ADVERTISEMENT

ಭೂಮಾಪಕರ ಗೈರು ಹಾಜರಿ: ನೋಟಿಸ್‌ಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 9:56 IST
Last Updated 4 ಡಿಸೆಂಬರ್ 2012, 9:56 IST

ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ತಾಲ್ಲೂಕು ಕಚೇರಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯ ಬಗ್ಗೆ ಪರಿಶೀಲನೆ ನಡೆಸಿದರು. ಕಚೇರಿಗೆ ಹಾಜರಾಗದ ಆರು ಮಂದಿ ಭೂ ಮಾಪಕರಿಗೆ ಕಾರಣ ಕೇಳಿ ನೋಟಿಸ್ ನೀಡಿ ಎಂದು ಅವರು ತಹಶೀಲ್ದಾರ್ ಅಭಿಜಿನ್ ಅವರಿಗೆ ತಾಕೀತು ಮಾಡಿದರು.

4,313 ಈಗಾಗಲೇ ತಯಾರಾಗಿರುವ ಪಡಿತರ ಚೀಟಿ ಏಕೆ ವಿತರಣೆ ಆಗಿಲ್ಲ ಎಂದು ಸಚಿವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕ ಬಿ.ಅರುಣ್ ಕುಮಾರ್ ಸಾಂಗವಿ ಅವರನ್ನು ಪ್ರಶ್ನಿಸಿದರು. 15 ದಿನದಲ್ಲಿ ಈ ಎಲ್ಲ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ. ಕಂಪ್ಯೂಟರ್ ಮತ್ತು ಸಿಬ್ಬಂದಿ ಕೊರತೆ ಇರುವ ಕಾರಣ ವಿತರಣೆ ವಿಳಂಬ ಆಗುತ್ತಿದೆ ಎಂದು ಸಾಂಗವಿ ಹೇಳಿದರು. ಜಿಲ್ಲಾಧಿಕಾರಿಯ ಜೊತೆ ಈ ಬಗ್ಗೆ ಚರ್ಚಿಸಿ ಕಂಪ್ಯೂಟರ್ ಒದಗಿಸಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಆರ್‌ಟಿಸಿ ನೀಡುವಲ್ಲಿನ ವಿಳಂಬದ ಬಗ್ಗೆ ಅಧಿಕಾರಿಗಳನ್ನು ಅವರು ಪ್ರಶ್ನಿಸಿದರು. ಸಿಬ್ಬಂದಿ ಕೊರತೆ ಇದೆ ಮತ್ತು ಹೊಸ ಸಿಬ್ಬಂದಿಗೆ ಈ ಬಗ್ಗೆ ಅನುಭವ ಇಲ್ಲ. ಆದ್ದರಿಂದ ಆರ್‌ಟಿಸಿ ವಿತರಣೆ ವಿಳಂಬ ಆಗುತ್ತಿದೆ ಎಂದು ತಹಶೀಲ್ದಾರ್ ವಿವರಣೆ ನೀಡಿದರು. ನಿವೃತ್ತ ಸಿಬ್ಬಂದಿಯನ್ನು ಬಳಸಿ ಆರ್‌ಟಿಸಿ ನೀಡಲು ಕ್ರಮ ಕೈಗೊಳ್ಳಬಹುದು. ನಿವೃತ್ತ ಸಿಬ್ಬಂದಿ ಸೇವೆ ನೀಡಲು ತಯಾರಿದ್ದಾರೆ. ಪ್ರತಿ ತಾಲ್ಲೂಕಿಗೆ ಇಬ್ಬರನ್ನು ನೀಡಿದರೆ ಆರ್‌ಟಿಸಿ ಸರಿಯಾದ ಸಮಯಕ್ಕೆ ನೀಡಬಹುದು ಎಂದು ಉಪ ವಿಭಾಗಾಧಿಕಾರಿ ಸದಾಶಿವ ಪ್ರಭು ಹೇಳಿದರು.

ಕಚೇರಿಗೆ ಹಾಜರಾಗಿಯೂ ಹಾಜರಿ ಪುಸ್ತಕದಲ್ಲಿ ಸಹಿ ಮಾಡದ ಸಿಬ್ಬಂದಿಗೆ ನೋಟಿಸ್ ನೀಡಿ ಎಂದು  ಸೂಚಿಸಿದರು.
ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಉಪೇಂದ್ರ ನಾಯಕ್, ಗೀತಾಂಜಲಿ ಸುವರ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.