ADVERTISEMENT

ಮಂಗಳೂರು-ಬೆಂಗಳೂರು ಮಾರ್ಗ .ಹಗಲು ರೈಲು ನಿತ್ಯ ಸಂಚಾರ ಶೀಘ್ರ ಸಾಧ್ಯತೆ.

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 8:30 IST
Last Updated 16 ಮಾರ್ಚ್ 2011, 8:30 IST

ಸುಬ್ರಹಣ್ಯ: ಮಂಗಳೂರು-ಬೆಂಗಳೂರು ಮಾರ್ಗದಲ್ಲಿ  ಹಗಲು ರೈಲು ನಿತ್ಯ ರೈಲು ಸಂಚಾರ ಆರಂಭಿಸಲು ಯಾವುದೇ ಅಡಚಣೆ ಇಲ್ಲ, ಈ ಬಗ್ಗೆ ಶೀಘ್ರದಲ್ಲೇ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ವರದಿ ನೀಡಲಿದ್ದು, ಮುಂದಿನ ರೈಲ್ವೆ ಪೂರಕ ಬಜೆಟ್ ವೇಳೆ ಮಂಡನೆಯಾಗುವ ಸಾಧ್ಯತೆ ಇದೆ ಎಂದು  ಭಾರತೀಯ ರೈಲ್ವೆ ನೈರುತ್ಯ ವಲಯದ  ಪ್ರಧಾನ ವ್ಯವಸ್ಥಾಪಕ ಕುಲದೀಪ್ ಚತುರ್ವೇದಿ ವಿಶ್ವಾಸ ವ್ಯಕ್ತಪಡಿಸಿದರು.

ಸಕಲೇಶಪುರ-ಮಂಗಳೂರು ನಡುವಣ ಘಾಟಿಯಲ್ಲಿ ದೋಣಿಗಲ್‌ನಿಂದ ಎಡಕುಮೇರಿಯಾಗಿ ಅರೆಬೆಟ್ಟ ಮೂಲಕ ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲಿನಲ್ಲಿ ತಾಂತ್ರಿಕ ಸಿಬ್ಬಂದಿಯೊಂದಿಗೆ ಮಂಗಳವಾರ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಯಾಣಿಕರ ರೈಲು ಈ ಮಾರ್ಗದಲ್ಲಿ ಸಂಚಾರ ನಡೆಸಲು ಈ ಹಳಿ ಸೂಕ್ತ ಹಾಗೂ ಭದ್ರವಾಗಿರುವುದು  ಇಂದಿನ ತಪಾಸಣೆ ವೇಳೆ ತಿಳಿದುಬಂದಿದೆ ಎಂದರು.

ಹಗಲು ರೈಲು ನಿತ್ಯ ಓಡಾಟ ಮಾಡಲು  ಎಚ್.ಎಂ.ಆರ್.ಡಿ.ಸಿ.ಎಲ್(ಹಾಸನ -ಮಂಗಳೂರು ರೈಲ್ವೆ ಅಭಿವೃದ್ಧಿ ನಿಗಮ)ನಿಂದ ಅಡ್ಡಿ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರಂಭದಲ್ಲಿ ಈ ಮಾರ್ಗ ಬ್ರಾಡ್‌ಗೇಜ್ ಆದಾಗ 25 ವರ್ಷದವರೆಗೆ ನಿಗಮಕ್ಕೆ ಹಳಿಯನ್ನು ಗುತ್ತಿಗೆ ನೀಡಲಾಗಿತ್ತು, ಆದರೆ ಈ ಮಾರ್ಗದಲ್ಲಿ ನಿತ್ಯ ರೈಲು ಓಡಾಟ ಮಾಡುವ ವಿಚಾರವನ್ನು ರೈಲ್ವೆ ಸಚಿವಾಲಯ ನಿರ್ಧರಿಸಲಿದೆ, ನಿಗಮಕ್ಕೂ ಈ ವಿಷಯಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಅವರು ನೆಟ್ಟಣ ರೈಲ್ವೆ ನಿಲ್ದಾಣದ ಶೌಚಾಲಯ ಹಾಗೂ ಪ್ರಯಾಣಿಕರ ಕೊಠಡಿಯನ್ನು ಪರಿಶೀಲಿಸಿ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನೈರುತ್ಯ ವಲದ ಮುಖ್ಯ ಎಂಜಿನಿಯರ್ ಡಿ.ಜಿ.ದಿವಾಟೆ, ಮೈಸೂರು ವಲಯದ ಪ್ರಬಂಧಕ ಬಿ.ಬಿ.ವರ್ಮ,  ಅಧಿಕಾರಿ ಮತ್ತು ತಾಂತ್ರಿಕ ವರ್ಗ ಸೇರಿದಂತೆ ಸುಮಾರು 200ಮಂದಿ ಸಿಬ್ಬಂದಿ ವಿಶೇಷ ರೈಲಿನಲ್ಲಿ ಆಗಮಿಸಿದ್ದರು.ಈ ಸಂದರ್ಭದಲ್ಲಿ ಕಡಬ ಜಿ.ಪಂ.ಸದಸ್ಯೆ ಕುಮಾರಿ ವಾಸುದೇವನ್, ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಅಲೆಕ್ಸಾಂಡರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.