ADVERTISEMENT

ವನ್ಯಜೀವಿ ಜತೆ ಛಾಯಾಗ್ರಹಣದ ಅಳಿವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 8:40 IST
Last Updated 4 ಅಕ್ಟೋಬರ್ 2011, 8:40 IST

ಉಡುಪಿ: `ವನ್ಯಜೀವಿಗಳು ಮಾತ್ರವೇ ಈಗ ಅಳಿವಿನಂಚಿನಲ್ಲಿಲ್ಲ ವನ್ಯಜೀವಿ ಛಾಯಾಗ್ರಾಹಕರೂ ವಿರಳವಾಗಿದ್ದಾರೆ. ಹೀಗಾಗಿ ವನ್ಯಜೀವಿ ಛಾಯಾಗ್ರಹಣ ಹಿಂದೆಂದಿಗಿಂತ ಹೆಚ್ಚು ಪ್ರಾಮುಖ್ಯತೆ ಪಡೆದಿದೆ~ ಎಂದು ಹಿರಿಯ ಪರಿಸರ ತಜ್ಞ ಡಾ.ಎನ್.ಎ.ಮಧ್ಯಸ್ಥ ಇಲ್ಲಿ ಹೇಳಿದರು.

ವಿಶ್ವ ವನ್ಯಜೀವಿ ಸಪ್ತಾಹದ ಅಂಗವಾಗಿ `ಬಣ್ಣ~ಸಂಘಟನೆ ವತಿಯಿಂದ ಅ.5ರವರೆಗೆ ಆಯೋಜಿಸಿರುವ ವನ್ಯಜೀವಿ ಛಾಯಾಗ್ರಾಹಕ ರಾಘವೇಂದ್ರ ಕೊಡಂಗಳ ಅವರ ಛಾಯಾಚಿತ್ರ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

`ವನ್ಯಜೀವಿ ಛಾಯಾಚಿತ್ರಗಳಿಗೆ ಪತ್ರಿಕೆಗಳಲ್ಲಿ ಜಾಗ ಸಿಗುವುದು ಇತ್ತೀಚೆಗೆ ಬಹಳ ಕಡಿಮೆಯಾಗಿದೆ. ಅಗತ್ಯದ ಬರಹಗಳಿಗೆ ಅಂತರ್ಜಾಲದ ಚಿತ್ರ ಪ್ರಕಟಿಸುತ್ತಾರೆ. ಇನ್ನು ವನ್ಯಜೀವಿಗಳ ಕಾಯಿದೆ ಕೂಡ ಕಠಿಣವಾಗಿದ್ದು, ಛಾಯಾಗ್ರಾಹಕ ಬೇಕಾದಂತೆ ಕಾಡಿನಲ್ಲಿ ಕುಳಿತು ಫೋಟೋ ತೆಗೆದುಯುವಂತಿಲ್ಲ ಇವೆಲ್ಲ~ ಎಂದರು.

`ಕೆಲವು ವನ್ಯಜೀವಿ ಛಾಯಾಗ್ರಾಹಕರು ಪಕ್ಷಿಗಳು ಮರಿಹಕ್ಕಿಗೆ ಗೂಡಿನಲ್ಲಿ ಗುಟುಕು ನೀಡುವ ಚಿತ್ರಗಳನ್ನು ತೆಗೆಯುತ್ತಾರೆ. ಇದಕ್ಕಾಗಿ ಗೂಡು ಹುಡುಕಲು ಯಾರಾನ್ನಾದರೂ ನಿಯೋಜಿಸಿಕೊಳ್ಳುತ್ತಾರೆ. ದುರಂತವೆಂದರೆ ಹಾಗೆ ಫೊಟೋ ತೆಗೆದ ಬಳಿಕ ಮತ್ಯಾರೂ ಅದರ ಫೊಟೋ ತೆಗೆಯಬಾರದು ಎಂದು ಗೂಡನ್ನೇ ಹಾಳು ಮಾಡುವವರೂ ಇದ್ದಾರೆ. ಹೀಗಾಗಿ ಇಂತಹ ಫೋಟೋಗಳಿಗೆ ಬಹುಮಾನ ನೀಡುವುದನ್ನು ಫೋಟೋಗ್ರಫಿಕ್ ಸೊಸೈಟಿ  ನಿಷೇಧಿಸಬೇಕು~ ಎಂದರು.

ಹಿರಿಯ ವಿಮರ್ಶಕ ಎ.ಈಶ್ವರಯ್ಯ ಮಾತನಾಡಿ, `ಡಿಜಿಟಲ್ ಫೋಟೋಗ್ರಫಿ ಹಳೆಯ ಫೋಟೋಗ್ರಫಿ ಶೈಲಿಯನ್ನು ಬದಲಿಸಿದೆ. ಈ ಸ್ಥಿತ್ಯಂತರದ ನಡುವೆ ವನ್ಯಜೀವಿ ಛಾಯಾಗ್ರಹಣ ಕೂಡ ಅಳಿವಿನಂಚಿನಲ್ಲಿದೆ~ ಎಂದರು.

`ಕೆಲವರು ವನ್ಯಜೀವಿಗಳಿಗೆ ಕ್ರೌರ್ಯವಿದೆ ಎನ್ನುತ್ತಾರೆ. ಅದು ಸರಿಯಲ್ಲ. ಪ್ರಾಣಿಗಳಲ್ಲಿ  ಕ್ರೌರ್ಯತೆ ಇರುವುದಿಲ್ಲ. ಹಾಗೇನಾದರೂ ಇದ್ದರೆ ಅದು ಮನುಷ್ಯರಲ್ಲಿ ಮಾತ್ರ. ವಿನಾಕಾರಣ ಕ್ರೌರ್ಯದ ಪ್ರದರ್ಶನ ಮಾಡುವವರು ಮನುಷ್ಯರು. ಪ್ರಾಣಿಗಳಲ್ಲಿ ಇರುವುದು ಸಹಜ ನಡವಳಿಕೆ ಮಾತ್ರ. ಹೀಗಾಗಿ ನಾವು ವನ್ಯಜೀವಿ ಪ್ರಪಂಚ ನೋಡುವ ವಿಧಾನವೂ ಬದಲಾಗಬೇಕು~ ಎಂದರು.

ಸೌತ್ ಕೆನರಾ ಫೋಟೋಗ್ರಾಫಿಕ್ ಅಸೋಸಿಯೇಷನ್ ಉಡುಪಿ ಘಟಕದ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, `ಬಣ್ಣ~ಸಂಘಟನೆಯ ದಿನೇಶ್ ಕಿಣಿ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.