ADVERTISEMENT

ಬೆಣ್ಣೆಕುದ್ರು ಸೇತುವೆ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:55 IST
Last Updated 8 ಅಕ್ಟೋಬರ್ 2012, 8:55 IST

ಬ್ರಹ್ಮಾವರ: ಸಾಸ್ತಾನದಿಂದ ಮೂಡಹಡುವಿನ ಮೂಲಕ ನೇರವಾಗಿ ಬಾರ್ಕೂರಿಗೆ ಸಂಪರ್ಕ ಕಲ್ಪಿಸಲು ಬೆಣ್ಣೆಕುದ್ರುವಿನಲ್ಲಿ ನಿರ್ಮಿಸಿದ್ದ ಸೇತುವೆ ಕಾರ್ಯ ಕಳೆದ ಒಂದು ವರ್ಷದಿಂದ ಹಿಂದೆ ಮುಗಿದಿದ್ದರೂ ಎರಡೂ ಕಡೆ ಮಣ್ಣು ಹಾಕದೇ ಇದ್ದ ಕಾರಣ ನೇರ ಸಂಪರ್ಕ ಸಾಧ್ಯವಾಗಿರಲಿಲ್ಲ. ಇದೀಗ ಕಳೆದ ನಾಲ್ಕೈದು ದಿನದಿಂದ ಮಣ್ಣು ಹಾಕುವ ಕಾಮಗಾರಿ ನಡೆದಿದ್ದು, ಶನಿವಾರದಿಂದ ಸಂಚಾರ ಆರಂಭವಾಗಿದೆ.

ಇದರಿಂದ  ಸಾಸ್ತಾನ ಬಾರ್ಕೂರು ಜನತೆಯ ಬಹುದಿನದ ಕನಸು ನನಸಾಗಿದೆ.
ಮೂಡಹಡು ಪಾಂಡೇಶ್ವರದ ಜನತೆ ಸೇತುವೆ ನಿರ್ಮಾಣ ಮತ್ತು ರಸ್ತೆಯ ಬಗ್ಗೆ ಹಲವು ವರ್ಷಗಳಿಂದ  ಜನಪ್ರತಿನಿಧಿಗಳಲ್ಲಿ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರು.

ಡಾ.ಜಿ.ಶಂಕರ್ ನೇತೃತ್ವದಲ್ಲಿ ಹೋರಾಟ ಮಾಡಿದ ಇಲ್ಲಿನ ಸ್ಥಳೀಯರು ಸ್ವಲ್ಪ ದಿನದಲ್ಲೇ ಪ್ರತಿಫಲ ಕಂಡರು. ಕೊನೆಗೂ ಕಾಸರಗೋಡಿನ ಎಲ್.ಓ.ಎಫ್  ಕಂಪೆನಿ ಗುತ್ತಿಗೆ ಪಡೆದುಕೊಂಡು 2010ರ ನವೆಂಬರ್‌ನಲ್ಲಿ ಕಾಮಗಾರಿ ಆರಂಭಿತು. ಸುಮಾರು 2 ಕೋಟಿ ರೂ.ಅಂದಾಜಿನ ಈ ಸೇತುವೆ ಕಾರ್ಯ 2011ರ ಜುಲೈ ತಿಂಗಳಿನಲ್ಲಿ ಮುಗಿಸಿತು. ಆದರೆ ಸೇತುವೆಯ ಎರಡೂ ಬದಿ ಮಣ್ಣು ಹಾಕದೇ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸದೇ ಗುತ್ತಿಗೆದಾರರು ಹಿಂದೆ ಸರಿದಿದ್ದರು.

 ಈ ಬಗ್ಗೆ `ಪ್ರಜಾವಾಣಿ~ ಕಳೆದ 24ರಂದು ಗಮನ ಸೆಳೆದಿತ್ತು.

ಇದೀಗ ಕಳೆದ ಒಂದು ವಾರದಿಂದ ಮಣ್ಣು ಹಾಕಿರುವುದರಿಂದ ಸದ್ಯ ಸಾಸ್ತಾನದಿಂದ ಬಾರ್ಕೂರಿಗೆ ಈ ಸೇತುವೆಯಿಂದ ನೇರವಾಗಿ (ಕೇವಲ 5ಕಿ.ಮೀ) ಬಾರ್ಕೂರಿಗೆ ಬರಬಹುದಾಗಿದೆ.

ಇದಲ್ಲದೇ ಮಂದಾರ್ತಿ ಕಡೆಯಿಂದ ಸಾಸ್ತಾನಕ್ಕೆ ಹೋಗುವವರಿಗೂ ಈ ಮಾರ್ಗ ಹತ್ತಿರವಾಗಲಿದೆ. ಈ ಸೇತುವೆ ನಿರ್ಮಾಣದಿಂದ   ಸುಮಾರು 10 ಕಿ.ಮೀ ನಷ್ಟು ಬಾರ್ಕೂರು ಜನತೆಗೆ ಸಾಸ್ತಾನ, ಸಾಸ್ತಾನ ಜನತೆಗೆ ಬಾರ್ಕೂರು ಹತ್ತಿರವಾಗಿದೆ ಯಲ್ಲದೇ ಸುತ್ತಮುತ್ತಲಿನ ಮೂರ‌್ನಾಲ್ಕು ಗ್ರಾಮದ ಜನತೆಯ ಬಹುದಿನದ ಕನಸು ನನಸಾಗಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT