ಉಡುಪಿ: ದುಡಿಸುವ ವರ್ಗವು ದುಡಿಯುವ ಜನರನ್ನು ನಿರಂತರ ಶೋಷಣೆಗೊಳಪಡಿಸಿಕೊಳ್ಳುತ್ತಾ ಬಂದಿದ್ದು ಇತಿಹಾಸದಲ್ಲಿ ಎಲ್ಲಿಯೂ ದುಡಿಯುವ ವರ್ಗವನ್ನು ಅನ್ಯೋನ್ಯತೆಯಿಂದ ಕಂಡ ನಿದರ್ಶನಗಳು ಇಲ್ಲ ಎಂದು ವಿಮಾ ನೌಕರರ ಸಂಘದ ಪಿಚ್ಚಳ್ಳಿ ಶ್ರೀನಿವಾಸ್ ಇಲ್ಲಿ ಹೇಳಿದರು.ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಭಾನುವಾರ ಜರುಗಿದ ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಮಹಿಳಾ ಉಪಸಮಿತಿಯ 13ನೇ ವಾರ್ಷಿಕ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ನಂತರ ಸಮಾಜದ ಪರಿವರ್ತನೆಯಾಗುತ್ತ ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕ್ರಾಂತಿಯ ಹರಿಕಾರರನ್ನು ಒಂದೇ ಜಾತಿ ಮತ್ತು ಪಂಥಕ್ಕೆ ಸೀಮಿತಗೊಳಿಸುವ ಪ್ರವೃತ್ತಿಯು ಜನರಲ್ಲಿ ಸ್ವಾರ್ಥ ಮತ್ತು ಸಂಕುಚಿತ ಮನೋಭಾವಕ್ಕೆ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂವಿಧಾನಾತ್ಮಕವಾಗಿ ಸರ್ಕಾರ ಮತ್ತು ಪ್ರಜೆಗಳು ನಡೆದುಕೊಂಡರೆ ಯಾವುದೇ ಸಂಘಟನೆಗಳ ಅವಶ್ಯಕತೆಗಳಿಲ್ಲ. ಆದರೆ ಸರ್ಕಾರದ ಒಡೆದು ಆಳುವ ನೀತಿಯಿಂದಾಗಿ ಸಾಮಾಜಿಕ ಸಂಘಟಕರನ್ನು, ಸುಧಾರಣಾವಾದಿಗಳನ್ನು ಸಮಾಜಘಾತುಕರೆಂದು ಬಿಂಬಿಸುವ ಪರಿಸ್ಥಿತಿ ಉಂಟಾಗಿರುವುದು ವಿಷಾದನೀಯ ಎಂದರು.
ಬೆಂಗಳೂರಿನ ವಿಮಾ ನಿಗಮ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಗೀತಾ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸಮಾಜದ ಎಲ್ಲೆಡೆ ಸಾಕಷ್ಟು ಬದಲಾವಣೆಗಳಾಗಿದ್ದರೂ ಕೂಡ ವಿಧೇಯತೆಯೇ ಹೆಣ್ಣಿನ ಗುಣ ಎಂದು ಪ್ರತಿಪಾದಿಸುವ ಇಂದಿನ ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸಬೇಕಿದೆ. ಆ ಮೂಲಕ ಬದುಕಿನಲ್ಲಿ ಎಲ್ಲಿ ವಿಧೇಯರಾಗಬೇಕು ಮತ್ತು ಎಲ್ಲಿ ಅವಿಧೇಯರಾಗಿರಬೇಕು ಎಂಬುದನ್ನು ಸಮಾನತೆಯ ತಳಹದಿಯಲ್ಲಿ ಮಹಿಳೆ ಅರಿತಿರಬೇಕು ಎಂದು ಹೇಳಿದರು.
ಜಾಗತೀಕರಣ, ಬೆಲೆ ಏರಿಕೆ, ಭ್ರಷ್ಟಾಚಾರ, ಮತ್ತು ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ಜನರ ಬದುಕು ಇನ್ನಷ್ಟು ದುಸ್ತರವಾಗುತ್ತಿದೆ. ಒಂದೆಡೆ ಸರ್ಕಾರದ ಗೋದಾಮುಗಳಲ್ಲಿ ಅಪಾರ ಪ್ರಮಾಣದ ಆಹಾರ ಧಾನ್ಯಗಳು ತುಂಬಿಕೊಂಡಿದ್ದರೆ, ಇನ್ನೊಂದೆಡೆ ಬಡಜನರು ಒಪ್ಪೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಜನರ ಸಂಕಷ್ಟದ ಬಗ್ಗೆ ಸರ್ಕಾರ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದೆ. 10 ಲಕ್ಷ ಕೋಟಿ ಬಜೆಟ್‌ನಲ್ಲಿ ಶ್ರೀಮಂತ ವರ್ಗಕ್ಕೆ 5 ಲಕ್ಷ ಕೋಟಿ ತೆರಿಗೆ ತೆರಿಗೆ ರಿಯಾಯ್ತಿ ನೀಡುತ್ತದೆ. ಹೀಗಿದ್ದಾಗ ಸರ್ಕಾರದ ನೀತಿಗಳು ಯಾರ ಪರ ಎಂದು ತೋರಿಸುತ್ತದೆ ಎಂದು ಟೀಕಿಸಿದರು.
ಮಹಿಳೆಯರು ಹಸಿವು ಮತ್ತು ಬದುಕಿಗಾಗಿ ತಮ್ಮ ಮೈ ಮಾರಿಕೊಂಡು ಜೀವನ ಮಾಡುವುದು ಹಾಗೂ ಕೆಲವೆಡೆ ಬಾಡಿಗೆ ತಾಯಿಯಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಶೋಚನೀಯ ಎಂದರು. ಆದಾಗ್ಯೂ ಈ ಎಲ್ಲಾ ಪರಿಸ್ಥಿತಿಯಲ್ಲಿ ನಾವು ಸಿನಿಕರಾಗದೆ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ವಿಮಾ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಬಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಯು.ಗುರುದತ್, ವಿಮಾ ಪಿಂಚಣಿದಾರರ ವಿಭಾಗದ ಪ್ರಧಾನ ಕಾರ್ಯದರ್ಶಿ ಎ. ಮಧ್ವರಾಜ ಬಲ್ಲಾಳ್, ಮಹಿಳಾ ಉಪ ಸಮಿತಿ ಸಂಚಾಲಕಿ ನಿರ್ಮಲಾ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.