ADVERTISEMENT

ಬೆಲೆ ಏರಿಕೆ ವಿರುದ್ಧ ಚಕ್ಕಡಿಗಾಡಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:05 IST
Last Updated 20 ಜನವರಿ 2011, 9:05 IST

ಉಡುಪಿ: ಪೆಟ್ರೋಲ್, ಡೀಸೆಲ್, ವಿದ್ಯುತ್, ಈರುಳ್ಳಿ ಹಾಗೂ ಇನ್ನಿತರ ದಿನಬಳಕೆಯ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದು ಕೂಡಲೇ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ, ಕಟಪಾಡಿ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಮತ್ತು ಕುಕ್ಕಿಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯೆಯರ ಒಕ್ಕೂಟದ ವತಿಯಿಂದ ಬುಧವಾರ ಇಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು.

ಜೋಡುಕಟ್ಟೆಯಿಂದ ಹೊರಟ ಎರಡು ಎತ್ತುಗಳ ಚಕ್ಕಡಿಗಾಡಿಯಲ್ಲಿ ರೈತನೊಬ್ಬ ಕುಳಿತು, ಗಾಡಿಯ ತುಂಬ ವಿವಿಧ ವಸ್ತುಗಳ ಬೆಲೆ ಏರಿಕೆ ಬರೆದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬರೆದ ಘೋಷಣೆಯ ಬ್ಯಾನರ್ ಕಟ್ಟಿ, ಮುಂಭಾಗದಲ್ಲಿ ಡೋಲು, ತಾಳ ಬಡಿಯುತ್ತ ತಾಲ್ಲೂಕು ಕಚೇರಿ, ಡಯಾನಾ ವೃತ್ತ, ಕೆ.ಎಂ.ಮಾರ್ಗವಾಗಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್‌ವರೆಗೆ ಮೆರವಣಿಗೆ ಸಾಗಿ ಬಂತು. ಅದರೊಂದಿಗೆ ಈರುಳ್ಳಿ ಬೆಲೆ ಗಗನಕ್ಕೆ ಮುಟ್ಟಿದೆ ಎನ್ನುವುದನ್ನು ತೋರಿಸುವಂತೆ ಒಂಟೆಯ ಕುತ್ತಿಗೆಗೆ ಚಿಕ್ಕ ಈರುಳ್ಳಿ ಮೂಟೆ ಕಟ್ಟಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನಾಗರಿಕ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ‘ಇತ್ತೀಚಿನ ದಿನಗಳಲ್ಲಿ ಬೆಲೆಏರಿಕೆ ವಿಪರೀತವಾಗಿದೆ. ಈ ದುಬಾರಿ ಕಾಲದಲ್ಲಿ ಯಾರೂ ಕೂಡ ನೆಮ್ಮದಿಯ ಬದುಕು ಸಾಗಿಸದಂತಾಗಿದೆ. ಬಡಜನರು ತಿನ್ನುವ ಗೆಣಸಿನ ಬೆಲೆ ಕೂಡ ಈಗ ಶ್ರೀಮಂತರು ಮಾತ್ರವೇ ಕೊಂಡು ತಿನ್ನುವಂತಾಗಿದೆ.

ಅಗತ್ಯವಸ್ತುಗಳ ಬೆಲೆ ಇಳಿಕೆ ಮಾಡುವ ಬಗ್ಗೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಜನರ ಜೀವ ಹಿಂಡುವ ಬೆಲೆ ಏರಿಕೆ ಕಡಿಮೆ ಮಾಡಲು ಕೂಡಲೇ ಕೇಂದ್ರದ ಯುಪಿಎ ಸರ್ಕಾರರ ಗಮನ ಹರಿಸಬೇಕು. ಈ ಬಗ್ಗೆ ಸಹಿ ಸಂಗ್ರಹ ಮಾಡಿ ರಾಜ್ಯಪಾಲರಿಗೆ ಸಲ್ಲಿಸಬೇಕು ಎನ್ನುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದರು.

ಕುಕ್ಕಿಕಟ್ಟೆ ಮಹಿಳಾ ಸಂಘಟನೆ ಸದಸ್ಯರ ಒಕ್ಕೂಟ ಸಂಯೋಜಕಿ ರಮಾದೇವಿ ಮಾತನಾಡಿ, ಬೆಲೆ ಏರಿಕೆಯಿಂದಾಗಿ ಬಡವರು ಬದುಕುವುದೇ ಕಷ್ಟವಾಗಿದೆ. ಮನುಷ್ಯನ ಬದುಕಿನ ಹೊರತಾಗಿ ಎಲ್ಲದಕ್ಕೂ ಬೆಲೆ ಏರಿಕೆಯಾಗಿದೆ. ಜನರ ಜೀವನ ಮಟ್ಟ ಮಾತ್ರ ಕುಸಿಯುತ್ತಿದೆ. 3-4 ಸಾವಿರ ದುಡಿವ ಜನರು ಈ ದುಬಾರಿ ಕಾಲದಲ್ಲಿ ಬದುಕುವುದಾದರೂ ಹೇಗೆ? ಮಧ್ಯಮ ವರ್ಗದ ಜನರು ಕೂಡ ಭಾರಿ ಸಂಕಷ್ಟಕ್ಕೀಡಾಗಿದ್ದಾರೆ. ಬೆಲೆ ಏರಿಕೆಯಿಂದಾಗಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎನಿಸಿದೆ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪೆರ್ಡೂರಿನ ರೈತ ರಾಘವ ಹೆಗ್ಡೆ ಜೋಡಿ ಎತ್ತು, ಚಕ್ಕಡಿ ಗಾಡಿ ತಂದಿದ್ದರು. ಮಲ್ಪೆಯ ಸತೀಶ್ ಒಂಟೆ ತಂದಿದ್ದರು. ಕಾಪು ಕಣಜಾರಿನ ವಿದ್ಯಾ–ರ್ಥಿಗಳು, ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು, ವಸಂತಿ, ಪ್ರಭಾ ಶೆಟ್ಟಿ, ಶೀಲಾ, ಸರಸ್ವತಿ, ಶೋಭಾ ಸೇರಿದಂತೆ ಭಾಗ್ಯಮಂದಿರ ಕುಕ್ಕಿಕಟ್ಟೆಯ ಮಹಿಳಾ ಸಂಘಟನೆಯ ಸದಸ್ಯೆಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.