ADVERTISEMENT

ವಲಸೆ ಕಾರ್ಮಿಕರ ಮಕ್ಕಳತ್ತ ಗಮನ: ಜಿಲ್ಲಾಧಿಕಾರಿ ರೇಜು

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 12:41 IST
Last Updated 10 ಜನವರಿ 2014, 12:41 IST

ಉಡುಪಿ: ‘ಪೊಲಿಯೋ ನಿರ್ಮೂಲನೆಗೆ ಸಾರ್ವಜನಿಕರು, ಅಧಿಕಾರಿಗಳು, ಸಂಘ– ಸಂಸ್ಥೆಗಳು, ಖಾಸಗಿ ಆಸ್ಪತ್ರೆಗಳ ಸಹಕಾರ ಅಗತ್ಯ’ ಎಂದು ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ರಜತಾದ್ರಿಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಜನವರಿ ೧೯ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ೫ ವರ್ಷದೊಳಗಿನ ೮೮,೪೮೨ ಮಕ್ಕಳಿಗೆ ಈ ಬಾರಿ ಪೋಲಿಯೋ ಹನಿ ಹಾಕುವ ಗುರಿ ಇದೆ. ಇದಕ್ಕಾಗಿ ೬೩೩ ಬೂತ್ ಗಳನ್ನು ತೆರೆಯಲಾಗುವುದು ಎಂದರು.

ಪೋಲಿಯೋ ಪ್ರಕರಣಗಳು ವಲಸೆ ಕಾರ್ಮಿಕರ ಮಕ್ಕಳಲ್ಲಿ ಕಂಡು ಬರುವ ಸಾದ್ಯತೆಯಿದ್ದು, ಇದಕ್ಕಾಗಿ ವಲಸೆ ಕಾರ್ಮಿಕರು ವಾಸಿಸುವ ಪ್ರದೇಶದಲ್ಲಿನ ಮಕ್ಕಳಿಗೆ  ಪೋಲಿಯೋ ಹನಿ ಹಾಕಲು ಹೆಚ್ಚಿನ ಗಮನ ಹರಿಸಲಾಗುವುದು. ಈಗಾಗಲೇ ಅಂತಹ ಪ್ರದೇಶಗಳನ್ನು ಗುರುತಿಸಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ರೈಲ್ವೆ ನಿಲ್ದಾಣ, ಸಿಟಿ ಬಸ್ ನಿಲ್ದಾಣ, ಸರ್ಕಾರಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣದಲ್ಲಿ  ಪೋಲಿಯೋ ಬೂತ್ ಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಪೋಲಿಯೋ ಕಾರ್ಯಕ್ರಮಕ್ಕೆ ಅಗತ್ಯವಿರುವ ವಾಹನಗಳನ್ನು ಒದಗಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಅವರು ಸೂಚನೆ ನೀಡಿದರು.

ಶಾಲಾ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಅವರ ಮನೆಯ ಮತ್ತು ನೆರೆಯ ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕಿಸಲು ತಿಳಿಸುವಂತೆ ಹಾಗೂ ಶಾಲಾ ಕೊಠಡಿಗಳಲ್ಲಿ ಲಸಿಕಾ ಕೇಂದ್ರಗಳಿದ್ದಲ್ಲಿ ಅದರ ಕೀಲಿಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ  ಮುಂಚಿತವಾಗಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

‘ದೇಶದಲ್ಲಿ ೨ ವರ್ಷಗಳಿಂದ  ಪೋಲಿಯೋ ಪ್ರಕರಣಗಳು ಪತ್ತೆಯಾಗಿಲ್ಲ ಆದರೆವಿದೇಶದಿಂದ ಬರುವ ಪೋಲಿಯೋ ಪೀಡಿತ ಮಕ್ಕಳಿಂದ ದೇಶದಲ್ಲಿ ಪೋಲಿಯೂ ಹರಡುವ ಸಾಧ್ಯತೆಯಿದ್ದು ಇದಕ್ಕಾಗಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಈ ಕುರಿತು ಕಡ್ಡಾಯ ತಪಾಸಣೆಯನ್ನು ಮಾಡಲಾಗುತ್ತಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಸತೀಶ್ ಚಂದ್ರ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಎ. ಪ್ರಭಾಕರ ಶರ್ಮಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿ. ಪ್ರಸನ್ನ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ರಾಮಚಂದ್ರ ಬಾಯರಿ ಉಪಸ್ಥಿತ­ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.