ADVERTISEMENT

ಯುಪಿಸಿಎಲ್ ವಿರೋಧಿ ಸಮಾಜ ದ್ರೋಹಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 5:40 IST
Last Updated 13 ಅಕ್ಟೋಬರ್ 2011, 5:40 IST

ಕೋಟತಟ್ಟು(ಉಡುಪಿ): `ರಾಜ್ಯದ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಯುಪಿಸಿಎಲ್ 2ನೇ ಘಟಕ ಕಾರ್ಯಾರಂಭ ಅನಿವಾರ್ಯ. ಇದನ್ನು ವಿರೋಧಿಸುವವರು ಸಮಾಜ ದ್ರೋಹಿಗಳು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಇಲ್ಲಿ ಹೇಳಿದ್ದಾರೆ.

ಕೋಟತಟ್ಟು ಗ್ರಾ.ಪಂ. ವತಿಯಿಂದ ನೀಡಲಾಗುವ ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ, ಕಾರಂತ ಸ್ಮಾರಕ ಭವನ ಉದ್ಘಾಟನಾ ಸಮಾರಂಭಕ್ಕೆ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯುಪಿಸಿಎಲ್ ಎರಡನೇ ಹಂತದ ಕಾರ್ಯಾರಂಭಕ್ಕೆ ಸರ್ಕಾರ ಅನುಮೋದನೆ ನೀಡಿದ್ದನ್ನು ಸಮರ್ಥಿಸಿಕೊಂಡರು.

`ಮೆಸ್ಕಾಂ ವ್ಯಾಪ್ತಿಯಲ್ಲಿ ನಾಲ್ಕು ಜಿಲ್ಲೆಗಳಿಗೆ ಪ್ರತಿದಿನ 10 ಮಿಲಿಯ ಯೂನಿಟ್ ವಿದ್ಯುತ್ ಬೇಕು. ಯುಪಿಸಿಎಲ್ ಕೆಲಸ ಮಾಡುತ್ತಿದ್ದರೆ ಅಲ್ಲಿಂದ 12 ಮಿಲಿಯ ಯೂನಿಟ್ ಸಿಗುತ್ತದೆ. ಹೀಗಾಗಿ ರಾಜ್ಯದ ವಿದ್ಯುತ್ ಸಮಸ್ಯೆಯನ್ನು ಸ್ವಲ್ಪವಾದರೂ ಬಗೆಹರಿಸಬೇಕಿದ್ದರೆ ಯುಪಿಸಿಎಲ್‌ನ 2ನೇ ಘಟಕ ಕಾರ್ಯಾರಂಭ ಮಾಡಲೇ ಬೇಕಿದೆ~ ಎಂದು ಅವರು ಹೇಳಿದರು.

`ರಾಜ್ಯಕ್ಕೆ ಬರುವ ಪ್ರತಿ ಕೆ.ಜಿ. ಕಲ್ಲಿದ್ದಲೂ ಕೂಡ ಕೇಂದ್ರದಿಂದಲೇ ಬರಬೇಕು. ಅಲ್ಲಿಂದಲೇ ಪೂರೈಸದ ಮೇಲೆ ಇಲ್ಲಿನ ಘಟಕ ನಡೆಸುವುದು ಹೇಗೆ? ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇರುವುದು ನಿಜ. ದೀಪಾವಳಿಯವರೆಗೂ ಬಹುಶಃ ಇದೇ ಸಮಸ್ಯೆ ಮುಂದುವರಿಯಲಿದೆ~ ಎಂದರು.

14ರಂದು ನವದೆಹಲಿಯಲ್ಲಿ ಸಭೆ:  `ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇದೇ ಅ.14ರಂದು ಮುಖ್ಯಮಂತ್ರಿ ಹಾಗೂ ಇಂಧನ ಸಚಿವರು ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಲು ನವದೆಹಲಿಗೆ ತೆರಳಲಿದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರಾಜ್ಯದ ವಿದ್ಯುತ್ ಸಮಸ್ಯೆ ಪರಿಹರಿಸಬೇಕಿದೆ~ ಎಂದರು.
`ವಿದ್ಯುತ್ ಸಮಸ್ಯೆ ಬಗೆಹರಿಸಲು ಇತರೆಡೆಯಿಂದ ವಿದ್ಯುತ್‌ಖರೀದಿ ನಡೆದಿದೆ. ಕಲ್ಲಿದ್ದಲು ಸರಬರಾಜಿನ ಯತ್ನವೂ ನಡೆದಿದೆ. ತಾತ್ಕಾಲಿಕವಾಗಿ ಅಡಚಣೆ ಉಂಟಾಗಿದ್ದು ಶೀಘ್ರವೇ ವಿದ್ಯುತ್ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ~ ಎಂದರು.

`50 ವರ್ಷ ಆಳಿದವರು ಏಕೆ ಸಮಸ್ಯೆ ಪರಿಹರಿಸಲು ಯತ್ನಿಸಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯತ್ನ ನಡೆದಿದೆ,   ಫಲಕ್ಕಾಗಿ ಕಾಯಬೇಕು~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.