ADVERTISEMENT

ಮೀನು ಮಾರುವ ವೃತ್ತಿ ಘನತೆ ಹೆಚ್ಚಿಸಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 8:40 IST
Last Updated 13 ಫೆಬ್ರುವರಿ 2012, 8:40 IST
ಮೀನು ಮಾರುವ ವೃತ್ತಿ ಘನತೆ ಹೆಚ್ಚಿಸಿ
ಮೀನು ಮಾರುವ ವೃತ್ತಿ ಘನತೆ ಹೆಚ್ಚಿಸಿ   

ಕಟಪಾಡಿ: `ಮತ್ಸ್ಯೋದ್ಯಮ ಕರಾವಳಿಯ ಪ್ರಮುಖ ಉದ್ಯಮವಾಗಿದ್ದರೂ ಇಂದು ವ್ಯವಸ್ಥಿತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ವೃತ್ತಿ ಘನತೆ ಕಡಿಮೆಯಾಗಿದೆ. ಮೀನು ಮಾರಾಟಗಾರರ ವೃತ್ತಿ ಘನತೆ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ರೂ 5 ಕೋಟಿ  ಈಗಾಗಲೇ ಬಿಡುಗಡೆಗೊಳಿಸಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್. ಆಚಾರ್ಯ ಹೇಳಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ  ಮತ್ತು ಹೈದರಾಬಾದಿನ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಕಟಪಾಡಿ ಪೇಟೆಯಲ್ಲಿ ನೂತನವಾಗಿ ಸುಮಾರು ರೂ 70 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೀನು ಮಾರುಕಟ್ಟೆ ಕಟ್ಟಡಕ್ಕೆ ಭಾನುವಾರ  ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

`ಜನಕಲ್ಯಾಣ ಕೆಲಸ ಮಾಡಲು ರಾಜ್ಯ ಸರ್ಕಾರಕ್ಕೆ ಹಣದ ಕೊರತೆ ಇಲ್ಲ. ಕಳೆದ 3 ವರ್ಷದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳು ಅಮೂಲಾಗ್ರ ಬದಲಾವಣೆ ಕಂಡಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಸಣ್ಣ ನದಿಗಳ ನೀರನ್ನು ಉಳಿಸಲು ಕಿರು ಸೇತುವೆ ನಿರ್ಮಾಣಕ್ಕೆ ಪ್ರತೀ ಜಿಲ್ಲೆಗಳಿಗೆ ತಲಾ 10 ಕೋಟಿಯಂತೆ 3 ಜಿಲ್ಲೆಗಳಿಗೆ 30ಕೋಟಿ ರೂಪಾಯಿ ಮೀಸಲಿಡಲಾಗಿದೆ~ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡಿ, `ಕರಾವಳಿಯ 10 ಮೀನುಮಾರು ಕಟ್ಟೆಗಳ ಅಭಿವೃದ್ಧಿಗೆ 11ಕೋಟಿ ರೂಪಾಯಿ ಬಿಡುಗಡೆಯಾಗಿದೆ~ ಎಂದರು.

ಶಾಸಕ ಲಾಲಜಿ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ತಾ.ಪಂ. ಅಧ್ಯಕ್ಷ ದೇವದಾಸ ಹೆಬ್ಬಾರ್, ತಾ.ಪಂ. ಸದಸ್ಯ ಶ್ರಿಕರ ಅಂಚನ್, ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಸುಗುಣ ಪೂಜಾರ್ತಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವೀಂದ್ರನಾಥ್ ಹೆಗ್ಡೆ, ಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್, ಜಿಲ್ಲಾ ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್, ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ,ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಕಾರ್ಯದರ್ಶಿ ಕೆ. ಪ್ರಭಾಕರ ರಾವ್,  ರಾಮಚಂದ್ರ ಭಟ್ ಮತ್ತಿತರರು ಇದ್ದರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.