ADVERTISEMENT

ಮರವಂತೆ ಬಂದರಿಗೆ ಜಿಲ್ಲಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 9:51 IST
Last Updated 24 ಜೂನ್ 2017, 9:51 IST

ಬೈಂದೂರು: ಮರವಂತೆಯಲ್ಲಿ ಸಮುದ್ರದ ಅಲೆಗಳ ಅಬ್ಬರದಿಂದ ಅಪಾಯಕ್ಕೆ ಸಿಲುಕಿರುವ ಮರವಂತೆ ಮೀನುಗಾರಿಕಾ ಹೊರಬಂದರು ಪ್ರದೇಶಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಶುಕ್ರವಾರ ಭೇಟಿನೀಡಿ ಪರಿಶೀಲಿಸಿದರು.

‘ಇಲ್ಲಿಯ ಮೀನುಗಾರಿಕಾ ಹೊರಬಂದರು ಕಾಮಗಾರಿಯ ಪಶ್ಚಿಮದ ತಡೆಗೋಡೆ ಅಪೂರ್ಣವಾಗಿರುವುದರಿಂದ ಅಲೆಗಳು ಕೇಂದ್ರೀಕೃತವಾಗಿ ಒಳಕ್ಕೆ ನುಗ್ಗುತ್ತಿವೆ. ಅವು ಸಮುದ್ರದ ತೀರವನ್ನು ರಕ್ಷಿಸಲು ಕಲ್ಲು ಇರಿಸಿ ನಿರ್ಮಿಸುತ್ತಿರುವ ತಾತ್ಕಾಲಿಕ ತಡೆಗೋಡೆ ಕುಸಿಯುವಂತೆ ಮಾಡುತ್ತಿವೆ. ಅದರಿಂದಾಗಿ ಜಮೀನು, ರಸ್ತೆ, ಮನೆಗಳು ಕೊರೆದುಹೋಗುವ ಅಪಾಯ ಎದುರಾಗಿದೆ’ ಎಂದು ಸ್ಥಳೀಯರು ತಿಳಿಸಿದ್ದರು.

ಜಿಲ್ಲಾಧಿಕಾರಿ ಮೀನುಗಾರರೊಡನೆ ಚರ್ಚಿಸಿದರು. ಈಗ ನಿರ್ಮಿಸುತ್ತಿರುವ ತಾತ್ಕಾಲಿಕ ತಡೆಗೋಡೆ ಕುಸಿದು ಅಪಾಯ ಸಂಭವಿಸುವ ಸಾಧ್ಯತೆ ಇರುವ ಸ್ಥಳಗಳಲ್ಲಿ ತಡೆಗೋಡೆಯನ್ನು ಇನ್ನಷ್ಟು ಭದ್ರಪಡೆಸಲು ಎಂಜಿನಿಯರ್‌ಗೆ ಸೂಚನೆ ನೀಡುತ್ತೇನೆ’ ಎಂದು ತಿಳಿಸಿದರು.

ADVERTISEMENT

ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯ ಲೋಕೇಶ ಖಾರ್ವಿ, ಅಭಿವೃದ್ಧಿ ಅಧಿಕಾರಿ ಹರಿಶ್ಚಂದ್ರ  ಆಚಾರ್, ಗ್ರಾಮ ಕರಣಿಕ ಮಹಾಂತೇಶ್ ಕೋಣೆನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.