ADVERTISEMENT

ಬೀಡಿನಗುಡ್ಡೆ: ಆಚಾರ್ಯ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 9:45 IST
Last Updated 15 ಫೆಬ್ರುವರಿ 2012, 9:45 IST

`ಉಡುಪಿ: ಡಾ.ವೇದವ್ಯಾಸ ಶ್ರೀನಿವಾಸ (ವಿ.ಎಸ್.) ಆಚಾರ್ಯ ಅವರ ಅಂತಿಮ ಸಂಸ್ಕಾರ ಬೀಡಿನಗುಡ್ಡೆಯ ಹಿಂದೂ ಸ್ಮಶಾನದಲ್ಲಿ ಮಂಗಳವಾರ ತಡರಾತ್ರಿ 12 ಸುಮಾರಿಗೆ ಧಾರ್ಮಿಕ ವಿಧಿವಿಧಾನಗಳ ನಡುವೆ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಹಿರಿಯ ಪುತ್ರ ಡಾ.ರವಿರಾಜ್ ಆಚಾರ್ಯ ಅಂತ್ಯಕ್ರಿಯೆಯ ವಿಧಿಗಳನ್ನು ನಡೆಸಿದರು.
ಇದಕ್ಕೂ ಮುನ್ನ ಆಚಾರ್ಯ ಅವರ ಸ್ವಗೃಹದಲ್ಲಿ ಮಾಧ್ವ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರಪೂರ್ವ ಕ್ರಿಯಾವಿಧಿಗಳನ್ನು ನಡೆಸಲಾಯಿತು. ಈ ಸಂದರ್ಭ ಮಾಧ್ಯಮದವರಿಗೆ ಪ್ರವೇಶ ನಿಷೇಧಿಸಲಾಗಿತ್ತು. ದೆಹಲಿಯಿಂದ ಆಗಮಿಸಿದ್ದ ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ, ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಮನೆಯಲ್ಲಿ ಅಂತಿಮ ದರ್ಶನ ಪಡೆದರು.

ಇದಕ್ಕೆ ಮೊದಲು, ಮಣಿಪಾಲದ ಜಿಲ್ಲಾ ಕಚೇರಿ ಸಂಕೀರ್ಣ ರಜತಾದ್ರಿಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರಾದ ಸುರೇಶ್ ಕುಮಾರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಈಶ್ವರಪ್ಪ, ಮುಖಂಡರಾದ ಡಿ.ಎಚ್.ಶಂಕರಮೂರ್ತಿ ಸೇರಿದಂತೆ ನೂರಾರು ಗಣ್ಯರು, ಅಭಿಮಾನಿಗಳು, ಸಾರ್ವಜನಿಕರು, ಡಾ.ಆಚಾರ್ಯ ಅವರ  ಅಂತಿಮ ದರ್ಶನ ಪಡೆದರು.

ರಾತ್ರಿ 8.20ಕ್ಕೆ ಮಂಗಳೂರಿನಿಂದ ರಸ್ತೆ ಮಾರ್ಗವಾಗಿ ಅವರ ಪಾರ್ಥಿವ ಶರೀರವನ್ನು ಮಣಿಪಾಲದ ರಜತಾದ್ರಿಗೆ ತರಲಾಯಿತು. 9.30ರವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.