ಉಡುಪಿ: ಒಂದು ವಾರದಿಂದ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನಲೆಯಲ್ಲಿ ಮಲ್ಪೆ ಬಂದರಿನಲ್ಲಿ ಕಳೆಗುಂದಿದ್ದ ಮೀನುಗಾರಿಕಾ ಚಟುವಟಿಕೆ ಮತ್ತೆ ರಂಗೇರಿದೆ. ಟನ್‌ಗಟ್ಟಲೆ ದೊರೆತ `ಬೂತಾಯಿ~, `ಬಂಗುಡೆ~ ಮೀನನ್ನು ದೋಣಿಯಿಂದ ಮೊಗೆದು ಬಂದರಿಗೆ ಹಾಕುತ್ತಿದ್ದ ದೃಶ್ಯ ಸೋಮವಾರ ಕಂಡು ಬಂತು. ಮೀನನ್ನು ರಾಶಿಹಾಕುತ್ತಿದ್ದ ಮೀನುಗಾರರ ಮೊಗದಲ್ಲಿ ಮತ್ತೆ ಸಂಭ್ರಮ ಕಳೆಗಟ್ಟಿತ್ತು.
ಮೀನುಗಾರಿಕೆಗೆ ತೆರಳಿದ್ದ ನೂರಾರು ದೋಣಿಗಳು ಕಳೆದ ವಾರ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನಲೆಯಲ್ಲಿ ಬಂದರಿಗೆ ಮರಳಿದ್ದವು. ಮಲ್ಪೆಯ ದೋಣಿಗಳ ಜತೆ ಆಸುಪಾಸಿನ ಬಂದರುಗಳ ಬೋಟುಗಳು ಅಲ್ಲಿ ಜಮಾವಣೆಗೊಂಡಿದ್ದವು. ಮಲ್ಪೆ ಬಂದರಿನಲ್ಲಿ ದೋಣಿ ನಿಲ್ಲಿಸಲಿಕ್ಕೂ ಜಾಗವಿರಲಿಲ್ಲ. ಒಂದಕ್ಕೊಂದು ಬೋಟುಗಳು ತಾಗಿದ್ದರಿಂದ ಕೆಲ ದೋಣಿಗಳು ಹಾನಿಗೊಳಗಾಗಿದ್ದವು.
ಕೇವಲ ಹಿಂದಿನ ಒಂದು ವಾರ ಕಡಲು ಪ್ರಕ್ಷುಬ್ಧಗೊಂಡು ಮೀನುಗಾರರು ಕಡಲಿಗೆ ಇಳಿಯದ ಕಾರಣ ಸುಮಾರು 10 ಕೋಟಿಗಳಷ್ಟು ಹಾನಿಯಾಗಿತ್ತು. ದಿನವಹಿ ಕೋಟ್ಯಂತರ ರೂಪಾಯಿ ಮೀನಿನ ವಹಿವಾಟು ನಡೆಯುವ ಮಲ್ಪೆ ಬಂದರಿನಲ್ಲಿ ಒಂದು ದಿನ ಚಟುವಟಿಕೆ ನಿಂತರೂ ಇಷ್ಟೊಂದು ಪ್ರಮಾಣದ ನಷ್ಟ ಖಚಿತ ಎನ್ನುತ್ತಾರೆ ಮೀನುಗಾರರು.
ಆದರೆ ಈಗ 2-3 ದಿನಗಳಿಂದ ಪರಿಸ್ಥಿತಿ ಬದಲಾಗಿದೆ. ಮಳೆ ಸಂಪೂರ್ಣ ನಿಂತಿದ್ದು ದೋಣಿಗಳೆಲ್ಲ ಬಂದರು ಬಿಟ್ಟು ಮತ್ತೆ ಮೀನುಗಾರಿಕೆಯತ್ತ ಮುಖಮಾಡಿವೆ. ಮೀನುಗಾರರ ಮೊಗದಲ್ಲಿ ಮತ್ತೆ ಹರ್ಷ ಮೂಡಿದೆ. ಯಥಾಪ್ರಕಾರ ಬಂದರು ಗಿಜಿಗುಡುತ್ತಿದೆ. ಬಂದರಿನ ಮಾರುಕಟ್ಟೆಯಲ್ಲಿ ಟನ್‌ಗಟ್ಟಲೆ ಮೀನುಗಳ ರಾಶಿ ಬಿದ್ದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.