆಗೆ ನಡೆಯಲಿರುವ ದೇವರ ‘ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ’ ಹಾಗೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ.

ದಿನಕ್ಕೆ ಸುಮಾರು ಮೂರು ಸಾವಿರ ಮಂದಿ ಭಕ್ತರಿಗೆ ಅಚ್ಚುಕಟ್ಟಾಗಿ ‘ಬಾಳೆ ಎಲೆ’ ಊಟ ಬಡಿಸುತ್ತಿರುವುದು ಇಲ್ಲಿನ ವಿಶೇಷತೆ. 58 ವರ್ಷ ಹಿಂದೆ ಮರವೊಂದರ ನೆರಳಿನಲ್ಲಿ ಪೂಜಿಸಲಾಗುತ್ತಿದ್ದ ಇಲ್ಲಿನ ‘ರಕ್ತೇಶ್ವರಿ ದೇವಿ ಸನ್ನಿಧಿ’ ಪುನರ್‌ನವೀಕರಣಗೊಂಡಿದೆ. 1982ರ ಬಳಿಕ ಇದೇ ಪ್ರಥಮ ಬಾರಿಗೆ ದೇವಳದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ದೇವಳದ ಗರ್ಭಗುಡಿಗೆ ತಾಮ್ರ ಹೊದಿಕೆ, ತೀರ್ಥಮಂಟಪ, ಮುಖಮಂಟಪದಲ್ಲಿ ಗ್ರಾನೈಟ್ ಅಳವಡಿಸಲಾಗಿದೆ. ನಾಗನಕಟ್ಟೆ, ಭೋಜನ ಶಾಲೆ, ರಂಗಮಂಟಪ ಕಾಮಗಾರಿಗಳು ನಡೆದಿದೆ.

ಇದೇ 18ರಂದು ಬೆಳಿಗ್ಗೆ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಸಂಭ್ರಮದಿಂದ ನಡೆಯಲಿದೆ. ಸಂಜೆ ಧಾರ್ಮಿಕ ಸಭೆಯಲ್ಲಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್, ಪುರಸಭಾಧ್ಯಕ್ಷ ಬಿ.ದಿನೇಶ ಭಂಡಾರಿ, ಬೂಡಾ ಅಧ್ಯಕ್ಷ ಎ.ಗೋವಿಂದ ಪ್ರಭು ಭಾಗವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.