ADVERTISEMENT

ಮೂಡುಪಲಿಮಾರು: ಅತಂತ್ರರಾದ ಮಕ್ಕಳು

ಉರ್ದು ಶಾಲಾ ಆಡಳಿತ ಮಂಡಳಿ, ಮಸೀದಿ ಆಡಳಿತ ಮಂಡಳಿ ತಿಕ್ಕಾಟ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 10:37 IST
Last Updated 13 ಜೂನ್ 2018, 10:37 IST
ಶಾಲೆಗೆ ಬೀಗ ಹಾಕಿದ ಪರಿಣಾಮ ಮಕ್ಕಳು ಹಾಗೂ ಪೋಷಕರು ಶಾಲೆ ಹೊರ ಭಾಗದಲ್ಲಿ ಕಾಯಬೇಕಾಯಿತು.
ಶಾಲೆಗೆ ಬೀಗ ಹಾಕಿದ ಪರಿಣಾಮ ಮಕ್ಕಳು ಹಾಗೂ ಪೋಷಕರು ಶಾಲೆ ಹೊರ ಭಾಗದಲ್ಲಿ ಕಾಯಬೇಕಾಯಿತು.   

ಪಡುಬಿದ್ರಿ: ಇಲ್ಲಿನ ಮೂಡುಪಲಿಮಾರಿನ ಮಸೀದಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಾಲಾಡಳಿತ ಮಂಡಳಿ ಹಾಗೂ ಮಸೀದಿ ಆಡಳಿತ ಮಂಡಳಿಯ ತಿಕ್ಕಾಟದಿಂದ ಇಲ್ಲಿನ ಮಕ್ಕಳು ಅತಂತ್ರರಾಗಿದ್ದಾರೆ.

ಇಲ್ಲಿನ ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಸುಲ್ ಉಲಮಾ ಇಸ್ಲಾಮಿಕ್ ಆಂಡ್ ಜನರಲ್ ಎಜುಕೇಶನ್ ಆಡಳಿತದಲ್ಲಿ 6 ವರ್ಷ
ಗಳಿಂದ ಹಯತುಲ್ ಇಸ್ಲಾಂ ಜುಮ್ಮಾ ಮಸೀದಿ ಕಟ್ಟಡದಲ್ಲಿ ಶಾಲೆ ಕಾರ್ಯಾಚರಿಸುತ್ತಿದೆ. ಶಂಸುಲ್ ಉಲಮಾ ಸಂಸ್ಥೆಯ ಪ್ರಧಾನ ಕಾರ್ಯ
ದರ್ಶಿಯಾಗಿದ್ದ ಎಂ.ಪಿ ಮೊಯ್ದಿನಬ್ಬ ಅವರೇ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಶಾಲೆ ಆರು ವರ್ಷಗಳಲ್ಲಿ ಉತ್ತಮವಾಗಿ ನಡೆಯುತ್ತ ಬಂದಿತ್ತು. ಈ ಮಧ್ಯೆ ಆರು ತಿಂಗಳ ಹಿಂದೆ ನಡೆದ ಮಹಾಸಭೆಯಲ್ಲಿ ಮಸೀದಿ ಜಮಾತ್‌ಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಅಂದಿನಿಂದ ಶಾಲಾ ಆಡಳಿತ ಮಂಡಳಿ ಹಾಗೂ ಜಮಾತ್ ನಡುವೆ ತಿಕ್ಕಾಟ ಆರಂಭವಾಯಿತು.

ಒಂದೂವರೆ ವರ್ಷದಿಂದ ಶಾಲಾಡಳಿತ ಮಂಡಳಿ ಬಾಡಿಗೆಯನ್ನು ಪಾವತಿಸಿಲ್ಲ. ಕಳೆದ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಾಲೆಯನ್ನು ತೆರವು ಮಾಡುವಂತೆ ಜಮಾತ್ ಆಡಳಿತ ಶಾಲಾಡಳಿತ ಮಂಡಳಿಗೆ ಸೂಚಿಸಿತ್ತು. ಅದಕ್ಕೆ ಒಪ್ಪಿಗೆ ನೀಡಿದ್ದ ಶಾಲಾಡಳಿತ ಮಂಡಳಿ ಈ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮೇ 28ರಂದು ಶಾಲೆಯನ್ನು ಪುನರಾರಂಭ ಮಾಡಿತ್ತು. ಮೇ 31 ರಂದು ಶಾಲೆಯನ್ನು ತೆರವು ಮಾಡುವಂತೆ ಮತ್ತೆ ಸೂಚಿಸಿದರೂ ಅವರು ಗಮನ ಹರಿಸಿಲ್ಲ. ಕಳೆದ ಶುಕ್ರವಾರ ತುರ್ತು ಮಹಾಸಭೆ ಕರೆಯಲಾಗಿತ್ತು. ಸಭೆಗೆ ಶಾಲಾಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಮೊಯ್ದಿನಬ್ಬ ಅವರನ್ನು ಕರೆದಿದ್ದರೂ ಅವರು ಗೈರು ಹಾಜರಾಗಿದ್ದರು. ಈ ಸಭೆಯಲ್ಲಿ ಜಮಾತ್ ಗೆ ಸೇರಿದ 140ರಲ್ಲಿ 130 ಸದಸ್ಯರು ಶಾಲೆ ಮುಚ್ಚುವ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜಮಾಅತ್ ನ ನಿರ್ಧಾರದಂತೆ ಶಾಲೆಗೆ ಬೀಗ ಜಡಿಯಲಾಗಿದೆ ಎಂದು ಜಮಾತ್ ನ ಅಧ್ಯಕ್ಷ ಅಬ್ದುಲ್ ರೆಹಮಾನ್ ಹೇಳಿದರು.

ADVERTISEMENT

‘ಜಮಾತ್ ನ ತುರ್ತು ಸಭೆ ಬಗ್ಗೆ ಊರಿಗೆಲ್ಲ ಮೊದಲೇ ಮಾಹಿತಿ ನೀಡಿದ್ದರೂ, ನನಗೆ ಸಭೆ ಆರಂಭದ ಅರ್ಧ ಗಂಟೆ ಮೊದಲು ತಿಳಿಸಲಾಗಿದೆ. ಬಾಕಿ ಇರುವ ಬಾಡಿಗೆಯನ್ನು ಈಗಲೂ ನೀಡಲು ಬದ್ಧರಿದ್ದೇವೆ. ಈಗಾಗಲೇ ಶಿಕ್ಷಣ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಇನ್ನಾದಲ್ಲಿರುವ ಸರ್ಕಾರಿ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸುವ ಭರವಸೆ ದೊರಕಿದೆ. ಅದುವರೆಗೂ ಶಾಲೆಯ ಮಕ್ಕಳ ದೃಷ್ಟಿಯ ಗಮನದಲ್ಲಿಟ್ಟುಕೊಂಡು ಇಲ್ಲಿ ಶಾಲೆಯನ್ನು ಆರಂಭಿಸಲು ಅವಕಾಶ ಕಲ್ಪಿಸಬೇಕು’ ಎಂದು ಮೊಯ್ದಿನಬ್ಬ ಆಗ್ರಹಿಸಿದರು.

ಮಂಗಳವಾರ ಸ್ಥಳಕ್ಕೆ ಪೊಲೀಸರು ಬಂದು ಶಾಲಾಡಳಿತ ಮಂಡಳಿ ಹಾಗೂ ಜಮಾತ್ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಶಾಲೆಗೆ ಬೀಗ ಹಾಕಿದ ಕಾರಣ ವಿದ್ಯಾರ್ಥಿಗಳು ಹಾಗೂ ಪೋಷಕರು ಹೊರಭಾಗದಲ್ಲಿ ಕಾಯುತ್ತಿದ್ದರು. ಮಧ್ಯಾಹ್ನದವರೆಗೂ ಪೊಲೀಸರೊಂದಿಗೆ ನಡೆದ ಮಾತುಕತೆ ಫಲಪ್ರದವಾಗಲಿಲ್ಲ. ಸಂಜೆ ಮತ್ತೆ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇನ್ನಾ ಶಾಲೆಯಲ್ಲಿ ವ್ಯವಸ್ಥೆ: ಬಿಇಒ

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಭಾಸ್ಕರ್, ‘ಎರಡು ವರ್ಷಗಳಿಂದ ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸಲಾಗಿದ್ದು, 28 ವಿದ್ಯಾರ್ಥಿಗಳಿದ್ದಾರೆ. 1 ರಿಂದ 7 ನೇ ತರಗತಿ ವರೆಗೆ 78 ವಿದ್ಯಾರ್ಥಿಗಳಿದ್ದಾರೆ. ಜೂನ್ 7 ರಂದು ಶಾಲೆ ಮುಚ್ಚುವಂತೆ ಜಮಾತ್ ಕಮಿಟಿ ನೋಟಿಸ್ ನೀಡಿತ್ತು. ಇದರಿಂದಾಗಿ ಶಾಲೆಯ ಮಕ್ಕಳನ್ನು ಹತ್ತಿರದ ಇನ್ನಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶಾತಿ ಮಾಡುವ ಬಗ್ಗೆ ಅಲ್ಲಿನ ಸ್ಥಳೀಯರು ಹಾಗೂ ಶಾಲಾಭಿವೃದ್ಧಿ ಸಮಿತಿ ಜೊತೆ ಚರ್ಚಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪತ್ರ ಬರೆಯಲಾಗುವುದು ಎಂದಿದ್ದಾರೆ.

ಇನ್ನಾ ಶಾಲೆಯಲ್ಲಿ ಪ್ರತ್ಯೇಕ ಶಾಲೆ ನಿರ್ಮಾಣಕ್ಕೆ ಸರ್ಕಾರಿ ಜಮೀನು ಮಂಜೂರು ಮಾಡುವಂತೆ ಶಾಲಾಡಳಿತ ಮಂಡಳಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಸರ್ಕಾರಿ ಜಮೀನು ಮಂಜೂರು ಮಾಡಿ ಪಹಣಿ ಮಾಡಿಕೊಟ್ಟಲ್ಲಿ ಉರ್ದು ಶಾಲೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಇನ್ನಾ ಶಾಲೆಯಲ್ಲಿ ಸ್ಥಳಾವಕಾಶ ಇದೆ. ಅಲ್ಲಿ ಪ್ರತ್ಯೇಕ ಉರ್ದು ವಿಭಾಗವನ್ನು ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ
ಭಾಸ್ಕರ್, ಕಾರ್ಕಳ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.