ADVERTISEMENT

ಮಾರ್ಚ್ ಅಂತ್ಯದೊಳಗೆ ಪೂರ್ಣ: ಭರವಸೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 9:20 IST
Last Updated 11 ಫೆಬ್ರುವರಿ 2011, 9:20 IST

ಪುತ್ತೂರು: ಚತುಷ್ಪಥ ರಸ್ತೆ ನಿರ್ಮಾಣದ ಹೆಸರಿನಲ್ಲಿ ಪುತ್ತೂರಿನ ಬೈಪಾಸ್ ರಸ್ತೆಯನ್ನು ಅಗೆದು ಹಾಕಿ ಕಾಮಗಾರಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಸಲಹೆಗಾರ ಎಂಜಿನಿಯರ್ ಬೀರೇಶ್ವರ ಬಾಬು ಮತ್ತು ನಿಗಮದ ಸಹಾಯಕ ಅಭಿಯಂತರ ರವಿಕಿರಣ್  ಅವರು ಮಾರ್ಚ್ ತಿಂಗಳ ಅಂತ್ಯದೊಳಗಾಗಿ ರಸ್ತೆಯ ಒಂದು  ಬದಿಯ ಕಾಮಗಾರಿಯನ್ನು ಪೂರ್ಣಗೊಳಿಸಿ ಸಂಚಾರಕ್ಕೆ  ಯೋಗ್ಯಗೊಳಿಸುವುದಾಗಿ  ಭರವಸೆ ನೀಡಿದರು.

ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ ಹಾದು ಹೋಗುವ ಬೈಪಾಸ್ ರಸ್ತೆಯನ್ನು ಅಗೆದು ಹಾಕಿ ಹಲವು ತಿಂಗಳು ಕಳೆದರೂ ಕಾಮಗಾರಿಯನ್ನು ಪೂರ್ಣಗೊಳಿಸದೆ ಅರ್ಧದಲ್ಲಿ ಸ್ಥಗಿತಗೊಳಿಸಲಾಗಿದೆ.  ಇದರಿಂದಾಗಿ ವಾಹನ ಮತ್ತು ಜನಸಂಚಾರಕ್ಕೆ ತೀರಾ ತೊಡಕಾಗುತ್ತಿದೆ  ಎಂದು ಆರೋಪಿಸಿ ಕರವೇ ಪುತ್ತೂರು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

 ಮೂರು ದಿನಗಳ ಹಿಂದೆಯೇ ಕಾಮಗಾರಿ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಕರವೇ ಪದಾಧಿಕಾರಿಗಳು ಚರ್ಚಿಸಿದ್ದು, ಆ ಸಂಧರ್ಭದಲ್ಲಿ ಅಧಿಕಾರಿಗಳು ಗುರುವಾರ  ಪುತ್ತೂರಿಗೆ ಆಗಮಿಸಿ ಕಾಮಗಾರಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದರು.

ಗುರುವಾರ ಅಧಿಕಾರಿಗಳು ಕಾಮಗಾರಿ ಪರಿಶೀಲನೆಗಾಗಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿ ಸೇರಿದ್ದ ಕರವೇ ಪ್ರಮುಖರು ಅಧಿಕಾರಿಗಳಿಗೆ ಘೇರಾವ್ ಹಾಕಿ ಬೈಪಾಸ್‌ನ ಉರ್ಲಾಂಡಿ ಬಳಿ ರಸ್ತೆ ತಡೆ ನಿರ್ಮಿಸಿ ಕಾಮಗಾರಿ ವಿಳಂಬದ ಕುರಿತು ಆಕ್ರೋಶ ವ್ಯಕ್ತ ಪಡಿಸಿದರು. ಅಲ್ಲದೆ ಕಾಮಗಾರಿಯನ್ನು  ಪುತ್ತೂರು ಜಾತ್ರೆಗೆ ಮುನ್ನ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿದ ಬೀರೇಶ್ವರ ಬಾಬು ಮತ್ತು ರವಿಕಿರಣ್ ಕಾಮಗಾರಿಯನ್ನು ಸ್ಥಗಿತಗೊಳಿಸಿಲ್ಲ. ಮರ, ವಿದ್ಯುತ್ ಕಂಬ ಹಾಗೂ  ನೀರಿನ ಪೈಪ್‌ಲೈನ್  ತೆರವು  ಸೇರಿದಂತೆ ಕೆಲವೊಂದು ತಾಂತ್ರಿಕ ಅಡಚಣೆಗಳಿಂದಾಗಿ ಕಾಮಗಾರಿಯ ವೇಗ ಕುಂಠಿತಗೊಂಡಿದೆ ಎಂದರು.

 ಕಾಮಗಾರಿಗೆ ಕ್ಷಿಪ್ರ ಚಾಲನೆ ನೀಡಿ ಮಾರ್ಚ್ ಅಂತ್ಯದೊಳಗೆ ಅಗೆದು ಹಾಕಲಾದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಂಚಾರ ಮುಕ್ತಗೊಳಿಸುವುದಾಗಿ ಅವರು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.  ಅಧಿಕಾರಿಗಳು ನೀಡಿದ ಭರವಸೆ ಈಡೇರದಿದ್ದಲ್ಲಿ  ಮುಂದೆ ಸಂಪೂರ್ಣ ರಸ್ತೆ  ತಡೆ ನಡೆಸಿ ಉಗ್ರ ರೀತಿಯ ಹೋರಾಟ ನಡೆಸುವುದಾಗಿ ಕರವೇ ಪುತ್ತೂರು ಘಟಕದ ಅಧ್ಯಕ್ಷ ಲೋಕೇಶ್ ಹೆಗ್ಡೆ ಈ ಸಂದರ್ಭದಲ್ಲಿ ಎಚ್ಚರಿಸಿದರು.

ಕರವೇ ರಾಜ್ಯ ಉಪಾಧ್ಯಕ್ಷೆ ರೊಹರಾ ನಿಸಾರ್ ಅಹ್ಮದ್, ತಾಲ್ಲೂಕು ಕಾರ್ಯದರ್ಶಿ ಖಾದರ್ ಹಾಜಿ ಕೂರ್ನಡ್ಕ, ಸಂಘಟನೆಯ  ಪ್ರಮುಖರಾದ ಕಿಟ್ಟಣ್ಣ ಗೌಡ ಬಪ್ಪಳಿಗೆ, ಶಿವಕುಮಾರ್, ಹರೀಶ್ ಆಚಾರ್ಯ ಮತ್ತಿತರರು  ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.