ADVERTISEMENT

ಯುಪಿಸಿಎಲ್: ತಂಡ ಭೇಟಿ ನೀಡಿದ್ದು ಎಲ್ಲೆಲ್ಲಿಗೆ?

ರಾಮಕೃಷ್ಣ ಸಿದ್ರಪಾಲ
Published 13 ಸೆಪ್ಟೆಂಬರ್ 2011, 8:40 IST
Last Updated 13 ಸೆಪ್ಟೆಂಬರ್ 2011, 8:40 IST

ಉಡುಪಿ: ಉಡುಪಿ ಪವರ್ ಕಾಪೋರೇಶನ್‌ನಿಂದ (ಯುಪಿಸಿಎಲ್) ಆಗುತ್ತಿರುವ ತೊಂದರೆಗಳ ಬಗ್ಗೆ ಸಾಕಷ್ಟು ದೂರುಗಳು ಸ್ಥಳೀಯರಿಂದ, ಜನಪ್ರತಿನಿಧಿಗಳಿಂದ, ಸಂಘಸಂಸ್ಥೆಗಳಿಂದ ಕೇಳಿಬರುತ್ತಿವೆ. ಅಲ್ಲಿ ಮಾಲಿನ್ಯ ನಿಯಂತ್ರಣ ಮಾಡುತ್ತಿಲ್ಲ, ಪರಿಸರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ... ಮುಂತಾದ ದೂರುಗಳ ಸರಮಾಲೆಯೇ ಇದೆ.

ಈ ಹಿನ್ನೆಲೆಯಲ್ಲಿ ಆಗಿನ ಸಂಸದ ಡಿ.ವಿ.ಸದಾನಂದ ಗೌಡ, ಶಾಸಕ ಲಾಲಾಜಿ ಮೆಂಡನ್, ಎಲ್ಲೂರು ಜಿ.ಪಂ.ಸದಸ್ಯ ಅರುಣ್ ಶೆಟ್ಟಿ, ಪಡುಬಿದ್ರಿ ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ ಮೊದಲಾದ ಜನಪ್ರತಿನಿಧಿಗಳ ಮೌಖಿಕ ದೂರಿನ ಆಧಾರದ ಮೇಲೆ ಜುಲೈ 18 ಮತ್ತು 19ರಂದು ಯುಪಿಸಿಎಲ್ ಹಾಗೂ ಅದರ ಸುತ್ತಮುತ್ತಲ ಒಂದು ಕಿ.ಮೀ ವ್ಯಾಪ್ತಿಯ ಪರಿಸರದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸಿದ್ದು, ಜುಲೈ 25ರಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿ (ಕೆಎಸ್‌ಪಿಸಿಬಿ, ಸಿಇಒ, 2011-12) ಸಲ್ಲಿಸಿದೆ.

ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿ ಎಂ.ಡಿ.ಎನ್.ಸಿಂಹ ಹಾಗೂ ಮಂಗಳೂರಿನ ಎಸ್.ಇ.ಒ ಆಗಿರುವ ಸಿ.ಡಿ.ಕುಮಾರ್ ಮತ್ತು ಉಡುಪಿಯ ಉಪ ಪರಿಸರ ಅಧಿಕಾರಿ ಕೆ.ರವಿಚಂದ್ರ (ಇವರು ಇತ್ತೀಚೆಗಷ್ಟೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ) ಸೇರಿ ಸಿದ್ಧಪಡಿಸಿದ ವರದಿ `ಪ್ರಜಾವಾಣಿ~ಗೆ ಲಭ್ಯವಾಗಿದೆ.

ಜು.18ರಂದು ಮೊದಲ ದಿನ ಮಧ್ಯಾಹ್ನ ಇಲ್ಲಿಗೆ ಆಗಮಿಸಿದ ತಂಡವು ಸುತ್ತಮುತ್ತಲ ಪರಿಸರದಲ್ಲಿ ನಡೆಸಿದ ಸಮೀಕ್ಷೆಗಳೇನು, ತಂಡವು ಎಲ್ಲೆಲ್ಲಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿತ್ತು? ಮುಂತಾದ ಸಮಗ್ರ ವಿವರಗಳು ವರದಿಯಲ್ಲಿವೆ.

ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ: ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ ಪರಿಸರಕ್ಕೆ ಸಮೀಕ್ಷಾ ತಂಡ ಭೇಟಿ ನೀಡಿದಾಗ ಆಗಷ್ಟೇ ಮಳೆ ಬಂದುಹೋಗಿತ್ತು. ಕೆಸರು ರಾಡಿ ಮಣ್ಣಿನಿಂದ ಕೂಡಿದ ನೀರು ಪ್ರವಾಹದಂತೆ ಅಲ್ಲಿನ ಹೊಳೆಯಲ್ಲಿ ಹರಿಯುತ್ತಿತ್ತು. ಸ್ಥಳಿಯರು ತಿಳಿಸಿದಂತೆ ಯುಪಿಸಿಎಲ್ ಕಂಪೆನಿಯಿಂದ ತ್ಯಾಜ್ಯದ ನೀರು ಇಲ್ಲಿ ಹರಿಯಬಿಡಲಾಗುತ್ತದೆ. ಅವೆಲ್ಲವೂ ಸೇರಿಕೊಂಡು ನೀರಿನ ಬಣ್ಣವೂ ಬದಲಾಗಿತ್ತು.

ನಂದಿಕೂರು ಬಸ್ ನಿಲ್ದಾಣ: ಇಲ್ಲಿಗೆ ಭೇಟಿ ನೀಡಿದಾಗ ಅಲ್ಲಿನ ಅಂಗಡಿಗಳ ತಗಡುಗಳು ತುಕ್ಕುಹಿಡಿದಿದ್ದು ಕಂಡು ಬಂತು. ಸ್ಥಳಿಯರು ಹೇಳಿಕೊಂಡ ದೂರಿನಂತೆ ಇವೆಲ್ಲ ಯುಪಿಸಿಎಲ್ ಕಂಪೆನಿಯ ಕೂಲಿಂಗ್ ಟವರ್‌ಗೆ ಬಳಸಲಾಗುವುದು ಉಪ್ಪು ನೀರಿನ ಪರಿಣಾಮ. ಅಲ್ಲಿಯೇ ಇದ್ದ ವಿದ್ಯುತ್ ತಂತಿಗಳಿಗೂ ತುಕ್ಕು ಹಿಡಿದಿರುವುದು ಕಂಡು ಬಂತು.

ಉಳ್ಳೂರು ಕರಿಯಶೆಟ್ಟಿ ಮನೆಯ ಸುತ್ತಮುತ್ತ:
ಈ ಪ್ರದೇಶದಲ್ಲಿ ಕಂಡು ಬಂದಂತೆ ಹಿಂದಿನಿಂದ ಇಲ್ಲಿನ ತೋಡು ಬಾವಿಯ ನೀರನ್ನು ಕುಡಿಯಲು ಬಳಸಲಾಗುತ್ತಿತ್ತು. ಆದರೆ ಯುಪಿಸಿಎಲ್ ಪ್ರಾರಂಭವಾದ ಬಳಿಕ ಈ ಬಾವಿಯ ನೀರು ಉಪ್ಪು. ಈ ಸಂದರ್ಭದಲ್ಲಿ ನಾವು ಬಾವಿಯ ನೀರನ್ನು ಕಂಡಾಗ ಅದು ಸ್ಚಚ್ಛವಾಗಿತ್ತು. ಅಲ್ಲದೇ ಕರಿಯ ಶೆಟ್ಟಿ ಮತ್ತು ಅವರ ಮಗನಿಗೆ ಚರ್ಮದ ಮೇಲೆ ಕಪ್ಪು ಕಲೆಗಳಾಗಿವೆ, ಕೈ,ಪಾದಗಳ ಮೇಲೆಲ್ಲ ಚರ್ಮದಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಅಲ್ಲದೇ ಆ ಮನೆಯ ಛಾವಣಿ ಮತ್ತು ವಿದ್ಯುತ್ ತಂತಿ ತುಕ್ಕು ಹಿಡಿದಿರುವುದನ್ನು ಗಮನಕ್ಕೆ ತಂದರು.

ಅಲ್ಲಿನ ಬತ್ತದ ಗದ್ದೆಗಳ ಸಮೀಕ್ಷೆ ನಡೆಸಲಾಯಿತು. ಕರಿಯ ಶೆಟ್ಟಿಯವರು ತಿಳಿಸಿದಂತೆ ಇಲ್ಲಿ ಸ್ಥಾವರ ಸ್ಥಾಪನೆಗೂ ಮುನ್ನ ಬತ್ತದ ಬೆಳೆ ಉತ್ತಮವಾಗಿತ್ತು. ಆದರೆ ಈಗ ಉಪ್ಪಿನ ಅಂಶ ಹೆಚ್ಚಿ ಬೆಳೆಗೆ ಹೊಡೆತ ಬಿದ್ದಿದೆ. ಅವರು ಅಲ್ಲಿನ ಮಣ್ಣು ತೋರಿಸಿದರು. ಅದು ಸಾಮಾನ್ಯ ಮಣ್ಣಿನಂತೆ ಇರದೆ  ಕೇಕ್‌ನಂತಿತ್ತು. ಮಣ್ಣನ್ನು ಪರೀಕ್ಷಾರ್ಥವಾಗಿ ಸಂಗ್ರಹಿಸಲಾಗಿದ್ದು, ಉಡುಪಿಯ ಕೃಷಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಪೈಪ್‌ಲೈನ್ ಕಾರಿಡಾರ್ ಪ್ರದೇಶ: ಈ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸ್ಥಳೀಯ ರೈತರು ಸಾಕಷ್ಟು ದೂರುಗಳನ್ನು ತಂಡಕ್ಕೆ ಸಲ್ಲಿಸಿದರು. ಈ ಪೈಪ್‌ಲೈನ್ ಹಾಕುವಾಗ ಸ್ಥಳೀಯ ರೈತರ ಗದ್ದೆಗಳಿಗೆ ಮಣ್ಣು ತಳ್ಳಲಾಯಿತು, ಕಂಪೆನಿಯು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಪೈಪ್‌ಲೈನ್ ಅಳವಡಿಸಿದೆ. ಅದರಿಂದಾಗಿ ಉಂಟಾದ ಸಮಸ್ಯೆಗಳ ಬಗ್ಗೆ ಸ್ಥಳೀಯರು ದೂರಿದರು.
 
ತಂಡ ಭೇಟಿ ನೀಡಿದಾಗ ದೊಡ್ಡ ಮಣ್ಣಿನ ರಾಶಿ, ಕೆಸರು ನೀರು ಕಂಪೆನಿಯ ಹೊರ ಆವರಣದಲ್ಲಿ ಹರಿಯುವುದು ಕಂಡು ಬಂತು. ಇಲ್ಲಿನ ಉಪ್ಪುಮಿಶ್ರಿತ ರಾಡಿ ನೀರು ಭತ್ತದ ಗದ್ದೆಗಳನ್ನು ಹಾಳುಮಾಡುತ್ತಿದೆ ಎಂದು ಅಲ್ಲಿದ್ದ ಸ್ಥಳೀಯರು ದೂರಿದರು. ಇದೇ ಪೈಪ್‌ಲೈನ್‌ಗಳ ಮೂಲಕ ಕೆಲವೊಮ್ಮೆ ಉಪ್ಪು ನೀರನ್ನು ಇಲ್ಲಿಗೆ ತರಿಸಿಕೊಳ್ಳಲಾಗುತ್ತದೆ. ಇನ್ನೊಮ್ಮೆ ಬಿಸಿನೀರು ಹೊರಬಿಡಲಾಗುತ್ತದೆ ಎಂದರು. 

ಇಷ್ಟು ಪ್ರದೇಶಗಳನ್ನು ನೋಡುವಷ್ಟರಲ್ಲಿ ಮುಸ್ಸಂಜೆಯಾಗಿದ್ದು ಸುತ್ತಲ ಪರಿಸರದಲ್ಲಿ ಕತ್ತಲು ಆವರಿಸಿತ್ತು. ಇನ್ನುಳಿದ ತೊಂದರೆ ಪೀಡಿತ ಪ್ರದೇಶಗಳನ್ನು ಜು.19ರಂದು ನೋಡುವುದಾಗಿ ತೀರ್ಮಾನಿಸಲಾಯಿತು.

ಕೊಳಚೂರು ಗ್ರಾಮಕ್ಕೆ ಭೇಟಿ: ಕೊಳಚೂರು ಗ್ರಾಮದ ದಾಮೋದರ್ ಸುವರ್ಣ ಅವರ ಮನೆಯ ಪರಿಸರಕ್ಕೆ ತಂಡವು ಭೇಟಿ ನೀಡಿತು. ಅವರ ಮನೆಯು ಯುಪಿಸಿಎಲ್‌ನ ಗೋಡೆಯ ಹೊರ ಆವರಣದಲ್ಲಿದೆ. ಅಲ್ಲದೇ ಕಲ್ಲಿದ್ದಲು ಸಂಗ್ರಹಿಸಿರುವ ಪ್ರದೇಶದ ಸಮೀಪದಲ್ಲಿದೆ. ಇವರ ಮನೆಯ ಮಾಡು ಕೂಡ ತುಕ್ಕು ಹಿಡಿದಿರುವುದು ಕಂಡು ಬಂತು. ಅಲ್ಲದೇ ಬಾಳೆಯ ಮರಗಳೆಲ್ಲ ಸೊರಗಿದ್ದು ಎಲೆಗಳೆಲ್ಲ ಕಂದು ಬಣ್ಣಕ್ಕೆ ತಿರುಗಿದ್ದು ಕಂಡು ಬಂತು.

ಬ್ರಹ್ಮ ಬೈದರ್ಕಳ ಗರಡಿ: ಯುಪಿಸಿಎಲ್‌ನ ಆವರಣ ಗೋಡೆಯ ಬಳಿಯಲ್ಲಿಯೇ ಇರುವ ಬ್ರಹ್ಮ ಬೈದರ್ಕಳ ಗರಡಿಯ ಛಾವಣಿ ಕೂಡ ತುಕ್ಕುಹಿಡಿದಿದ್ದು ಬೀಳುವ  ಹಂತದಲ್ಲಿದೆ. ಅಲ್ಲದೇ ಕಂಪೆನಿಯ ಒಳಚರಂಡಿಯು ಇಲ್ಲಿಯೇ ಹರಿಯುತ್ತದೆ.  ತಂಡ ಭೇಟಿ ನೀಡಿದಾಗ ಚರಂಡಿಯಲ್ಲಿ ಕಪ್ಪುಮಿಶ್ರಿತ ನೀರು ಹರಿಯುತ್ತಿತ್ತು. ಈ ನೀರು ಹರಿದು ಬರಲು ಕಾರಣ ಯುಪಿಸಿಎಲ್ ಆವರಣದಲ್ಲಿ ಸಂಗ್ರಹಿಸಿರುವ ಕಲ್ಲಿದ್ದಲು ಮಿಶ್ರಿತ ರಾಡಿ ನೀರು.
ಈ ನೀರೆಲ್ಲ ಕಂಪೆನಿ ಆವರಣದಿಂದಲೇ ಬಂದಿದ್ದು. ಭಾರಿ ಮಳೆಯಿಂದಾಗಿ ಇದು ಉಕ್ಕಿ ಹರಿಯುವಂತಾಗಿತ್ತು. ಈ ಬೈದರ್ಕಳ ಗುಡಿಯ ಬಳಿಯಲ್ಲಿಯೇ ಬಾವಿಯಿದ್ದು, ಈ ಘಟಕದ ಕಲುಷಿತ ನೀರು ಸೇರಿ ಅದು ಉಪಯೋಗಕ್ಕೆ ಬಾರದಂತಾಗಿದೆ.

ಐತಪ್ಪ ಪೂಜಾರಿ ಮನೆ ಪ್ರದೇಶ: ಐತಪ್ಪ ಪೂಜಾರಿ ಮನೆಯ ಅಂಗಳಕ್ಕೆ ಕಾಲಿಟ್ಟಾಗ ಅಲ್ಲಿ ಟಿಲ್ಲರ್ ನಿಂತಿತ್ತು. ಇದನ್ನು ಇತ್ತೀಚೆಗೆ ಖರೀದಿಸಲಾಗಿತ್ತು. ಆದರೆ ಇದನ್ನು ಬಳಸಲಾಗುತ್ತಿಲ್ಲ ಎಂದು ಪೂಜಾರಿ ತಿಳಿಸಿದರು.

ಮನೆಯ ಮಾಡು, ಡಿಶ್ ಆಂಟೆನಾ, ಕಬ್ಬಿಣ ರಾಡ್‌ಗಳೆಲ್ಲ ತುಕ್ಕು ಹಿಡಿದಿರುವುದನ್ನು ಅವರು ತೋರಿಸಿದರು.
`ಕೂಲಿಂಗ್ ಟವರ್‌ನ ಉಪ್ಪು ಆವಿಯ ಅಂಶ ತಮ್ಮ ಮನೆಯ ಮಾಡಿನ ಮೇಲೆ ಶೇಖರವಾಗುತ್ತಿದೆ ಮತ್ತು ತಮ್ಮ ತೋಟಗಳಿಗೆಲ್ಲ  ಹಾನಿ ಮಾಡಿದೆ. ಇಲ್ಲಿ ಪ್ಲಾಸ್ಟಿಕ್ ಶೀಟ್ ಹರಡಿದರೆ ಉಪ್ಪಿನ ಪಸೆ ಸಂಗ್ರಹವಾಗುವುದನ್ನು ಕಾಣಬಹುದು~ ಎಂದರು.
 
ಅವರೇ ತಿಳಿಸಿದಂತೆ ಯುಪಿಸಿಎಲ್ ಕಂಪೆನಿಯ ಮುಳ್ಳುತಂತಿ ಕೂಡ ತುಕ್ಕು ಹಿಡಿದಿದ್ದು ಅದನ್ನು ಅವರು ಪದೇ ಪದೇ ಬದಲಾಯಿಸುತ್ತಾರೆ ಎಂದರು. ನಮ್ಮ ತಂಡದ ಈ ಭೇಟಿಯ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಪ್ರಕಾಶ್ ಶೆಟ್ಟಿ, ಜಯಂತ್ ಕುಮಾರ್, ನಾಗೇಶ್ ಭಟ್ ಮತ್ತು ಕೆಲವು ಸಾರ್ವಜನಿಕರು ಇದ್ದರು. 

 (ನಾಳೆ: ಹಾರುಬೂದಿ ಹೊಂಡ, ಯುಪಿಸಿಎಲ್ ಕಂಪೆನಿಗೆ ತಂಡದ ಭೇಟಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.